ಯಾದಗಿರಿ: ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯನ್ನು ಪಾಲಿಶ್ ಮಾಡಿ ಫಾರಿನ್‌ಗೆ ಕಳುಹಿಸುವ ಜಾಲ ಯಾದಗಿರಿ ಜಿಲ್ಲೆ ಗುರುಮಠಕಲ್ಲಿನಲ್ಲಿ ಬೆಳಕಿಗೆ ಬಂದ ಬೆನ್ನಲ್ಲೇ, ಇಡೀ ಕಾರ್ಯಾಚರಣೆಗೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸುವ ರಹಸ್ಯ ಡೈರಿಯೊಂದು ಅಧಿಕಾರಿಗಳ ಕೈ ವಶವಾಗಿದೆ. ಇದು ಪ್ರಕರಣದ ಮೇಲೆ ಬೆಳಕು ಚೆಲ್ಲಲು ಅಧಿಕಾರಿಗಳಿಗೆ ನೆರವಾಗಿದೆ
ಆಹಾರ ಇಲಾಖೆ ಅಧಿಕಾರಿಗಳ ತಂಡ ಸೆ.5ರಂದು ಗುರುಮಠಕಲ್‌ನ ರೈಸ್‌ಮಿಲ್ ಒಂದರ ಮೇಲೆ ದಾಳಿ ನಡೆಸಿ ಸಿಂಗಾಪುರ, ದುಬೈ ಮೊದಲಾದ ದೇಶಗಳಿಗೆ ರಫ್ತು ಮಾಡಲು ಸಜ್ಜಾಗಿರಿಸಿದ್ದ 5000 - 6000 ಟನ್‌ನಷ್ಟು ಅನ್ನಭಾಗ್ಯ ಯೋಜನೆಯ ಅಕ್ಕಿ ಪತ್ತೆ ಮಾಡಿತ್ತು. ಈ ದಾಳಿ ವೇಳೆ ಮಿಲ್‌ನಲ್ಲಿ ಡೈರಿಯೊಂದು ದೊರೆತಿದ್ದು, ಇದರಲ್ಲಿ ಅಕ್ರಮ ಸಾಗಾಟದ ಕುರಿತು ವಿವರ ನಮೂದಿಸಲಾಗಿದೆ. ಯಾವ್ಯಾವ ವಾಹನದಲ್ಲಿ ಎಷ್ಟೆಷ್ಟು ಪ್ರಮಾಣದ ಅಕ್ಕಿ ಸಾಗಿಸಲಾಗಿದೆ? ಎಲ್ಲೆಲ್ಲಿಗೆ ಸಾಗಿಸಲಾಗಿದೆ? ಯಾವಾಗ ಈ ದಾಸ್ತಾನುಗಳನ್ನು ಕಳುಹಿಸಲಾಗಿದೆ ಎಂಬುದಾಗಿ ಅಲ್ಲಿ ಬರೆದಿಡಲಾಗಿದೆ.
ದಾಳಿಗೂ ಮುನ್ನ, ಸುಮಾರು 20 ದಿನಗಳ ಹಿಂದಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ, ಅನೇಕ ವಾಹನಗಳಲ್ಲಿ ಈ ಅಕ್ಕಿ ದಾಸ್ತಾನನ್ನು ಕಳುಹಿಸಲಾಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆ ಎಲ್ಲಾ ವಾಹನಗಳ ವಿವರ ಕಲೆ ಹಾಕುತ್ತಿದ್ದೇವೆ. ಒಂದು ಅಂದಾಜಿನ ಪ್ರಕಾರ, ಈಗ ಜಪ್ತಿ ಮಾಡಿಕೊಳ್ಳಲಾಗಿರುವ ದಾಸ್ತಾನಿನ ಎರಡು ಪಟ್ಟು ಅಕ್ಕಿ ಈಗಾಗಲೇ ಹೊರಹೋಗಿರುವ ಶಂಕೆಯಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ ತಿಳಿಸಿದ್ದಾರೆ.
