ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನ. 25 ರವರೆಗೆ ನಡೆಯುವ ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರವನ್ನು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೊಡಗು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದ್ದು, 1600 ವರ್ಷಗಳ ಹಿಂದೆಯೇ ಕೊಡಗನ್ನು ಹಲವರು ಆಡಳಿತ ಮಾಡಿದ್ದು, ಕೊಡಗಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು. ಕೊಡಗಿನ ಇತಿಹಾಸ, ಸಂಸ್ಕೃತಿ, ಪರಂಪರೆ ಕಲೆಗಳು ಶ್ರೀಮಂತಿಕೆ ಹೊಂದಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಆ ನಿಟ್ಟಿನಲ್ಲಿ ಕೋಟೆಯಲ್ಲಿ ಇತಿಹಾಸದ ಪರಂಪರಿಕ ಛಾಯಾಚಿತ್ರ ಪ್ರದರ್ಶನ ಮತ್ತಿತರ ಕಲಾ ಚಟುವಟಿಕೆಗಳು ನಡೆಯುವಂತಾಗಬೇಕು ಎಂದು ಸಂಸದರು ಹೇಳಿದರು. ನಗರದ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸಲಾಗುವುದು. ಕೋಟೆಯನ್ನು ಶಾಶ್ವತ ಪಾರಂಪರಿಕ ಕೇಂದ್ರವನ್ನಾಗಿ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನುಡಿದರು. ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಸಂಬಂಧ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಕಾರ್ಯಕ್ರಮಗಳು ಸಹ ಜರುಗುವಂತಾಗಬೇಕು. ಸಾರ್ವಜನಿಕರು ಸಹ ವೀಕ್ಷಣೆಗೆ ಅವಕಾಶವಾಗುವಂತಾಗಬೇಕು ಎಂದು ಸಂಸದರು ಸಲಹೆ ಮಾಡಿದರು. ಕೊಡಗು ಜಿಲ್ಲೆಗೆ ಅನನ್ಯ ಇತಿಹಾಸವಿದ್ದು, ರಾಜ್ಯದಲ್ಲಿ ಕದಂಬರು, ಹೊಯ್ಸಲರು, ವಿಜಯನಗರ ಹಾಗೂ ಮೈಸೂರು ರಾಜ ಅರಸರು ಹೀಗೆ ಹಲವರು ಆಡಳಿತ ಮಾಡಿದ್ದಾರೆ. ಕೊಡಗಿನ ರಾಜರು ಸಹ ಆಡಳಿತ ಮಾಡಿದ್ದಾರೆ. ಈ ಬಗ್ಗೆ ಇತಿಹಾಸವನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಸಂಸದರು ತಿಳಿಸಿದರು. ಕೊಡಗು ಮತ್ತು ಮೈಸೂರು ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು, ಮೈಸೂರು ದಸರಾ ಸಂದರ್ಭದಲ್ಲಿಯೂ ಮಡಿಕೇರಿಯಲ್ಲಿಯೂ ದಸರಾ ನಡೆಯುವುದು ವಿಶೇಷವಾಗಿದೆ ಎಂದು ಸಂಸದರು ಹೇಳಿದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಪಾರಂಪರಿಕ ಸ್ಥಳಗಳಲ್ಲಿ ಹಲವು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತಾಗಬೇಕು. ಜಿಲ್ಲೆಯ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ನಗರದ ಕೋಟೆಯು ಬಹಳಷ್ಟು ಸುಧಾರಣೆಯಾಗಿದ್ದು, ಇನ್ನೂ ಸುಧಾರಣೆಯಾಗಬೇಕಿದೆ ಎಂದರು. ಕೋಟೆಯ ಒಳ ಆವರಣದಲ್ಲಿರುವ ಕಟ್ಟಡವನ್ನು ನಿಯಮಾನುಸಾರ ತೆರವುಗೊಳಿಸಲು ಕ್ರಮವಹಿಸಬೇಕು. ಪಾರಂಪರಿಕ ಕಟ್ಟಡದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತಾಗಬೇಕು. ಕೋಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲರ ಸಲಹೆ, ಸಹಕಾರ ಅತ್ಯಗತ್ಯ ಎಂದರು. ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕರಾದ ಸುಜಿತ್ ನಯನ್ ಅವರು ಮಾತನಾಡಿ ರಾಜ್ಯ ಸರ್ಕಾರದಿಂದ 10 ಕೋಟಿ ರು. ಬಿಡುಗಡೆಯಾಗಿದ್ದು, ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ, ಇದೊಂದು ಪಾರಂಪರಿಕ ಕಟ್ಟಡವಾಗಿ ಉಳಿಯಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಸಹಕಾರ ನೀಡಿದೆ ಎಂದು ಹೇಳಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಅವರು ಮಾತನಾಡಿದರು. ಮಡಿಕೇರಿ ಕೊಡವ ಸಮಾಜದ ತಂಡದವರಿಂದ ಉಮ್ಮತ್ತಾಟ್ ಕಲಾಪ್ರದರ್ಶನ ನಡೆಯಿತು. ಹಾಗೆಯೇ ಕಚ್ಚಿದುಡಿ ಕೂಟದವರಿಂದ ಬಾಳೋಪಾಟ್, ಬೊಳಕಾಟ್ ಮತ್ತು ಕೋಲಾಟ ಕಲಾ ಪ್ರದರ್ಶನ ನಡೆಯಿತು. ಪುರಾತತ್ವ ಇಲಾಖೆ ಅಧೀಕ್ಷಕರಾದ ಡಾ.ಆರ್.ಎನ್.ಕುಮಾರನ್, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ, ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಸದಸ್ಯರು ಇತರರು ಇದ್ದರು.