ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನಮ್ಮ ಬದುಕಿನಲ್ಲಿ ವಿಶೇಷತೆ ಮೂಡಿಸಲು ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಅಸಾಧ್ಯವಾಗುವುದನ್ನು ಸಾಧ್ಯವಾಗಿಸುವ ನಮ್ಮ ಮನಸ್ಸಿಗೆ ಎಲ್ಲವನ್ನೂ ದಾಟುವ ಶಕ್ತಿಯಿದೆ. ಮಾಡುವ ಕೆಲಸದಲ್ಲಿ ಕಷ್ಟಗಳು ಎದುರಾದರೂ ಜಗ್ಗದೆ, ಬಗ್ಗದೆ ಮುಂದುವರಿದಾಗ ಮಾತ್ರ ಜೀವನದಲ್ಲಿ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಆಯೋಜಿಸಲಾದ ಯಕ್ಷಧ್ರುವ- ಯಕ್ಷ ಶಿಕ್ಷಣ ೨೦೨೪- ೨೫ನೇ ಸಾಲಿನ ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರೂ, ಮಹಾಭಾರತ, ರಾಮಾಯಣ ಮುಂತಾದ ಗ್ರಂಥಗಳನ್ನು ಓದದಿದ್ದರೂ, ಅವರಿಗೆ ಅವುಗಳ ಬಗ್ಗೆ ಅರಿವಿದೆ. ಇದಕ್ಕೆ ಕಾರಣ ಯಕ್ಷಗಾನ. ಯಕ್ಷಗಾನವು ನಮ್ಮ ಸಂಸ್ಕೃತಿಯನ್ನು ಪ್ರಸರಿಸುವ ಮಾಧ್ಯಮವಾಗಿದ್ದು, ಈ ಕಲೆಗೆ ಅದರದ್ದೇ ಆದ ಗೌರವ, ಮಹತ್ವ ಇದೆ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತಾಗ ಈ ಕಲೆ ಒಲಿಯಲು ಸಾಧ್ಯ ಎಂದರು. ಇದೇ ವೇಳೆ ಶ್ರೀರಾಮ ಶಾಲೆಗೆ ಕೊಠಡಿ ನಿರ್ಮಾಣಕ್ಕೆ ೧೦ ಲಕ್ಷ ರು. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿ ನಿವೃತ್ತ ಶಿಕ್ಷಕ, ಯಕ್ಷಗಾನ ಅರ್ಥಧಾರಿ ಗೋಪಾಲಕೃಷ್ಣ ಶೆಟ್ಟಿ ಕಳೆಂಜ ಮಾತನಾಡಿ, ಯಕ್ಷಗಾನವೆಂಬ ಶಬ್ದಕ್ಕೆ ಚುಂಬಕ ಶಕ್ತಿಯಿದ್ದು, ಇದರಿಂದ ಸಮಾಜಕ್ಕೆ ಸಂಸ್ಕಾರ ದೊರೆಯಲು ಸಾಧ್ಯ. ಇನ್ನಷ್ಟು ಕಲಾವಿದರ ಸೃಷ್ಟಿಯಾಗಬೇಕೆಂಬ ಉದ್ದೇಶದಿಂದ ಈ ತರಬೇತಿಯನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ್ದು, ಈಗಿನ ಯುವ ಪೀಳಿಗೆಯನ್ನು ಯಕ್ಷಗಾನ ಕ್ಷೇತ್ರದತ್ತ ಸೆಳೆದಿದ್ದಾರೆ ಎಂದರು.
ವೇದಿಕೆಯಲ್ಲಿ ಇಂದ್ರಪ್ರಸ್ಥ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ರಾಮ ಶಾಲೆಯ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ. ರಾಧಾ, ಪೋಷಕ ವೃಂದದ ಅಧ್ಯಕ್ಷ ಮೋಹನ್ ಭಟ್, ಯಕ್ಷಗುರು ಸತೀಶ ಆಚಾರ್ಯ ಮಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎನ್. ಉಮೇಶ್ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಗಣೇಶ್ ವಳಾಲು, ರವೀಶ್ ಎಚ್.ಟಿ., ಶ್ಯಾಮ ಸುದರ್ಶನ್, ಗುಣಕರ ಅಗ್ನಾಡಿ, ಶರತ್ ಕೋಟೆ, ಚಂದ್ರಶೇಖರ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಚಂದ್ರಶೇಖರ ಮಡಿವಾಳ, ಲೊಕೇಶ ಆಚಾರ್ಯ ಸರಪಾಡಿ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಗಣೇಶ್ ಆಚಾರ್ಯ, ಯತೀಶ್ ಶೆಟ್ಟಿ, ಶಶಿಧರ ಶೆಟ್ಟಿ , ಅಚಲ್ ಉಬರಡ್ಕ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಉದಯ ಅತ್ರ‍್ರಮಜಲು ಮತ್ತಿತರರು ಉಪಸ್ಥಿತರಿದ್ದರು. ಶ್ರೀರಾಮ ಶಾಲೆಯ ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್ ಸಿ. ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ತೇಜಾಕ್ಷಿ ವಂದಿಸಿದರು. ಶಿಕ್ಷಕರಾದ ಪವಿತ್ರಾ ಕೆ., ವಿಜಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.