ಕೇಂದ್ರದ ಅಕ್ಕಿಗೂ ಕನ್ನ!:
ಜೊತೆಗೆ, ಕರ್ನಾಟಕದ ಅಕ್ಕಿ ಮಾತ್ರವಲ್ಲದೇ ಪಂಜಾಬ್ ಹಾಗೂ ಮಧ್ಯಪ್ರದೇಶಗಳಿಂದಲೂ ಅಕ್ರಮ ಅಕ್ಕಿಯನ್ನು ಇಲ್ಲಿಗೆ ತರಿಸಿಕೊಳ್ಳಲಾಗುತ್ತಿತ್ತು. ಆಘಾತಕಾರಿ ವಿಷಯವೆಂದರೆ, ತಲಸ್ಸೇಮಿಯಾ, ರಕ್ತಹೀನತೆ ಹಾಗೂ ಅಪೌಷ್ಟಿಕತೆಯಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆಂದು, "ಸಂಪೂರ್ಣ್ ಪೋಷನ್, ಸ್ವಸ್ಥ್ ಜೀವನ್" ಯೋಜನೆಯಡಿ ಕೇಂದ್ರ ಸರ್ಕಾರ ವಿತರಿಸುವ ಅಕ್ಕಿಯನ್ನು ಪಾಲಿಶ್ ಮಾಡಿ, ಸಿಂಗಾಪುರ, ಫ್ರಾನ್ಸ್ ಹಾಗೂ ದುಬೈ ಮೊದಲಾದ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ.
ಸಂಚಲನ ಮೂಡಿಸಿದ ‘ಕನ್ನಡಪ್ರಭ’ ವರದಿ:
‘ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ’ ಶೀರ್ಷಿಕೆಯಡಿ ಸೋಮವಾರ (ಸೆ.8) ಕನ್ನಡಪ್ರಭದ ಮುಖಪುಟದಲ್ಲಿ ಪ್ರಕಟಗೊಂಡ ವರದಿ ಸಂಚಲನ ಮೂಡಿಸಿದೆ. ಅಕ್ಕಿ ಅಕ್ರಮದ ಹಿಂದೆ ಪ್ರಭಾವಿಗಳ ಕೈವಾಡದಿಂದಾಗಿ ಈ ಹಿಂದಿನ ಅನೇಕ ಪ್ರಕರಣಗಳು ಮುಚ್ಚಿ ಹೋಗಿದ್ದು, ಸರ್ಕಾರ ಉನ್ನತಮಟ್ಟದ ತನಿಖೆಗೆ ಆದೇಶಿಸಿದರೆ ಮತ್ತಷ್ಟು ಹುಳುಕು ಹೊರಬರಲಿದೆ ಎಂದು ಜನಾಭಿಪ್ರಾಯಗಳು ಮೂಡಿಬಂದಿವೆ.
ಅಕ್ಕಿ ಅಕ್ರಮ ಕೇಸ್ ತನಿಖೆ ಸಿಐಡಿಗೆ?
ಯಾದಗಿರಿ : ಗುರುಮಠಕಲ್‌ನಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮದ ಕುರಿತು ದಾಖಲಾದ ದೂರನ್ನು ಸಿಐಡಿ ಅಥವಾ ಉನ್ನತ ಮಟ್ಟದ ತನಿಖೆಗೆ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ಪ್ರಕರಣ ಬಯಲಿಗೆ ಬರುತ್ತಾವಾದರೂ, ಆಳವಾದ ತನಿಖೆ ನಡೆಯದೇ ಬಹುತೇಕ ಪ್ರಕರಣ ಹಳ್ಳ ಹಿಡಿದಿವೆ. ಈಗ, ಇಷ್ಟೊಂದು ಪ್ರಮಾಣದಲ್ಲಿನ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆದರೆ ಮಾತ್ರ ದಂಧೆಕೋರರ ಮೂಲ ಪತ್ತೆ ಹಚ್ಚಲು ಸಾಧ್ಯ. ಇಂತಹ ಅಕ್ರಮ ತಡೆಗೆ ಸಿಐಡಿ ತನಿಖೆ ಸಹಕಾರಿಯಾಗಬಲ್ಲದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೂಚ್ಯವಾಗಿ ತಿಳಿಸಿದ್ದಾರೆ.
ಕನ್ನಡಪ್ರಭದಲ್ಲಿ ಮಾತ್ರ
ಯಾದಗಿರಿ ಜಿಲ್ಲೆ ಗುರುಮಠಕಲ್‌ನಿಂದ ವಿದೇಶಗಳಿಗೆ ಅನ್ನಭಾಗ್ಯ ಅಕ್ಕಿಯ ಅಕ್ರಮ ರಪ್ತು ಕುರಿತು ಕನ್ನಡಪ್ರಭ ಮಾತ್ರ ಸೆ.8ರಂದು ವರದಿ ಮಾಡಿತ್ತು.