;Resize=(412,232))
ಆನಂದ್ ಎಂ. ಸೌದಿ
ಯಾದಗಿರಿ : ನಗರ ಸೌಂದರ್ಯೀಕರಣಕ್ಕೆಂದು ಕೈಗೆತ್ತಿಕೊಂಡ, ಬೀದಿದೀಪಗಳ ಅಳವಡಿಕೆ ಹೆಸರಲ್ಲಿ ಕೋಟ್ಯಂತರ ರುಪಾಯಿಗಳ ಹಣ ಲೂಟಿ ಹೊಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಯಾದಗಿರಿ ನಗರ ವ್ಯಾಪ್ತಿಯಲ್ಲಿ ಬರುವ ಮುಖ್ಯ ರಸ್ತೆಗಳ ಡಿವೈಡರ್ ಮಧ್ಯೆದಲ್ಲಿರುವ ವಿದ್ಯುತ್ ಬೀದಿ ದೀಪಗಳ ಕಂಬಗಳಿಗೆ ಪೇಂಟಿಂಗ್, ಎಲ್‌ಇಡಿ ಮತ್ತು ಸ್ಟ್ರಿಪ್ ಲೈಟ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 1 ಕೋಟಿ ರು.ಗಳ ವೆಚ್ಚದ ಈ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.)ಕ್ಕೆ ವಹಿಸಲಾಗಿತ್ತು.
ಆದರೆ, ಈ ಕಾಮಗಾರಿಗಳ ಕೆಲವು ದಿನಗಳ ಮಟ್ಟಿಗೆ ಮಾತ್ರ ಎಂಬಂತೆ ಮಿಂಚಿ ಮರೆಯಾದವು. ಕೆಲವು ದಿನಗಳ ಕಾಲ ರಾತ್ರಿ ಝಗಮಗಿಸುತ್ತಿದ್ದ ದೀಪಗಳು ಕತ್ತಲೆಯಲ್ಲಿ ಕರಗುತ್ತಿವೆ. ಕಂಬಗಳಿಗೆ ಬಡಿದ ಬಣ್ಣ ತಮ್ಮ ಮೂಲರೂಪಕ್ಕೆ ತಿರುಗತೊಡಗಿವೆ. ರಾಷ್ಟ್ರಾಭಿಮಾನ ಉಕ್ಕಿ ಹರಿಸುತ್ತಿದ್ದ ಕೇಸರಿ-ಬಿಳಿ-ಹಸಿರು ರಂಗುರಂಗಿನ ಸ್ಟ್ರಿಪ್ ಲೈಟುಗಳು ಕಣ್ಮುಚ್ಚಿವೆ.
ಬೀದಿದೀಪಗಳಿಗೆ ಝಗಮಗಿಸುವ ಕೇಸರಿ-ಬಿಳಿ-ಹಸಿರು ಬಣ್ಣಗಳ -ರಂಗುರಂಗಿನ ಎಲ್ಇಡಿ ಬಲ್ಬಿನ ಸರಪಳಿ ಸುತ್ತಿ, ಎಲ್‌ಇಡಿ ಬಲ್ಬುಗಳ ಅಳವಡಿಸಿ, "ಯಾದಗಿರಿ ಶೈನಿಂಗ್" ಅನ್ನೋ ರೀತಿಯಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತಹ ವಾತಾವರಣ ಸೃಷ್ಟಿಸಲಾಗಿತ್ತು. ಸೆಲ್ಫೀಗಳ ಹೊಡೆದುಕೊಂಡು ಕೆಲವು ಅಭಿವೃದ್ಧಿಯ ಹೊಳೆಯೇ ಹರಿಯಿತು ಎಂದು ಕೆಲವರು ಸಂಭ್ರಮಿಸಿದ್ದರು. ವಾಸ್ತವದಲ್ಲಿ, ಈ ಕಾಮಗಾರಿ ಕೋಟ್ಯಂತರ ರುಪಾಯಿಗಳ ಲೂಟಿ ಹೊಡೆಯುವಲ್ಲಿನ ಹಿಂದಿನ ದುರುದ್ದೇಶವಾಗಿತ್ತು ಎನ್ನುತ್ತಾರೆ ಕರವೇ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ್.
