ಯಕ್ಷಭಾರತಿ ಬೆಳ್ತಂಗಡಿ ದಶಮಾನೋತ್ಸವ: ಭಾರತ ಮಾತಾ ಪೂಜನ

KannadaprabhaNewsNetwork |  
Published : Feb 14, 2025, 12:30 AM IST
ಭಾರತ | Kannada Prabha

ಸಾರಾಂಶ

ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಭಾರತಿ ಬೆಳ್ತಂಗಡಿ ದಶಮಾನೋತ್ಸವ -ಭಾರತ ಮಾತಾ ಪೂಜನ ಕಾರ್ಯಕ್ರಮ ನೆರವೇರಿತು. ಸಾಧಕರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಾವು ಕಲೆ, ಸಾಹಿತ್ಯ, ಸಂಸ್ಕೃತಿ ಪ್ರಿಯರು. ವ್ಯಕ್ತಿಗಳಲ್ಲಿ ಅವುಗಳ ಬಗ್ಗೆ ಆಸಕ್ತಿಯಿಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಬಿಗಡಾಯಿಸುವುದು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.

ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಭಾರತಿ ಬೆಳ್ತಂಗಡಿ ದಶಮಾನೋತ್ಸವ -ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಮಾತೆಗೆ ಪುಷ್ಪಾರ್ಚನೆಗೈದು ದಶಮಾನೋತ್ಸವ ಸ್ಮರಣ ಸಂಚಿಕೆ ‘ದಶ ಪರ್ವ’ವನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿ ಮಾತನಾಡಿದರು.

ನಾವು ಭಾರತೀಯರಾಗಿ ರಾಷ್ಟ್ರ ನಿರ್ಮಾಣ, ದೇಶ ಕಟ್ಟುವ ಹಾಗು ದೇವರು ಮೆಚ್ಚುವ ಕೆಲಸ ಮಾಡುವ ಮೂಲಕ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು.

ದಿಕ್ಸೂಚಿ ಭಾಷಣ ಮಾಡಿದ ವಾಗ್ಮಿಅಂಕಣಕಾರ ಪ್ರಕಾಶ್ ಮಲ್ಪೆ, ಭಾರತ ಮಾತೆಗಿಂತ ಶ್ರೇಷ್ಠವಾದುದು ಬೇರೆ ಯಾವುದೂ ಇಲ್ಲ. ಭಾರತ ಮಾತೆಗೆ ಎತ್ತರದ ಸ್ಥಾನವಿದೆ. ಎಲ್ಲ ದೇಶದಲ್ಲೂ ಭಾರತದ ಅಸ್ತಿತ್ವ, ಸಂಸ್ಕೃತಿ ಅರ್ಥವಾಗುತ್ತದೆ. ಭಾರತೀಯ ಸಂಸ್ಕೃತಿ ವಿಶ್ವದ ಎಲ್ಲೆಡೆ ಅನುಸರಿಸಲ್ಪಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ನಮ್ಮ ಹೆಮ್ಮೆಯ ಯಕ್ಷಗಾನ ಕಲೆ ಸಂಸ್ಕೃತಿ, ಜೀವನದ ಒಂದು ಭಾಗ. ಅದು ಅನೇಕ ತಲೆಮಾರುಗಳ ತ್ಯಾಗ, ಪರಿಶ್ರಮದಿಂದ ಉಳಿದುಕೊಂಡು ಬಂದಿದೆ. ಯಕ್ಷಗಾನ ಕೇವಲ ಕಲೆಯಾಗಿ ಉಳಿಯದೆ ನಮ್ಮ ದೈನಂದಿನ ಜನಜೀವನದ ಆಗುಹೋಗುಗಳಲ್ಲಿ ಬೆರೆತುಕೊಂಡಿದೆ. ಅದು ನಶಿಸಿಹೋಗಲು ಬಿಡದೆ ನಿರಂತರ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ದೊಂಡೋಲೆ ಕಮಲಾ ಸೂರ್ಯನಾರಾಯಣ ರಾವ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪುರಂದರ ರಾವ್, ಮುಖ್ಯ ಅತಿಥಿ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಮತ್ತು ಧರ್ಮಸ್ಥಳ ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಶುಭಾಶಂಸನೆಗೈದರು.

