ಯಾದಗಿರಿ: 7 ತಿಂಗಳಲ್ಲಿ 30 ಹೆಣ್ಣು ಭ್ರೂಣ ಹತ್ಯೆ!

KannadaprabhaNewsNetwork |  
Published : Mar 18, 2026, 02:00 AM ISTUpdated : Mar 18, 2026, 12:09 PM IST
Yadgiri

ಸಾರಾಂಶ

ಗಂಡು ಮಗುವಿನ ಹಂಬಲದಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಗಳನ್ನು ಹೊಸಕಿ ಹಾಕುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, 7 ತಿಂಗಳಲ್ಲಿ 30 ಗರ್ಭಪಾತ ಮಾಡಲಾಗಿದೆ ಎಂಬ ವರದಿ ಬಹಿರಂಗವಾಗಿದೆ.

ಆನಂದ್ ಎಂ. ಸೌದಿ

 ಯಾದಗಿರಿ :  ಗಂಡು ಮಗುವಿನ ಹಂಬಲದಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಗಳನ್ನು ಹೊಸಕಿ ಹಾಕುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, 7 ತಿಂಗಳಲ್ಲಿ 30 ಗರ್ಭಪಾತ ಮಾಡಲಾಗಿದೆ ಎಂಬ ವರದಿ ಬಹಿರಂಗವಾಗಿದೆ.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಅವರ ಸೂಚನೆ ಮೇರೆಗೆ ಹೆಣ್ಣು ಭ್ರೂಣ ಹತ್ಯೆ ಕುರಿತು ತನಿಖೆ ನಡೆಸಲು ರಚಿತಗೊಂಡ ಆರೋಗ್ಯ ಇಲಾಖೆಯ ಸಮಿತಿಯೊಂದು ವರದಿ ಸಲ್ಲಿಸಿದೆ. ಇದರ ಪ್ರಕಾರ 2025ರ ಏಪ್ರೀಲ್‌ನಿಂದ ನವೆಂಬರ್‌ವರೆಗೆ ಯಾದಗಿರಿ ಜಿಲ್ಲೆಯಲ್ಲಿ 35 ಗರ್ಭಪಾತ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 5 ಪ್ರಕರಣಗಳನ್ನು ವೈದ್ಯಕೀಯ ಆಧಾರಿತ, ಸ್ವಾಭಾವಿಕ ಎಂದು ಗುರುತಿಸಲಾಗಿದೆಯಾದರೂ, ಉಳಿದ 30 ಪ್ರಕರಣಗಳು ಹೆಣ್ಣು ಶಿಶು ಎಂಬ ಕಾರಣಕ್ಕೆ ಉದ್ದೇಶಪೂರ್ವಕ ಗರ್ಭಪಾತ ಎಂಬಂಶಗಳು ಪತ್ತೆಯಾಗಿವೆ.

ಇಲಾಖೆ ನಡೆಸಿದ ಈ ತನಿಖೆಯಲ್ಲಿ ಈ 30 ಪ್ರಕರಣಗಳು ಕಂಡುಬಂದಿವೆಯಾದರೂ, ಇಂತಹ ಅನೇಕ ಪ್ರಕರಣಗಳು ತೆರೆಮರೆಗೆ ಸರಿದಿವೆ. ಸದ್ದಿಲ್ಲದೆ ಹೆಣ್ಣು ಶಿಶುಗಳು ಗರ್ಭದಲ್ಲೇ ಉಸಿರಾಟ ನಿಲ್ಲಿಸುವ ಘಟನೆಗಳು ಮನುಕುಲದ ತಲೆ ತಗ್ಗಿಸುವಂತೆ ಮಾಡಿದೆ.

2026ರ ಜ.19ರಂದು ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಸಂಜೀವಕುಮಾರ್ ರಾಯಚೂರಕರ್‌ ನೇತೃತ್ವದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಕಟ್ಟೀಮನಿ ಹಾಗೂ ಪ್ರಸೂತಿ ತಜ್ಞರಾದ ಡಾ.ರಾಜೇಶ್ವರಿ ಗುತ್ತೇದಾರ್‌ ಅವರನ್ನೊಳಗೊಂಡ ತಂಡ ರಚಿಸಿ, ಉದ್ದೇಶಪೂರ್ವಕ ಗರ್ಭಪಾತ ಪ್ರಕರಣಗಳ ಪತ್ತೆಗೆ ತನಿಖೆ ಕೈಗೊಂಡು ವರದಿ ನೀಡುವಂತೆ ಸೂಚಿಸಲಾಗಿತ್ತು. 

