ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ಕುವೆಂಪು ಕಲಾಮಂದಿರದಲ್ಲಿ ಯಕ್ಷಸಿರಿ ನಾಟ್ಯ ವೃಂದ, ಲಯನ್ಸ್ ಸಂಸ್ಥೆ, ಬಿಂಡಿಗ ಶ್ರೀ ದೇವೀರಮ್ಮ ದೇವಸ್ಥಾನ ಸಮಿತಿ ಜಂಟಿಯಾಗಿ ಡಾ.ಜೆ.ಪಿ.ಕೃಷ್ಣೇಗೌಡರ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ‘ಮಾಯಾ ಶೂರ್ಪನಕಿ’ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಚಿಕ್ಕಮಗಳೂರಿನಲ್ಲಿ ಡಾ.ಜೆ.ಪಿ.ಕೃಷ್ಣೇಗೌಡರ ಸಾರಥ್ಯದಲ್ಲಿ ಸಾಂಸ್ಕೃತಿಕ ವಲಯ ತುಂಬಾ ಶ್ರೀಮಂತವಾಗಿದೆ. ಕಳೆದ 45 ವರ್ಷಗಳಿಂದ ಯಕ್ಷಗಾನಕ್ಕೆ ಪಾತ್ರಧಾರಿ ವೇಷಧಾರಿಯಾಗಿ ದುಡಿದ ಹಿರಿಯ ಕಲಾವಿದ ಶಿವಕುಮಾರ್ ಬೇಗೂರ್ ಅವರನ್ನು ಸನ್ಮಾನಿಸಿ ಗೌರವಿಸಿರುವುದು ಈ ಮೂರು ಸಾಂಸ್ಕೃತಿಕ ಸಂಘಟನೆಗಳ ಗೌರವ ಹೆಚ್ಚಳವಾಗಿದೆ ಎಂದರು.ಯಕ್ಷಗಾನ ದಶಾವತಾರ ಕಥೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಉದ್ದೇಶದಿಂದ ಹುಟ್ಟಿರುವ ಜಾನಪದ ಕಲೆಯಾಗಿದ್ದು, ಹೊಸತನಗಳಿಗೆ ಪ್ರವೇಶ ಪಡೆದುಕೊಳ್ಳುತ್ತ, ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವ ಕಲೆಯಾಗಿದೆ ಎಂದು ಹೇಳಿದರು.
ಕಥೆ ಒಳಗೊಳ್ಳುವಿಕೆಯನ್ನು ಮೈಗೂಡಿಸಿಕೊಂಡು ಅಪರೂಪದ ಕಲೆಯ ಮೂಲಕ ಮಾಯಾ ಶೂರ್ಪನಕಿ ಯಕ್ಷಗಾನ ಪ್ರದರ್ಶನವಾಗುತ್ತಿದೆ ಎಂದು ಶ್ಲಾಘಿಸಿದರು.
ಸಾಹಿತಿ ಡಾ.ಶಿವರಾಮ್ ಕಾರಂತರು ಈ ಕಲೆಯ ಪಿತಾಮಹರಾಗಿದ್ದು, ಈ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಅಂತಹ ಅದ್ಭುತ ಕಲೆಯ ಪ್ರದರ್ಶನದಲ್ಲಿ ಸ್ಥಳೀಯ 9 ಮಹಿಳೆಯರು ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಯಕ್ಷ ಸಿರಿ ನಾಟ್ಯ ವೃಂದದವರ ವಾರ್ಷಿಕ ಗೌರವ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಸ್ವಚ್ಛವಾಗಿ ಕಲಿಯುವುದರ ಜತೆಗೆ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಅದು ಯಕ್ಷಗಾನ ಕಲಿಕೆಯಿಂದ ಮಾತ್ರ ಸಾಧ್ಯ. ಭಾಷೆ ಶುದ್ಧತೆಯ ಯಕ್ಷಗಾನ ಭಾವ ಶುದ್ಧಿಗೂ ಪ್ರೇರಣೆ ನೀಡುತ್ತದೆ. ಚಿಕ್ಕಮಗಳೂರಿನ ಹವ್ಯಾಸಿ ಕಲಾವಿದರುಗಳು ವೃತ್ತಿಪರರಿಗೆ ಬೆರಗು ಮೂಡಿಸುವಂತೆ ಕಲಾವಿದರಾಗಿ ರೂಪುಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ಎನ್. ಕುಮಾರ್, ಮಾಜಿ ಅಧ್ಯಕ್ಷ ಜಿ.ರಮೇಶ್, ಗಾಯಕ ಮಲ್ಲಿಗೆ ಸುಧೀರ್, ಡಾ. ಸಿ.ಕೆ. ಸುಬ್ರಾಯ, ನಾಗರಾಜ್ ರಾವ್ ಕಲ್ಕಟ್ಟೆ, ರಮೇಶ್ ಬೇಗಾರ್, ಅಣ್ಣಾವೇಲು ವೆಂಕಟೇಶ್, ಗೋಪಿಕೃಷ್ಣ, ಯಕ್ಷಗಾನ ಅಭಿಮಾನಿ ಬಳಗದ ಸುರೇಂದ್ರ ಶೆಟ್ಟಿ, ಗಾಯಕ ಎಂ.ಎಸ್.ಸುಧೀರ್ ಹಾಜರಿದ್ದರು.