ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಹಿರಿಯರು ತಮ್ಮ ಅನುಭವದಿಂದ ತಮ್ಮ ಜ್ಞಾನ ಸಂಪತ್ತನ್ನು ದಾರೆ ಎರೆದು ರಚಿಸಿದಂತಹ ಯಕ್ಷಗಾನ ಗ್ರಂಥಗಳನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ, ಜವಾಬ್ದಾರಿಗಳು ನಮ್ಮ ಮೇಲಿದೆ ಎಂದು ವಿಶ್ರಾಂತ ಸಂಸ್ಕೃತ ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ ಹೇಳಿದರು.ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಯಕ್ಷ ಸಪ್ತೋತ್ಸವ ಸಮಾರೋಪ ಮತ್ತು ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು, ಯಕ್ಷಗಾನಕ್ಕೆ ಕಲಾಕೇಂದ್ರದ ಕೊಡುಗೆಯನ್ನು ಸ್ಮರಿಸುತ್ತಾ, ಯಕ್ಷಗಾನ ಕಲಾವಿದರಲ್ಲಿರಬೇಕಾದ ಜವಾಬ್ದಾರಿ ಮತ್ತು ನಿಷ್ಟೆಗಳ ಬಗ್ಗೆ ತಿಳಿಸಿದರು.
ಕಲಾಕೇಂದ್ರದ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ವೈದ್ಯ ಡಾ.ಆದರ್ಶ ಹೆಬ್ಬಾರ, ನ್ಯಾಯವಾದಿ ಮಂಜುನಾಥ್ ಸಾಲಿಗ್ರಾಮ, ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ರಾಜೇಶ ಉಪಾಧ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಲಾಕೇಂದ್ರದ ಬೆಳವಣಿಗೆಯಲ್ಲಿ ಸಹಕರಿಸಿದ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು.
ಯಕ್ಷಗಾನ ಸಪ್ತಾಹದ ಯಕ್ಷಗಾನ ಸಂಯೋಜಿಸಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಗುರು ಗಣೇಶ ಚೇರ್ಕಾಡಿ, ