ರೈತರಿಗೆ ಬೆಣ್ಣೆ ತೋರಿಸಿ, ಸುಣ್ಣ ತಿನ್ನಿಸಿದ ಸರ್ಕಾರ !

Follow Us

ಸಾರಾಂಶ

  ಕಾಗದಗಳ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡರೆ ಸಾಕು, ತಮ್ಮ ಕೆಲಸವಾದಂತೆ ಎನ್ನುವಂತೆ ವರ್ತಿಸಿದ್ದ ಅಧಿಕಾರಿಗಳು, ರೈತರಿಗೆ ಬೆಣ್ಣೆ ತೋರಿಸಿ ಸುಣ್ಣ ತಿನ್ನಿಸಿದ ಹಾಗಾಗಾಗಿದೆ.

ಆನಂದ್‌ ಎಂ. ಸೌದಿ

  ಯಾದಗಿರಿ : ಕಡೇಚೂರು ಬಾಡಿಯಾಳ ಗ್ರಾಮಗಳಲ್ಲಿನ 3232 ಎಕರೆ 22 ಗುಂಟೆ ಜಮೀನನ್ನು ಸುವರ್ಣ ಕರ್ನಾಟಕ ಕಾರಿಡಾರ್‌ ಯೋಜನೆಗಾಗಿ/ಲ್ಯಾಂಡ್‌ ಬ್ಯಾಂಕ್‌ ಯೋಜನೆಗಾಗಿ ಡಿಸೆಂಬರ್‌ 30, 2011 ರಂದು ರಾಜ್ಯಪತ್ರ ಹೊರಡಿಸಿದ್ದ ಸರ್ಕಾರ, ಆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ವೇಳೆ ಜನರಿಗೆ ಸಭೆಗಳಲ್ಲಿ ನೀಡಿದ್ದ ಭರವಸೆಗಳ ಪಟ್ಟಿಯತ್ತ ಕಣ್ಣಾಡಿಸಿದರೆ, ರೈತರಿಂದ ಛಾಪಾ ಕಾಗದಗಳ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡರೆ ಸಾಕು, ತಮ್ಮ ಕೆಲಸವಾದಂತೆ ಎನ್ನುವಂತೆ ವರ್ತಿಸಿದ್ದ ಅಧಿಕಾರಿಗಳು, ರೈತರಿಗೆ ಬೆಣ್ಣೆ ತೋರಿಸಿ ಸುಣ್ಣ ತಿನ್ನಿಸಿದ ಹಾಗಾಗಾಗಿದೆ.

ಅಂದಿನ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ, ಫೆ.13, 2012 ರಂದು ಭೂಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆ ನಡೆದಿತ್ತು. ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ, ಯಾಗದಿರಿ ತಹಸೀಲ್ದಾರರು ಹಾಗೂ ಉಪ ನೋಂದಣಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದ್ದ ಈ ಸಭೆಯಲ್ಲಿ ಪ್ರತಿ ಎಕರೆಗೆ ಇಂತಿಷ್ಟು ಬೆಲೆ ನಿಗದಿಪಡಿಸಲಾಗಿತ್ತು.

ಈ ಬೆಲೆ ನಿರ್ಧರಣಾ ಜೊತೆಗೆ, ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಜಮೀನುಗಳನ್ನು ಸ್ವಾಧೀನಕ್ಕೆ ಮುಂದಾಗುತ್ತಿದೆ ಎಂಬುದರ ಬಗ್ಗೆ, ಇದರಿಂದ ಅಲ್ಲಿನವರಿಗೆ ಆಗುವ ಪ್ರಯೋಜನಗಳ ಬಗ್ಗೆ, ಮುಂದಾಗುವ ಅಭಿವೃದ್ಧಿಯ ಬಗ್ಗೆ ತಿಳಿಸಲಾಗಿತ್ತು. ಸಭೆಯಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ್ದ ಅಧಿಕಾರಿಗಳು ಭರವಸೆಗಳ ಬೆಲೂನ್‌ಗಳನ್ನು ಬಿಟ್ಟಿದ್ದರು.

