ಜಿಲ್ಲೆಯ ಸುರಪುರ ನಗರದಲ್ಲಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ-150 ಹಾಯ್ದು ಹೋಗಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದ 16 ಗುಂಟೆ ಭೂಮಿ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಖರೀದಿ ತೋರಿಸಿದ ಕೆಲವರು, ನಗರಸಭೆ ವ್ಯಾಪ್ತಿ ಖಾಸಗಿ ಆಸ್ತಿಯನ್ನಾಗಿಸಿಕೊಂಡಿದ್ದಾರೆ.
ಆನಂದ್ ಎಂ. ಸೌದಿ
ಯಾದಗಿರಿ : ಜಿಲ್ಲೆಯ ಸುರಪುರ ನಗರದಲ್ಲಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ-150 ಹಾಯ್ದು ಹೋಗಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದ 16 ಗುಂಟೆ ಭೂಮಿ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಖರೀದಿ ತೋರಿಸಿದ ಕೆಲವರು, ನಗರಸಭೆ ವ್ಯಾಪ್ತಿ ಖಾಸಗಿ ಆಸ್ತಿಯನ್ನಾಗಿಸಿಕೊಂಡಿದ್ದಾರೆ.
ಸದರಿ ಜಾಗ ಕಾಯ್ದಿಟ್ಟ ಅರಣ್ಯದ ಸ್ವತ್ತು ಎಂದು ಗೊತ್ತಿದ್ದರೂ ಒತ್ತಡಕ್ಕೆ ಮಣಿದು ನಗರಸಭೆ ಅಧಿಕಾರಿಗಳು ಖರೀದಿದಾರರಿಗೆ ಕಾನೂನುಬಾಹಿರವಾಗಿ ಮ್ಯೂಟೇಶನ್ ಮಾಡಿಕೊಟ್ಟಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದೆ.
ಅರಣ್ಯ ಪ್ರದೇಶದ ಈ ಜಾಗವನ್ನೀಗ ಕೆಲವು ರಾಜಕೀಯ ಮುಖಂಡರು ಖರೀದಿಸಿದ್ದು, ಅವರ ಪ್ರಭಾವಕ್ಕೆ ಮಣಿದು ನಗರಸಭೆ ಪೌರಾಯುಕ್ತರು ಮ್ಯೂಟೇಶನ್ ಮಾಡಿಕೊಟ್ಟಿದ್ದಾರೆ ಎಂದು ಸುರಪುರ ಸಾಮಾಜಿಕ ಕಾರ್ಯಕರ್ತ ಮುರುಳೀಧರ್, ಯಾದಗಿರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಸುರಪುರ ತಾಲೂಕಿನ ಹಸನಾಪುರದ ಸೀಮಾಂತರದಲ್ಲಿ ಬರುವ, ದೀವಳಗುಡ್ಡ ಗ್ರಾಮದ ಸರ್ವೆ ನಂ. 6ರ ಸುಮಾರು 216 ಎಕರೆ ಪ್ರದೇಶವನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಸಂರಕ್ಷಿಸಲಾಗಿದೆ. ಇದರಲ್ಲಿನ 16 ಗುಂಟೆ ಜಾಗ ನಕಲಿ ದಾಖಲೆ ಸೃಷ್ಟಿಸಿ ಕೆಲವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಪಿಐಎಲ್ ವಿಚಾರಣೆ ನಡೆಸಿದ್ದ ನ್ಯಾಯಾಲಯ, ವಿವಾದಕ್ಕೊಳಗಾದ ಜಾಗ ಕಾಯ್ದಿಟ್ಟ ಅರಣ್ಯ ಭಾಗವೇ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ಅರಣ್ಯ ಇಲಾಖೆಗೆ ಆದೇಶಿಸಿತ್ತು.
