ಧಾರವಾಡ: ತಾಲೂಕಿನ ಯಾದವಾಡ-ಪುಡಕಲಕಟ್ಟಿ ಗ್ರಾಮಗಳ ಇರಕಾಳ ಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಹೆಸರಿನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾದವಾಡ ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕಳೆದ ಒಂದು ವರ್ಷದಿಂದ ಈ ಬಗ್ಗೆ ಕಾರ್ಖಾನೆಯವರು ಪ್ರಕ್ರಿಯೆ ನಡೆಸಿದರೂ ಗ್ರಾಮಸ್ಥರಿಗೆ ತಿಳಿದಿಲ್ಲ. ಇಬ್ಬರು ಎಂಜೆಂಟರ್ ಮೂಲಕ ರೈತರಿಂದ ಜಮೀನು ಖರೀದಿಸಿ ಈಗ ಎರಡು ತಿಂಗಳಿಂದ ಅಲ್ಲಿ ಕಾಮಗಾರಿ ಶುರು ಮಾಡಲಾಗಿದೆ. ಆದರೆ, ಕಬ್ಬು ಬೆಳೆಯದ ಈ ಪ್ರದೇಶದಲ್ಲಿ ಶುಗರ್ ಫ್ಯಾಕ್ಟರಿ ಏಕೆ ಎಂಬುದೇ ಗೊತ್ತಾಗುತ್ತಿಲ್ಲ. ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಗ್ರಾಪಂ ವತಿಯಿಂದ ಠರಾವ್ ಪಾಸ್ ಮಾಡಿ ಜಿಲ್ಲಾಡಳಿತವು ಈ ಕಾರ್ಖಾನೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಧಾರವಾಡ ತಾಲೂಕಿನಲ್ಲಿ ನೀರಾವರಿ ಸೌಲಭ್ಯವೇ ಇಲ್ಲ. ಮಳೆಯಾಶ್ರಿತ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಬಹು ಬೆಳೆಗಳ ಜತೆಗೆ ತರಕಾರಿ ಬೆಳೆದು ರೈತರು ಬದುಕುತ್ತಿದ್ದಾರೆ. ಸಮೀಪದ ಧಾರವಾಡ ನಗರಕ್ಕೆ ಬರುವ ಬಹುತೇಕ ತರಕಾರಿಯು ಮೃಣಾಲ ಶುಗಸ್೯ ವ್ಯಾಪ್ತಿಯಿಂದಲೇ ಬರುತ್ತಿದೆ. ಆದರೆ, ಅಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ಬಹುಬೆಳೆ ಪದ್ಧತಿ ನಾಶವಾಗಿ ಕೃಷಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂಬ ಭಯವಿದೆ. ಜೊತೆಗೆ ಸಕ್ಕರೆ ಫ್ಯಾಕ್ಟರಿಯಿಂದ ಕಪ್ಪು ಬೂದಿ ಹಾರಿ ಬೆಳೆಗಳು ಹಾಗೂ ಮಣ್ಣಿನ ಮೇಲೆ ಬಿದ್ದು ಬೆಳೆ ಹಾಗೂ ಮಣ್ಣಿನ ಫಲವತ್ತತೆ ನಾಶವಾಗಲಿದೆ. ಕೆಮಿಕಲ್ ದುರ್ನಾತ ಸಹ ಬರೀ ಯಾದವಾಡ ಮಾತ್ರವಲ್ಲದೇ ಸುತ್ತಲಿನ ಉಪ್ಪಿನ ಬೆಟಗೇರಿ, ಪುಡಕಲಕಟ್ಟಿ, ಶಿಬಾರಗಟ್ಟಿ ಗ್ರಾಮಗಳಿಗೂ ತೊಂದರೆ ಆಗಲಿದೆ. ವಾಯು ಮಾಲಿನ್ಯ ಉಂಟಾಗಿ ಜನರ ಆರೋಗ್ಯಕ್ಕೂ ಹಾನಿ ಆಗಲಿದೆ. ಅಂತರ್ಜಲಮಟ್ಟ ಕುಸಿದು ಜಲಮೂಲ ವಿಷಕಾರಿ ಆಗಲಿದೆ.ಬೆಳಗಾವಿ ಜಿಲ್ಲೆ ಮಲ್ಲಮ್ಮನ ಬೆಳವಡಿ ಬಳಿಯ ಹರ್ಷ ಶುಗಸ್೯ನಿಂದಲೂ ಸುತ್ತಲಿನ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸುತ್ತಲೂ ಗ್ರಾಮಸ್ಥರ ಒಪ್ಪಿಗೆ ಇಲ್ಲದೇ ಈ ಕಾರ್ಖಾನೆಯ ಕಾಮಗಾರಿ ನಡೆಸುತ್ತಿರುವುದು ತಪ್ಪು. ಕೂಡಲೇ ಈ ಕಾಮಗಾರಿ ನಿಲ್ಲಿಸದೇ ಹೋದಲ್ಲಿ ಗ್ರಾಪಂ ಸದಸ್ಯರು ಸಾಮೂಹಿಕವಾಗಿ ರಾಜಿನಾಮೆ ನೀಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಗ್ರಾಪಂ ಸದಸ್ಯ ಶಿವು ಬೆಂಡಿಗೇರಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಗಳಗಿ, ಉಪಾಧ್ಯಕ್ಷ , ಸದಸ್ಯರಾದ ಪಾರ್ವತಿ ಹಿರೇಮಠ, ಮಡಿವಾಳಪ್ಪ ದಿಂಡಲಕೊಪ್ಪ, ಮಂಜುನಾಥ ಬಂಡೆಪ್ಪನವರ, ಗ್ರಾಮದ ಹಿರಿಯರಾದ ಶಶಿಮೌಳಿ ಕುಲಕರ್ಣಿ, ಬಸವರಾಜ ಬೆಂಡಿಗೇರಿ, ದಾವಲ್ ಮುಲ್ಲಾನವರ, ಮೃತ್ಯುಂಜಯ ಹಿರೇಮಠ, ಪರಮೇಶ ಕೊಯಪ್ಪನವರ, ಆನಂದ ತಳವಾರ, ಆನಂದ ಕೇಶಗೊಂಡ, ಉಮೇಶ ಕೊಯಪ್ಪನವರ, ಶಿವಪುತ್ರ ಹಿರೇಮಠ ಮಹಾಂತೇಶ ಗಳಗಿ ಮತ್ತಿತರರು ಇದ್ದರು.