"ಕನ್ನಡಪ್ರಭ"ಕ್ಕೆ ಲಭ್ಯ ಅಂದಿನ ಸಭೆಯ ನಡಾವಳಿ ಪ್ರತಿಯಲ್ಲಿನ ಕೆಲವು ಮುಖ್ಯ ಅಂಶಗಳಂತೆ, ಜಮೀನುಗಳನ್ನು ಸ್ವಾಧೀಪಡಿಸಿಕೊಳ್ಳುತ್ತಿರುವುದು ಸಾರ್ವಜನಿಕ ಉದ್ದೇಶಕ್ಕಾಗಿಯೇ ಹೊರತು, ಖಾಸಗಿ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕೆ ಅಲ್ಲಾ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ, ಈಗಾಗಿರುವುದು ಖಾಸಗಿ, ಅದರಲ್ಲೂ ಬಹುತೇಕ ಕೆಮಿಕಲ್‌ ಕಂಪನಿಗಳಿಗೇ ನೀಡಲಾಗಿದೆ.

* ಪರಿಸರಕ್ಕೆ ಧಕ್ಕೆ ಬಾರದ ಕೈಗಾರಿಕೆ ಸ್ಥಾಪನೆ ಭರವಸೆ:

ಹಾಗೆಯೇ, ಈ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಕೈಗಾರಿಕೆಗಳನ್ನು ಸ್ಥಾಪಿಸುವುದಿಲ್ಲ. ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಸಾವಿರಾರು ಜನರೆದುರು ಘೋಷಿಸಿ, ನಡಾವಳಿಯಲ್ಲಿ ತಿಳಿಸಲಾಗಿದೆ. ಆದರೀಗ, ಅಲ್ಲಿರುವುದು " ರೆಡ್‌ ಝೋನ್‌" ಅಪಾಯಕಾರಿ ಜಾಗೆ; ವಿಷಗಾಳಿಯ ಆತಂಕ, ದುರ್ನಾತ- ತ್ಯಾಜ್ಯ ಘಾಟು, ಅನಾರೋಗ್ಯಕರ ವಾತಾವರಣ. ಕೆಮ್ಮು, ದಮ್ಮು, ಅಸ್ತಮಾ, ಕ್ಯಾನ್ಸರ್‌, ಚರ್ಮರೋಗ, ಶ್ವಾಸಕೋಶಕ್ಕೆ ಹಾನಿ ಮುಂತಾದ ರೋಗಗಳ ಮಧ್ಯೆ ಜನ-ಜೀವನ ಸಾಗಿಸುತ್ತಿದ್ದಾರೆ. ಭೂಮಿ ಕೊಡುವ ಜನರ ಜೊತೆಗಿನ ಒಪ್ಪಂದದ ಕರಾರು ಇಲ್ಲಿ ಮುರಿದು ಬಿದ್ದಂತಾಗಿದೆ. ಇದು "ಬ್ರೀಚ್‌ ಆಫ್‌ ಟ್ರಸ್ಟ್‌" ನಂಬಿಕೆಗೆ ಧಕ್ಕೆ ಎನ್ನುವಂತಿದೆ ಅಂತಾರೆ ಕಡೇಚೂರಿನ ಸಿದ್ದನಗೌಡರು.

ಇನ್ನು, ಕೈಗಾರಿಕಾ ನೀತಿಯ ಪ್ರಕಾರ ಕಂಪನಿಗಳಲ್ಲಿ ಉದ್ಯೋಗ ನೀಡುವ ಬಗ್ಗೆ, ಕೈಗಾರಿಕಾ ನಿವೇಶನಗಳನ್ನು ಕೈಗಾರಿಕಾ ಉದ್ದಿಮೆಗಳಿಗೆ ಹಂಚಿಕೆ ಮಾಡುವಾಗ ಜಮೀನು ಕಳೆದುಕೊಂಡ ಭೂಮಾಲೀಕರ ಕುಟುಂಬಕ್ಕೆ ಒಬ್ಬರಿಗೆ ವಿದ್ಯಾರ್ಹತೆ ಅನುಗುಣವಾಗಿ ನೌಕರಿಯನ್ನು ನೀಡಲು ಮುಚ್ಚಳಿಕೆ ಪತ್ರ ಪಡೆಯಲಾಗುವುದು ಎಂದು ಅಂದಿನ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಯಾಗಿದ್ದ ವಿ. ಜಗನ್ನಾಥ್‌ ಸಭೆಯಲ್ಲಿ ತಿಳಿಸಿದ್ದರು. ತಮಗಿಲ್ಲವಾದರೂ, ಮಕ್ಕಳಿಗೆ- ಮೊಮ್ಮಕ್ಕಳಿಗೆ ನೌಕರಿಯಾದರೂ ಸಿಗಬಹುದು ಎಂದು ನಂಬಿದ ಜನರಿಗೆ ಸರ್ಕಾರ ಅಂಗೈಲಿ ಅರಮನೆ ತೋರಿಸಿತ್ತು. ಇಂತಹ ಯಾವುದೇ ಷರತ್ತು ಅಧಿಕೃತವೇ ಅಲ್ಲ ಎಂದು ಕಂಪನಿಗಳು ತಳ್ಳಿ ಹಾಕಿವೆಯಂತೆ.