ಅದರಂತೆ, ಜಂಟಿ ಸರ್ವೆ ನಡೆಸಿದಾಗ ಸದರಿ ಜಾಗ ಕಾಯ್ದಿಟ್ಟ ಅರಣ್ಯ ಪ್ರದೇಶದ ಭಾಗವಾಗಿದ್ದು, ಒತ್ತುವರಿದಾರರ ಹಾಗೂ ಅಕ್ರಮ ಕಟ್ಟಡ ನಿರ್ಮಿಸಿದವರ ವಿರುದ್ಧ ಇಲಾಖೆ ದೂರು ದಾಖಲಿಸಿದೆ ಎಂದು ವಲಯ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಡಿಸೆಂಬರ್ 2024ರಲ್ಲಿ ವರದಿ ನೀಡಿದ್ದಾರೆ. ಒತ್ತುವರಿ ಹಾಗೂ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಲ್ಲದೆ ಯಾವುದೇ ನೋಂದಣಿ- ಮ್ಯೂಟೇಶನ್ ವಹಿವಾಟು ನಡೆಸದಂತೆ ನೋಂದಣಾಧಿಕಾರಿ- ನಗರಸಭೆ ಪೌರಾಯುಕ್ತರಿಗೂ ಅರಣ್ಯ ಇಲಾಖೆ ಪತ್ರ ಕೂಡ ಬರೆದಿತ್ತು. ಆದರೀಗ, ಮೂರೂವರೆ ತಿಂಗಳ ಹಿಂದೆ (2024 ನವೆಂಬರ್) ಮಹೇಶ ಯಾದವ್ ಹಾಗೂ ಪ್ರಕಾಶ ಯಾದವ್ ಎಂಬುವರಿಗೆ ಎರಡು ಹಿಸ್ಸೆಗಳಲ್ಲಿ ಆಸ್ತಿ ನೋಂದಣಿ ಆಗಿದೆ. ಇದರಿಂದ ಸರ್ಕಾರಿ ಅಧಿಕಾರಿಗಳಿಂದಲೇ ಸರ್ಕಾರಕ್ಕೆ ವಂಚನೆ ಎಸಗಿದಂತೆ ಆಗಿದೆ ಎಂದು ಮುರುಳೀಧರ್ ದೂರಿನಲ್ಲಿ ತಿಳಿಸಿದ್ದಾರೆ. ಈ ನಡುವೆ ಶುಕ್ರವಾರ ಇಲ್ಲಿ ಜೆಸಿಬಿ ಮೂಲಕ ಗುಡ್ಡದ ಮಣ್ಣು ತೆರವಿಗೆ ಮುಂದಾಗಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆದು, ಸ್ಥಗಿತಗೊಳಿಸಿದ್ದಾರೆ.
ಈ ಆಸ್ತಿಗಳು ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿವೆ. ಸರ್ವೆ ಇಲಾಖೆ ನೀಡಿದ ವರದಿ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಒತ್ತುವರಿ, ಅಕ್ರಮ ಕಟ್ಟಡಗಳ ನಿರ್ಮಾಣ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ಮ್ಯೂಟೇಶನ್ ಮಾಡಿದ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಸೋಮವಾರ ಜಂಟಿ ಸರ್ವೆ ನಡೆಸಲಾಗುವುದು.
- ಸುನಿಲಕುಮಾರ್, ವಲಯ ಅರಣ್ಯಾಧಿಕಾರಿ
ಸದರಿ ಆಸ್ತಿಗಳು 51-52 ವರ್ಷ ಹಿಂದಿನದಾಗಿದ್ದು, 1972 -73ನೇ ಸಾಲಿನಲ್ಲಿ ಮಾಲೀಕತ್ವ ಹೊಂದಿವೆ. 1995-96ನೇ ಸಾಲಿನಲ್ಲಿ ದೇವಿಕೇರಾ ಗ್ರಾಪಂ ಆಸ್ತಿಗಳು ನಗರಸಭೆಗೆ ಹಸ್ತಾಂತರವಾಗಿವೆ. ದಾಖಲಾತಿ ನೋಡಿಯೇ ಮ್ಯೂಟೇಶನ್ ಮಾಡಲಾಗಿದೆ.
ಜೀವನಕುಮಾರ, ಪೌರಾಯುಕ್ತ, ಸುರಪುರ ನಗರಸಭೆ