120 ವ್ಯಾಟಿನ, ಒಂದು ಎಲ್‌ಇಡಿ ಸ್ಟ್ರೀಟ್ಲೈಟಿಗೆ 10,563 ರು.ಗಳ ಲೆಕ್ಕ ತೋರಿಸಲಾಗಿದೆ. ಇಂತಹ 300 ಸ್ಟ್ರೀಟ್‌ಲೈಟ್‌ಗಳನ್ನು ಅಳವಡಿಲಾಗಿದೆ ಎಂದು 31.68 ಲಕ್ಷ ರು.ಗಳ ಖರ್ಚು ತೋರಿಸಲಾಗಿದೆ. ಆನ್‌ಲೈನ್ ಅಥವಾ ಮಾರುಕಟ್ಟೆಯಲ್ಲಿ ಒಂದಕ್ಕೆ 1 ಸಾವಿರ ರು.ಗಳಿಂದ ಆರಂಭಗೊಳ್ಳುತ್ತವೆ. ಸಾವಿರ ರು.ಗಳ ಒಂದು ದೀಪಕ್ಕೆ 10,563 ರು.ಗಳ ಲೆಕ್ಕ ತೋರಿಸಲಾಗಿದೆ.
9 ವ್ಯಾಟಿನ, 3316 ಮೀಟರ್ ಎಲ್ಇಡಿ ಸ್ಟ್ರಿಪ್ ಲೈಟಿಗೆ 44.95 ಲಕ್ಷ ರು.ಗಳ ವೆಚ್ಚ ತೋರಿಸಲಾಗಿದೆ. ಬಿಐಎಸ್ ಅನುಮೋದಿತ ಈ ಸ್ಟ್ರಿಪ್ ಲೈಟುಗಳು ಹಾಳಾದಲ್ಲಿ ಎರಡು ವರ್ಷಗಳ ಕಾಲ ವಾರಂಟಿ ಹೇಳಲಾಗಿತ್ತು. ಇದೂ ಸಹ, ಆನ್‌ಲೈನ್/ಮಾರುಕಟ್ಟೆಯಲ್ಲಿ 20 ಮೀಟರ್‌ನ ಒಂದು ಸ್ಟ್ರಿಪ್‌ಗೆ 500 ರು.ಗಳಿಂದ 1200 ರು.ಗಳಿಗೆ ಮಾರಾಟವಾಗುತ್ತಿವೆ. ಬೀದಿದೀಪಗಳಿಗೆ 3,316 ಮೀಟರ್ ಎಲ್ಇಡಿ ಸ್ಟ್ರಿಪ್ ಲೈಟಿಗೆ ಸುತ್ತಿಸಲಾಗಿದೆ ಎಂದು ತೋರಿಸಿ, 44.95 ಲಕ್ಷ ರು.ಗಳ ವೆಚ್ಚ ತೋರಿಸಲಾಗಿದೆ. 1 ಕೋಟಿ ರು.ಗಳ ವೆಚ್ಚದ ಬಿಲ್ ಪಾವತಿಸುವಂತೆ ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳು ಸಲ್ಲಿಸಿದ "ಬಿಲ್ವಿದ್ಯೆ" ಕಂಡು ಮೇಲಧಿಕಾರಿಗಳೇ ದಂಗಾಗಿದ್ದಾರೆ.
ಕೆ.ಆರ್.ಐ.ಡಿ.ಎಲ್. ವ್ಯಾಪ್ತಿಗೆ ಕೆಲವೊಂದು ಕಾಮಗಾರಿಗಳ ನೀಡಲು ಬರುವುದಿಲ್ಲವಾದರೂ, ನಿಯಮಗಳನ್ನೇ ಬದಲಾಯಿಸುವ ರಾಜಕೀಯ ಪ್ರಭಾವ, ಅಡ್ವಾನ್ಸ್ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಕೆ.ಆರ್.ಐ.ಡಿ.ಎಲ್.ಗೇ ಕಾಮಗಾರಿಗಳನ್ನು ನೀಡುವಲ್ಲಿ ಆಸಕ್ತಿ ತೋರುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಭೀಮುನಾಯಕ್ ಆರೋಪಿಸುತ್ತಾರೆ. ಬೀದಿದೀಪಗಳ ಹೆಸರಲ್ಲಿ ನಡೆದಿರುವ ಕೋಟ್ಯಂತರ ರುಪಾಯಿಗಳ ಕಾಮಗಾರಿ ಜೊತೆಗೆ, ಯಾದಗಿರಿ ನಗರದ ವಿವಿಧೆಡೆ ಡಿವೈಡರ್‌ಗಳ ಹೆಸರಲ್ಲೂ ಕೋಟ್ಯಂತರ ರುಪಾಯಿಗಳ ಅವ್ಯವಹಾರದ ಆರೋಪಗಳೂ ಕೇಳಿಬರುತ್ತಿವೆ. "ಊಪರ್ ಶೇರ್‌ವಾನಿ, ಅಂದರ್ ಪರೆಶಾನಿ.." ಶೀರ್ಷಿಕೆಯಡಿ ಇದೇ ಜುಲೈ 26 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿ ಕೆಆರ್‌ಐಡಿಎಲ್ ಕಾಮಗಾರಿಯ ಉದಾಹರಣೆಗೆ ಸಾಕ್ಷಿಯಂತಿತ್ತು.