* ಕೈಗಾರಿಕೆಗಳಿಗೋಸ್ಕರ ಒಳ್ಳೆ ಕೃಷಿಭೂಮಿಯನ್ನು ಒಣಭೂಮಿ ಎಂದ ಸರ್ಕಾರ ! ಫೋ-2

ಆಘಾತಕಾರಿ ಅಂಶವೆಂದರೆ, ಬದುಕಿನ ಬವಣೆಗಾಗಿ ಗುಳೇ ಹೋಗುತ್ತಿದ್ದ ಜನರ ಅನಿವಾರ್ಯತೆಯನ್ನು ಸರ್ಕಾರ ಇಲ್ಲಿ ದುರುಪಯೋಗ ಪಡಿಸಿಕೊಂಡಂತಿದೆ. "ಈ ಪ್ರದೇಶದಲ್ಲಿ ಸಕಾಲಕ್ಕೆ ಮಳೆ ಆಗದೇ ಇರುವುದರಿಂದ ಸದರಿ ಜಮೀನಿನಲ್ಲಿ ಬೆಳೆಯುವ ಬೆಳೆಗಳು ಸರಿಯಾಗಿ ಇಳುವರಿ ಬರುವುದಿಲ್ಲ. ಇದರಿಂದ ರೈತರಿಗೆ ನಷ್ಟ ಆಗುತ್ತದೆ. ಜನರು ಪಕ್ಕದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಕೆಲಸಕ್ಕೆ ವಲಸೆ ಹೋಗುತ್ತಿದ್ದಾರೆ.." ಎಂದು ನಡಾವಳಿಯಲ್ಲಿ ತಿಳಿಸಲಾಗಿದೆ. ಗುಳೇ ತಪ್ಪಿಸಲು ಎಂಬ ಕಾರಣಕ್ಕೆ ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಸರ್ಕಾರ ರೈತರಿಗೆ ಚಳ್ಳೆಹಣ್ಣು ತಿನ್ನಿಸಿದಂತಿದೆ.

ಹುಣಸಗಿ ತಾಲೂಕು ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಬಳ್ಳಾರಿ ಜಿಂದಾಲ್‌ ಕಾರ್ಖಾನೆಗೆ ನೂರಾರು ಕಿ.ಮೀ. ಪೈಪ್ಲೈನ್‌ ಮೂಲಕ ನೀರು ಕೊಡುತ್ತಿರುವ ನಾವು, ಇದೇ ಕಡೇಚೂರು-ಬಾಡಿಯಾಳ ಭಾಗ ಕೃಷ್ಣಾ ಭೀಮಾ ನದಿಗಳಿಂದ 15- 18 ಕಿ.ಮೀ. ಅಷ್ಟೇ ದೂರದಲ್ಲಿದ್ದರೂ, ರೈತರಿಗೆ ಅನುಕೂಲವಾಗುವ, ನೀರಾವರಿ ಕಲ್ಪಿಸುವ ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸದಿರುವುದು ದುರಂತ.

