ಹೊರಗುತ್ತಿಗೆ ನೌಕರರ ಸೇವೆ ಕಾಯಂ ಆಗಲಿ

| Published : Oct 28 2025, 12:03 AM IST

ಸಾರಾಂಶ

ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ಸೇವೆ ಕಾಯಂ ಮಾಡಬೇಕೆಂದು ಸರಕಾರಿ ಹೊರಗುತ್ತಿಗೆ ಸಂಘದ ರಾಜ್ಯಾಧ್ಯಕ್ಷ ಸುಧಾಕರ್ ಆಗ್ರಹಿಸಿದರು.

ಯಾದಗಿರಿ: ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ಸೇವೆ ಕಾಯಂ ಮಾಡಬೇಕೆಂದು ಸರಕಾರಿ ಹೊರಗುತ್ತಿಗೆ ಸಂಘದ ರಾಜ್ಯಾಧ್ಯಕ್ಷ ಸುಧಾಕರ್ ಆಗ್ರಹಿಸಿದರು.

ನಗರದ ಚಾಮಾ ಫಂಕ್ಷನ್ ಹಾಲ್‌ನಲ್ಲಿ ಸರಕಾರಿ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಘಟಕದ ಯಾದಗಿರಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಬಹುತೇಕ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರೇ ಕೆಲಸದಲ್ಲಿ‌ದ್ದು, ದುಡಿಮೆ ತಕ್ಕ ವೇತನವಿಲ್ಲ. ಕಾಯಂ ನೌಕರರಿಗೆ ಸಿಗುವ ಯಾವುದೇ ಸೌಲಭ್ಯಗಳು ನಮಗಿಲ್ಲ. ಆದರೂ ಹೇಳಿದ ಕೆಲಸ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದೇವೆ. ಆದ್ದರಿಂದ ಸರ್ಕಾರ ಮೊದಲು ನಮ್ಮ ಸೇವೆ ಕಾಯಂ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಸರಕಾರಿ ಹೊರಗುತ್ತಿಗೆ ಸಂಘದ ಜಿಲ್ಲಾಧ್ಯಕ್ಷ ರೇಖಾ ಎಸ್. ಮುತ್ತಗಿ ಮಾತನಾಡಿ, ಇಂತಿಷ್ಟು ವರ್ಷಗಳ ಕಾಲ ಸೇವೆ ಮಾಡಿದರೆ ಅಂತಹವರಿಗೆ ಕಾಯಂ ಮಾಡಿಕೊಳ್ಳಬೇಕೆಂಬ ನಿಯಮವಿದ್ದರೂ ಇದನ್ನು ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುತ್ತಿಲ್ಲ. ಕಡಿಮೆ ಸಂಬಳದಿಂದ ಸಂಸಾರ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.

ಸರಕಾರಿ ಹೊರಗುತ್ತಿಗೆ ಸಂಘದ ರಾಜ್ಯ ಸಂಚಾಲಕ ಗಂಗಾಧರ್ ಎನ್.ಮಾತನಾಡಿ, ಸೇವೆ ಕಾಯಂ ಸೇರಿದಂತೆಯೇ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಹಲವಾರು ಸಲ ಹೊರಾಟ ಮಾಡಲಾಗಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಹೀಗೆ ಮಾಡದೆ ನಿಷ್ಠೆಯಿಂದ ಕೊಟ್ಟ ಸಂಬಳದಲ್ಲಿಯೇ ಪ್ರಾಮಾಣಿಕವಾಗಿ ಸೇವೆ ಮಾಡುತ್ತಿರುವ ನಮ್ಮ ಸೇವೆ ಕಾಯಂ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಸಂತೋಷ ನಿರಟಿ ಮಾತನಾಡಿದರು.

ಈ‌ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಿ.ವೈ.ಪಾಟೀಲ್, ಸಾವಿತ್ರಿ.ಎಸ್, ಪಾಟೀಲ್, ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ.ನಾಟೇಕರ್, ಸುನೀಲ್‌.ಕೆ.ಸಿ, ಮುಜಾಸೀರ್ ಅಹ್ಮದ್, ಧರ್ಮ ಚಿನ್ನು ರಾಠೊಡ್, ರಾಜಶೇಖರ, ನಾಗರಾಜ ಕಟ್ಟೆಪ್ಪ ಗೌಡರ, ಯಾದಗಿರಿ ತಾಲೂಕಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ, ಜಿಲ್ಲಾ ಖಜಾಂಚಿ ಶಿವಕುಮಾರ, ಜಿಲ್ಲಾ ಉಪಾಧ್ಯಕ್ಷರಾದ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಸೂಲ್ ಇದ್ದರು.