ಕಸ ವಿಲೇವಾರಿ ಘಟಕವಾಗಿರುವ ಯಾದವಾಡ ರಸ್ತೆ!

KannadaprabhaNewsNetwork |  
Published : Mar 12, 2025, 12:45 AM IST
 11ಡಿಡಬ್ಲೂಡಿ12,13ಕಸದ ಗುಡ್ಡೆಯಾಗಿರುವ ಯಾದವಾಡ ರಸ್ತೆ | Kannada Prabha

ಸಾರಾಂಶ

ಇತ್ತೀಚೆಗೆ ಕಸದ ಜೊತೆಗೆ ಅದಕ್ಕೆ ಬೆಂಕಿ ಸಹ ಹಚ್ಚಲಾಗುತ್ತಿದೆ. ಇದು ಸುತ್ತಲೂ ಹೊಗೆಯಿಂದ ತುಂಬಿ ವಾತಾವರಣ ಕಲುಷಿತವಾಗುತ್ತಿದೆ.

ಧಾರವಾಡ: ನಗರದಲ್ಲಿ ಮನೆ ಮನೆಯಿಂದ ಸಂಗ್ರಹಿಸಿರುವ ಕಸವನ್ನು ಅಧಿಕೃತವಾಗಿ ವಿಲೇವಾರಿ ಮಾಡುವ ಸ್ಥಳ ಹೊಸಯಲ್ಲಾಪೂರ. ಆದರೆ, ಅನಧಿಕೃತವಾಗಿ ಕಸ ವಿಲೇವಾರಿ ಮಾಡುವ ಹಲವು ಸ್ಥಳಗಳೂ ನಗರದಲ್ಲಿ ಸೃಷ್ಟಿಯಾಗಿವೆ.

ಇತ್ತೀಚಿನ ದಿನಗಳಲ್ಲಿ ಧಾರವಾಡ ಬಹುವಾಗಿ ಬೆಳೆಯುತ್ತಿದೆ. ಅಕ್ರಮ ಸಕ್ರಮ ಬಡಾವಣೆಗಳೇ ಹೆಚ್ಚು ಬೆಳೆಯುತ್ತಿದ್ದು, ಈ ಬಡಾವಣೆಗಳ ಮನೆಗಳಿಂದ ಸೃಷ್ಟಿಯಾದ ಕಸ ವಿಲೇವಾರಿ ಆಗುವುದು ರಸ್ತೆ ಬದಿ. ಅದರಲ್ಲೂ ಇತ್ತೀಚೆಗೆ ಯಾದವಾಡ ರಸ್ತೆಯ ಹಾದಿ ಬಸವಣ್ಣನ ಎದುರಿನ ದೊಡ್ಡ ಕಂದಕದಲ್ಲಿ ಕಸ ವಿಲೇವಾರಿ ಆಗುತ್ತಿದೆ.

ಕಮಲಾಪುರ ಸುತ್ತಲೂ ಅಕ್ರಮ ಬಡಾವಣೆಗಳೇ ಬೆಳೆದಿವೆ. ಕಪ್ಪು ಮಣ್ಣು ಸಹ ಎನ್ನದೇ ಅವೈಜ್ಞಾನಿಕವಾಗಿ ಮನೆಗನ್ನು ನಿರ್ಮಿಸಿ ಹತ್ತಾರು ಬಡಾವಣೆಗಳು ತಲೆ ಎತ್ತಿವೆ. ಈ ಬಡಾವಣೆಗಳಿಗೆ ಪಾಲಿಕೆ ವಾಹನ ಕಸ ಸಂಗ್ರಹಣೆಗೆ ಬರೋದಿಲ್ಲ. ಈ ಕಾರಣ, ರಾತ್ರಿ ಹಾಗೂ ನಸುಕಿನಲ್ಲಿ ಜನರು ಸಮೀಪದ ಯಾದವಾಡ ರಸ್ತೆಯ ಬದಿ ಚೆಲ್ಲಿ ಹೋಗುತ್ತಿದ್ದಾರೆ. ಮನೆಯ ಹಸಿ-ಒಣ ತ್ಯಾಜ್ಯ ಮಾತ್ರವಲ್ಲದೇ ಬೀಳಿಸಿದ ಮನೆಯ ತ್ಯಾಜ್ಯ, ಹಳೆಯ ವಸ್ತುಗಳು ಸೇರಿದಂತೆ ಸತ್ತ ನಾಯಿ, ಪ್ರಾಣಿಗಳ ಕಳೇಬರ ಸಹ ಇಲ್ಲೇ ಬೀಳುತ್ತಿದೆ.

ಇತ್ತೀಚೆಗೆ ಕಸದ ಜೊತೆಗೆ ಅದಕ್ಕೆ ಬೆಂಕಿ ಸಹ ಹಚ್ಚಲಾಗುತ್ತಿದೆ. ಇದು ಸುತ್ತಲೂ ಹೊಗೆಯಿಂದ ತುಂಬಿ ವಾತಾವರಣ ಕಲುಷಿತವಾಗುತ್ತಿದೆ. ಬೆಳಗಿನಿಂದ ಸಂಜೆ ವರೆಗೂ ನಾವು ಹೊಲಗಳಲ್ಲಿ ಇರುತ್ತೇವೆ. ಆಗ, ಯಾರೊಬ್ಬರೂ ಕಸ ಚೆಲ್ಲುವುದಿಲ್ಲ. ರಾತ್ರಿ ಅಥವಾ ನಸುಕಿನಲ್ಲಿ ಬಂದು ಬೈಕ್‌, ಕಾರು ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಚೆಲ್ಲಿ ಹೋಗುತ್ತಾರೆ. ಇತ್ತೀಚೆಗೆ ಹೊಸ ಎಪಿಎಂಸಿ ಇದೇ ರಸ್ತೆಯಲ್ಲಿದ್ದು, ಅಲ್ಲಿಯ ಕೊಳೆತ ತರಕಾರಿ ಹಾಗೂ ಇತರೆ ವಸ್ತುಗಳನ್ನು ಇದೇ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ಕೆಟ್ಟ ವಾಸನೆ ಬರುತ್ತಿದೆ ಎಂದು ಕಮಲಾಪುರದ ರೈತರೊಬ್ಬರು ಬೇಸರ ವ್ಯಕ್ತಪಡಿಸಿದರು.

ಇದೇ ರೀತಿಯ ಸ್ಥಿತಿ ಕವಲಗೇರಿ ರಸ್ತೆ, ಕೆಲಗೇರಿ-ಆಂಜನೇಯನಗರ ದಾಟಿ ಮುಗದ ರಸ್ತೆ, ಸವದತ್ತಿ ರಸ್ತೆಗಳಲ್ಲೂ ಇದೆ. ಈ ಮೊದಲು ಇಂತಹ ಕೃತ್ಯ ಎಸಗುವವರಿಗೆ ದಂಡ ವಿಧಿಸಲಾಗುತ್ತಿತ್ತು. ಇದೀಗ ಅದು ಬಂದ್‌ ಆಗಿದ್ದರಿಂದ ಯಾರು ಎಲ್ಲಿಯಾದರೂ ಕಸ ಚೆಲ್ಲುವಂತಾಗಿದೆ. ಇನ್ನಾದರೂ ರಸ್ತೆ ಬದಿ ಕಸ ಚೆಲ್ಲುವ ಸಂಸ್ಕೃತಿ ನಿಲ್ಲುವಂತೆ ಜನರಲ್ಲಿ ಜಾಗೃತಿ ಸಹ ಮೂಡಬೇಕಿದೆ.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