ಶಿವಪ್ರಸಾದ್ ಸುರ್ಯ ನಿರ್ದೇಶನದ ಭಾರತಮಾತಾ ಪೂಜನ ಕಾರ್ಯಕ್ರಮದಲ್ಲಿ ಶ್ರೀನಿವಾಸ ರಾವ್ ವಂದೇ ಮಾತರಂ ವೈಯಕ್ತಿಕ ಗೀತೆ ಹಾಡಿ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಲಾಯಿತು. ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಪ್ರಸ್ತಾವಿಸಿ, ಸ್ಮರಣ ಸಂಚಿಕೆ ‘ದಶ ಪರ್ವ’ ಕುರಿತು ಮಾತನಾಡಿದರು. ಭವ್ಯ ಹೊಳ್ಳ ಮತ್ತು ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಂದಿಸಿದರು.

ಯಕ್ಷಭಾರತಿ ಪ್ರಶಸ್ತಿ ಪ್ರದಾನ:

ಇದೇ ಸಂದರ್ಭದಲ್ಲಿ ಗಣ್ಯ ಅತಿಥಿಗಳು ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಅಧ್ಯಕ್ಷ ಸಬ್ಬಣಕೋಡಿ ರಾಮ ಭಟ್ ಅವರಿಗೆ ಯಕ್ಷಭಾರತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ದಶಮಾನೋತ್ಸವ ಯುವ ಸಾಧನ ಪುರಸ್ಕಾರ ಹಾಗು ಧರ್ಮಸ್ಥಳ ಎಸ್ ಕೆ ಡಿ ಆರ್ ಡಿ ಪಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಪರವಾಗಿ ವಿವೇಕ್ ವಿನ್ಸೆಂಟ್ ಪಾಯಸ್ ಅವರಿಗೆ ದಶಮಾನೋತ್ಸವ ಸೇವಾ ತಂಡ ಗೌರವ ಹಾಗು ನಿವೃತ್ತ ಅರೋಗ್ಯ ಸಹಾಯಕಿಯರಾದ ಭುವನೇಶ್ವರಿ ಕುಂಟಿನಿ ಮತ್ತು ದೇವಮ್ಮ ಅವರಿಗೆ ಯಕ್ಷಭಾರತಿ ಸೇವಾ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಕ್ಷಭಾರತಿ ಸಂಚಾಲಕ ಮಹೇಶ್ ಕನ್ಯಾಡಿ, ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಕೋಶಾಧಿಕಾರಿ ಕುಸುಮಾಕರ ಕೊತ್ತೋಡಿ ಮೊದಲಾದವರು ಸಹಕರಿಸಿದರು.

ಒಂದೇ ವೇದಿಕೆಯಲ್ಲಿ ಮೂರು ಪ್ರಸಂಗದ ಯಕ್ಷಗಾನ ಪ್ರದರ್ಶನ:

ಯಕ್ಷಭಾರತಿ ದಶಮಾನೋತ್ಸವ ಪ್ರಯುಕ್ತ ಯಕ್ಷಭಾರತಿ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಚಂದ್ರಶೇಖರ ಧರ್ಮಸ್ಥಳ ನಿರ್ದೇಶನದಲ್ಲಿ ‘ಶ್ರೀ ರಾಮಾಭಿಯಾನ’ ಪ್ರಸಂಗ, ಸಬ್ಬಣಕೋಡಿ ರಾಮ ಭಟ್ ಅವರ ಶಿಷ್ಯರಿಂದ ‘ವೀರ ಬಬ್ರುವಾಹನ’ ಪ್ರಸಂಗ ಹಾಗು ರಾತ್ರಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ದೇವ ದರ್ಶನ’(ಜಾಂಬವತಿ ಕಲ್ಯಾಣ) ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