ಗರ್ಭದಲ್ಲಿನ ಶಿಶು ಬೆಳವಣಿಗೆಗ ಕುಂಠಿತ - ಹೃದಯವೇ ಬೆಳೆದಿರಲಿಲ್ಲ, 2ನೇ ಕೂಸನ್ನೂ ತಗೆಸಿಬಿಟ್ವಿ. !

Published : Apr 22, 2025, 07:52 AM IST
newborn baby

ಸಾರಾಂಶ

"ಮೂರು ತಿಂಗಳು ಇರೋವಾಗ್ಲೇ ಮೊದಲ ಕೂಸಿನ ಗರ್ಭಪಾತ ಆಯ್ತು, ವರ್ಷದ ನಂತರ ಇನ್ನಾದರೂ ಸಂತಾನ ಸಿಗುತ್ತದೆ ಅನ್ನೋ ಆಶಾಭಾವನೆ ಇದ್ದಾಗ, 2ನೇ ಕೂಸಿನ ಹೃಯಯವೇ ಬೆಳೆದಿಲ್ಲವಾದ್ದರಿಂದ, ವೈದ್ಯರ ಸಲಹೆ ಮೇರೆಗೆ ಅದನ್ನೂ ಮೊನ್ನೆ ತೆಗೆಸಿಬಿಟ್ವಿ..!

ಆನಂದ್‌ ಎಂ. ಸೌದಿ

ಯಾದಗಿರಿ :  "ಮೂರು ತಿಂಗಳು ಇರೋವಾಗ್ಲೇ ಮೊದಲ ಕೂಸಿನ ಗರ್ಭಪಾತ ಆಯ್ತು, ವರ್ಷದ ನಂತರ ಇನ್ನಾದರೂ ಸಂತಾನ ಸಿಗುತ್ತದೆ ಅನ್ನೋ ಆಶಾಭಾವನೆ ಇದ್ದಾಗ, 2ನೇ ಕೂಸಿನ ಹೃಯಯವೇ ಬೆಳೆದಿಲ್ಲವಾದ್ದರಿಂದ, ವೈದ್ಯರ ಸಲಹೆ ಮೇರೆಗೆ ಅದನ್ನೂ ಮೊನ್ನೆ ತೆಗೆಸಿಬಿಟ್ವಿ..!

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಿಂದ ಹೊರಸೂಸುತ್ತಿರುವ ಕಲುಷಿತ ಗಾಳಿ-ತ್ಯಾಜ್ಯ ಘಾಟಿನಿಂದಾಗಿ ಅಲ್ಲಿನ ಜನಜೀವನದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು "ಕನ್ನಡಪ್ರಭ" ಸರಣಿ ವರದಿಗಳ ಪ್ರಕಟಿಸುತ್ತಿರುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದೆ.

ಆ ಭಾಗದ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಯುವಕರೂ ಸೇರಿದಂತೆ ಅಲ್ಲಿನ ಮನುಕುಲ, ಪ್ರಾಣಿ- ಪಕ್ಷಿ, ಜೀವ ಜಂತುಗಳ ಮೇಲಿನ ಅನಾಹುತಗಳನ್ನು ಈ ಮೂಲಕ ಬೆಳಕಿಗೆ ತಂದು, ಮಾಲಿನ್ಯ ನಿಯಂತ್ರಿಸುವ ಮೂಲಕ ಹದಗೆಟ್ಟ ಪರಿಸರದ ಜೊತೆಗೆ ಜನ-ಜೀವನ ಸರಳವಾಗಿಸುವ ನಿಟ್ಟಿನಲ್ಲಿ ಈ ವರದಿಗಳು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿವೆ.

ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದ ವಿವಿಧ ಗ್ರಾಮೀಣ ಭಾಗದತ್ತ "ಕನ್ನಡಪ್ರಭ" ತಂಡ ತೆರಳಿದ್ದಾಗ, ಒಂದೊಂದಾಗಿ ಜನರ ಮಾತುಗಳಲ್ಲಿ ವ್ಯಕ್ತವಾದ ನೋವುಗಳ ಮೂಲಕ ಬೆಳಕಿಗೆ ಬಂದ ಅಲ್ಲಿನ ಕರಾಳ ಕತೆಗಳು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವಂತಿತ್ತು.

ಎಳೆಯ ಮಕ್ಕಳಿಗೆ ಅಸ್ತಮಾ, ಕೆಮ್ಮು ದಮ್ಮು, ಚರ್ಮ ಸಂಬಂಧಿ ಕಾಯಿಲೆಗಳು, ಹದಿಹರೆಯದಲ್ಲೇ ಯುವಕರಿಗೆ ಮಂದದೃಷ್ಟಿ, ಕಿಡ್ನಿ, ಕರುಳು ಬಾವಿನಿಂದ ಸಾವಿನ ಪ್ರಕರಣಗಳ ಜೊತೆಗೆ ಭವಿಷ್ಯದ ಪೀಳಿಗೆಯ ಮೇಲೂ ಆತಂಕದ ಛಾಯೆ ಕುರಿತ ಅಲ್ಲಿನ ಜನರ ಅನಿಸಿಕೆಗಳು ಆ ಭಾಗದ ಜನರ ಆಘಾತ ಮೂಡಿಸಿವೆ. ಹೀಗೇಕೆ ಆಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ, ಕಳೆದೈದು ವರ್ಷಗಳಲ್ಲಿ ಇಂತಹ ಮಾರಕ ಕಾಯುಲೆಗಳು ಜನರ ವಕ್ಕರಿಸಿಕೊಳ್ಳುತ್ತಿರುವುದು ಜನರ ದುಗುಡ ಹೆಚ್ಚಿಸಿದೆ.

