-ಆ.16 ರ ಸಂಜೆ 4 ರವರೆಗೆ ಜಿಲ್ಲೆಯ ತಾಲೂಕುವಾರು ಪ್ರಗತಿ ವರದಿ । ಜಿಲ್ಲೆಯಲ್ಲಿ ಶೇ. 97.08 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಆರಂಭವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಬಿಎಲ್‍ಒ ಗಳ ಮೂಲಕ ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆ (ಎನುಮರೇಷನ್ ಫಾರಂ-ಇಎಫ್) ವಿತರಿಸುವ ಕಾರ್ಯವು ಚುರುಕಿನಿಂದ ಸಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಲಭ್ಯವಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಶೇ. 97.08% ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ.ಮನೆ-ಮನೆಗೆ ಗಣತಿ ನಮೂನೆ ನೀಡುವುದು ಹಾಗೂ ಡಿಜಿಟೈಸೇಶನ್ ಕಾರ್ಯವು ಕಳೆದ ಜೂನ್ 30 ರಿಂದ ಆರಂಭವಾಗಿದ್ದು, ಆಗಸ್ಟ್ 17 ರವರೆಗೆ ನಡೆಯಲಿದೆ. ಜೂನ್ 16 ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 10,53,236 ಮತದಾರರು ದಾಖಲಾಗಿದ್ದಾರೆ.
ಮನೆ-ಮನೆ ಸಮೀಕ್ಷೆಯ ವೇಳೆ ಜಿಲ್ಲೆಯಲ್ಲಿ ಒಟ್ಟು 1,88,900 ಎಎಸ್‍ಡಿಡಿಒ ಮತದಾರರನ್ನು ಗುರುತಿಸಲಾಗಿದ್ದು, ಇದರಲ್ಲಿ ಗೈರು ಹಾಜರಾದವರು 17,261, ಶಾಶ್ವತವಾಗಿ ಸ್ಥಳಾಂತರಗೊಂಡವರು 1,16,646, ಮೃತ ಮತದಾರರು 29,027, ಈಗಾಗಲೇ ನೋಂದಾಯಿತರಾಗಿರುವವರು 22,483, ಇತರೆ 3,483 ಸೇರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,134 ಪಾರ್ಟ್‍ಗಳಲ್ಲಿ ಈ ಮಹತ್ವದ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಸಂಪೂರ್ಣ ಡಿಜಿಟೈಸೇಶನ್ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಚುನಾವಣಾ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ತಿಳಿಸಿದ್ದಾರೆ.
* ಯಾದಗಿರಿ, ಗುರುಮಠಕಲ್ ಮತಕ್ಷೇತ್ರಗಳ ವರದಿ
38-ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,54,147 ಮತದಾರರು ದಾಖಲಾಗಿದ್ದಾರೆ. ಒಟ್ಟು ಮತದಾರರ ಪೈಕಿ ಶೇ. 100 ರಷ್ಟು ಎಣಿಕೆ ನಮೂನೆಗಳನ್ನು (ಇಎಫ್) ಈಗಾಗಲೇ ಯಶಸ್ವಿಯಾಗಿ ವಿತರಿಸಲಾಗಿದೆ. ಇದರಲ್ಲಿ 2,06,976 (ಶೇ. 100%) ಎಣಿಕೆ ನಮೂನೆಗಳನ್ನು ಡಿಜಿಟೈಸ್ ಮಾಡಲಾಗಿದೆ ಹಾಗೂ 01 (ಶೇ.0.00%) ಎಣಿಕೆ ನಮೂನೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ. ಪರಿಷ್ಕರಣೆ ವೇಳೆ ಒಟ್ಟು 47,171 ಮತದಾರರನ್ನು (ಎಎಸ್‍ಡಿಡಿಓ) ಗುರುತಿಸಲಾಗಿದೆ. ಇದರಲ್ಲಿ ಗೈರುಹಾಜರಾದ 4,991, ಶಾಶ್ವತವಾಗಿ ಸ್ಥಳಾಂತರಗೊಂಡವರು 27,542, ಮೃತಪಟ್ಟವರು 6,404, ಈಗಾಗಲೇ ನೋಂದಾಯಿತರಾದವರು 5,552, ಇತರೆ 2,682 ಮತದಾರರು ಸೇರಿದ್ದಾರೆ.
ಮನೆ-ಮನೆ ಸಮೀಕ್ಷೆ ಮತ್ತು ಡಿಜಿಟೈಸೇಶನ್ ಕಾರ್ಯವು ನಿಗದಿತ ಅವಧಿಯೊಳಗೆ ಮುಕ್ತಾಯಗೊಳ್ಳಲಿದ್ದು, ಮತದಾರರ ಗಣತಿ ನಮೂನೆಗಳ ವಿತರಣೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಲಹೆಗಳು ಮತ್ತು ಅಭಿಪ್ರಾಯಗಳು ಇದ್ದಲ್ಲಿ ಸಾರ್ವಜನಿಕರು ಅಥವಾ ರಾಜಕಿಯ ಪಕ್ಷಗಳ ಪ್ರತಿನಿಧಿಗಳು ಸಹಾಯಕ ಆಯುಕ್ತರ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ಯಾದಗಿರಿ ಉಪ ವಿಭಾಗದ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
16ವೈಡಿಆರ್10 : ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾಧಿಕಾರಿ, ಯಾದಗಿರಿ.