ಈ ಜಮೀನುಗಳು ಫಲವತ್ತಾದ ಕೃಷಿ ಭೂಮಿಗಳಾಗಿದ್ದರೂ, ಕೈಗಾರಿಕೆಗಳ ಸ್ಥಾಪನೆಗೋಸ್ಕರ "ಖುಷ್ಕಿ" (ಒಣಭೂಮಿ) ಎಂದು ತೋರಿಸಿದ ಸರ್ಕಾರ, ಕೈಗಾರಿಕೋದ್ಯಮಿಗಳ ಸಂಪ್ರೀತಿ ಪಡಿಸಲು, ರೈತರ ಹೆಣಗಳ ಮೇಲೆ ಕಾರ್ಖಾನೆಗಳ ನಿರ್ಮಾಣ ಮುಂದಾಗಿರುವುದು ದುರದೃಷ್ಟಕರ ಎಂದು ಪತ್ರಕರ್ತ, ಸಾಮಾಜಿಕ ಹೋರಾಟಗಾರ ಭೀಮಣ್ಣ ವಡವಟ್‌ ಸರ್ಕಾರದ ನಡೆ ವಿರುದ್ಧ ಬೇಸರ ವ್ಯಕ್ತಪಡಿಸಿದರು.

* ಹೊಳೆ ದಾಟಿದ ಮೇಲೆ ಅಂಬಿಗನ ಮರೆತಂತೆ..! 

ಅಂದಹಾಗೆ, ಶೇ.100 ರಷ್ಟು ಜಮೀನು ಕಳೆದುಕೊಂಡ ಭೂಮಾಲೀಕರ ಕುಟುಂಬಕ್ಕೆ ಒಂದು ವರ್ಷದವರೆಗೆ ಪ್ರತಿ ತಿಂಗಳು 3 ಸಾವಿರ ರು.ಗಳ ಹಾಗೂ ಪ್ರತಿ ತಿಂಗಳು 2 ಸಾವಿರ ರು.ಗಳಂತೆ 20 ವರ್ಷಗಳವರೆಗೆ ಜೀವನಾಂಶ ಭತ್ಯೆ ನೀಡುವ ಬಗ್ಗೆ ಸರ್ಕಾರ ಮರೆತಂತಿದೆ. "ಲ್ಯಾಂಡ್ ಲೂಸರ್" ಪ್ರಮಾಣಪತ್ರ ನೀಡಿದ್ದರೆ ಅದು ಭೂಮಿ ಕಳೆದುಕೊಂದ ಕುಟುಂಬದವರಿಗೆ ಶಿಕ್ಷಣ, ಸರ್ಕಾರಿ ಉದ್ಯೋಗ, ಯೋಜನೆಗಳಲ್ಲಿ ಸಹಕಾರಿಯಾಗುತ್ತಿತ್ತು. ಅದರ ಬಗ್ಗೆಯೂ ಸಹ ಈವರೆಗೆ ಸಂಬಂಧಿತರು ಚಕಾರ ಎತ್ತದಿರುವುದು ನೋಡಿದರೆ, ಸರ್ಕಾರದ ಈ ನಿಷ್ಕಾಳಜಿ "ಹೊಳೆ ದಾಟಿದ ಮೇಲೆ ಅಂಬಿಗನ ಮರೆತಂತಿದೆ" ಅನ್ನೋ ಹಾಗಿದೆ. ಇಂತಹ ಅನೇಕ ಸಲಹೆಗಳು, ಶಿಫಾರಸ್ಸುಗಳು, ಆದೇಶಗಳು ಜಾರಿಯಾಗಬೇಕಿದ್ದವು. ಎಲ್ಲವೂ ಕಾಗಗದಲ್ಲೇ ಕೊಳೆಯುತ್ತಿದ್ದರೆ, ಮೂಲ ಉದ್ದೇಶವನ್ನೇ ಧಿಕ್ಕರಿಸಿ, ಕೆಮಿಕಲ್‌ ತ್ಯಾಜ್ಯ ಕಂಪನಿಗಳಿಗೆ ಕೆಂಪು ಹಾಸು ನೀಡಿ ಸ್ವಾಗತಿಸಿದ ಸರ್ಕಾರದ ಕ್ರಮ ಜನರ ಜೀವನ ಜೊತೆ ಚೆಲ್ಲಾಡವಾಡುತ್ತಿರುವಂತಿದೆ ಅನ್ನೋ ಆಕ್ರೋಶ ಇಲ್ಲಿನ ಭೂಸಂತ್ರಸ್ತರದ್ದು.