ನಕಲಿ, ಖಾಸಗಿ ವೈದ್ಯರ ಸಾಥ್‌: 

3, 4, 5 ಹಾಗೂ 6ನೇ ಹೆಣ್ಣು ಮಗುವಿನ ಜನನದ ನಂತರ, ಗಂಡು ಮಗುವಿನ ಹಂಬಲದಿಂದ ಗರ್ಭ ಧರಿಸಿದ ಕೆಲವು ಮಹಿಳೆಯರು, ಭ್ರೂಣಪತ್ತೆ ಮಾಡಿಸಿಕೊಂಡಾಗ ಹೆಣ್ಣು ಶಿಶು ಎಂದು ಗೊತ್ತಾದಾಕ್ಷಣ, ಕುಟುಂಬದ ಸದಸ್ಯರ ಒತ್ತಾಯಕ್ಕೆ ಮಣಿದು ಬೇರೆ ಬೇರೆ ಕಾರಣಗಳನ್ನು ನೀಡಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ನೋಂದಾಯಿತರಲ್ಲದ ವೈದ್ಯರ ಕಡೆ ಹಾಗೂ ವೈದ್ಯಕೀಯ ಸಲಹೆ ಇಲ್ಲದಿದ್ದರೂ ಖಾಸಗಿ ಕಡೆಗಳಲ್ಲಿ ಗರ್ಭಪಾತ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಪಕ್ಕದ ರಾಜ್ಯ, ಇತರ ಜಿಲ್ಲೆಗಳಲ್ಲಿ ತಪಾಸಣೆ:

ಯಾದಗಿರಿ ಜಿಲ್ಲೆಯ ಕೆಲವು ಮಹಿಳೆಯರು ರಾಯಚೂರು ಜಿಲ್ಲೆಯ ಮುದಗಲ್, ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ವೈದ್ಯಕೀಯ ತಪಾಸಣೆಗೆಂದು ತೆರಳಿ ಅಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಕೆಲವರು ನೆರೆಯ ಮಹಾರಾಷ್ಟ್ರದಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೆಡಿಕಲ್ ಟರ್ಮಿನೇಷನ್‌ ಆಫ್‌ ಪ್ರಗ್ರೆನ್ಸಿ (ಎಂಟಿಪಿ) ಕಿಟ್‌ಗಳ ಬೇಕಾಬಿಟ್ಟಿಯಾಗಿ, ಅವೈಜ್ಞಾನಿಕ ಮಾರಾಟಕ್ಕೆ ಕಡಿವಾಣ ಹಾಕುವ ಬಗ್ಗೆಯೂ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

 ಗರ್ಭಪಾತ ಪ್ರಕರಣಗಳ ತನಿಖೆಗಾಗಿ ಆದೇಶಿಸಲಾಗಿತ್ತು. ಆರೋಗ್ಯ ಇಲಾಖೆ ನೀಡಿದ ವರದಿ ಆಘಾತ ಮೂಡಿಸಿದೆ. 2025ರ ಏಪ್ರೀಲ್‌ನಿಂದ ನವೆಂಬರ್‌ವರೆಗೆ 3 ಹೆಣ್ಣುಮಕ್ಕಳ ನಂತರ 4ನೇ ಮಗುವಿನ ಜನನ ಪೂರ್ವದಲ್ಲಿ 35 ಗರ್ಭಪಾತ ಪ್ರಕರಣಗಳು ಕಂಡುಬಂದಿವೆ.

- ಲವೀಶ ಒರಡಿಯಾ, ಸಿಇಒ, ಯಾದಗಿರಿ ಜಿಲ್ಲಾ ಪಂಚಾಯಿತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’
ಇಂದಿನಿಂದ ಮೇ 13ರವರೆಗೆ ದ್ವಿತೀಯ ಪಿಯು ಪರೀಕ್ಷೆ -2