ಗರ್ಭದಲ್ಲೇ ಶಿಶುವಿನ ಬೆಳವಣಿಗೆ ಕುಂಠಿತಗೊಂಡು, ತಾಯಿಯ ಉಳಿವಿಕೆಗಾಗಿ ವೈದ್ಯರ ಸಲಹೆಯಂತೆ ಗರ್ಭಪಾತದ ಪ್ರಕರಣಗಳು ಕಂಡುಬರುತ್ತಿವೆ. ಆರಂಭದಲ್ಲಿ ಇದು ಸಹಜವೇನೋ ಅಂದುಕೊಂಡಿದ್ದ ಅಲ್ಲಿನವರಿಗೆ ಪ್ರಕರಣಗಳ ಸಂಖ್ಯೆ ಒಂದೊಂದಾಗಿ ಕಾಣುತ್ತಿರುವುದು ಆತಂಕ ಮೂಡಿಸಿದೆ.

ಇದೇ ಭಾಗದ ಹಳ್ಳಿಯೊಂದರ ಮಹಿಳೆಗೆ 2ನೇ ಗರ್ಭಪಾತ ತೀವ್ರ ಆಘಾತದಲ್ಲಿ ನೂಕಿಸಿದೆ. ಗರ್ಭದಲ್ಲಿ ಮಗುವಿನ ಹೃದಯವೇ ಬೆಳೆಯದಿದ್ದರಿಂದ ರಾಯಚೂರಿನಲ್ಲಿ ವೈದ್ಯರ ಸಲಹೆ ಮೇರೆಗೆ ಗರ್ಭಪಾತ ಮಾಡಿಸಲಾಗಿದೆ. ಇಂತಹುದ್ದೇ ಪ್ರಕರಣಗಳ ಇಲ್ಲೂ ನಡೆದಿವೆ ಎಂದು ಬಾಡಿಯಾಳದ ವಿಶ್ವನಾಥ್‌ ನೋವು ತೋಡಿಕೊಂಡರು. ಸರ್ಕಾರ ಇಂತಹ ಘಟನೆಗಳ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಿ, ಅಲ್ಲಿನ ಜನರ ಬದುಕಿಗೆ ನೆಮ್ಮದಿ ಮೂಡಿಸಬೇಕಿದೆ.

ಸಮಿತಿ ರಚನೆ: ಜಂಟಿ ವರದಿ ಸಲ್ಲಿಕೆಗೆ ಡಿಸಿ ಸೂಚನೆ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಜಲ-ಜೀವನ, ಪರಿಸರದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು "ಕನ್ನಡಪ್ರಭ" ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ. ಇವುಗಳನ್ನು ಉಲ್ಲೇಖಿಸಿ, ಬಳ್ಳಾರಿಯ ಜನಸಂಗ್ರಾಮ ಪರಿಷತ್‌ ಹೋರಾಟ ತಂಡ, ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಸಿಇಓ ಅವರಿಗೆ ಈ-ಮೇಲ್‌ ಮೂಲಕ ಪತ್ರ ಬರೆದು, ಸೂಕ್ತ ಕ್ರಮಕ್ಕೆ ಮನವಿ ಮಾಡಿತ್ತಲ್ಲದೆ, ಸಂಡೂರಿನ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಶ್ರೀಶೈಲ ಆಲದಹಳ್ಳಿ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ, ಯಾದಗಿರಿ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅವರು, ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸ್ಥಳ ಪರಿಶೀಲಿಸಿ, ಮೂರು ದಿನಗಳೊಳಗೆ ಜಂಟಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್‌ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ಯಾದಗಿರಿ ತಹಸೀಲ್ದಾರರು ಹಾಗೂ ಯಾದಗಿರಿ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಈ ತಂಡ ಒಳಗೊಂಡಿರುತ್ತದೆ.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಉದ್ದಿಮೆಗಳಿಂದ ಹೊರಬರುತ್ತಿರುವ ವಿಷಗಾಳಿಯಿಂದ ಸುತ್ತಲಿನ ಗ್ರಾಮಗಳಲ್ಲಿನ ಮಹಿಳೆಯರು, ವೃದ್ಧರು, ಗರ್ಭಿಣಿಯರು ಸೇರಿದಂತೆ, ಮಕ್ಕಳ ಮೇಲೆ, ಜಾನುವಾರುಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಕೈಗಾರಿಕೆಗಳ ಮೇಲೆ ನಿಯಮಾನುಸಾರ ಸ್ಪಷ್ಟವಾದ ಅಭಿಪ್ರಾಯಗಳೊಂದಿಗೆ ಜಂಟಿ ವರದಿಯನ್ನು ಮೂರು ದಿನಗಳೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚಿಸಿದ್ದಾರೆ.

PREV
Stay informed with the latest news and developments from Yadgir district (ಯಾದಗಿರಿ ಸುದ್ದಿ) — including local politics, agriculture, civic issues, social events, environment, community affairs and regional reports on Kannada Prabha News.

Recommended Stories

ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ
ಪ್ರಜಾಸೌಧ ನಿರ್ಮಾಣ ಜಾಗ ಬದಲಾವಣೆಗೆ ಆಗ್ರಹ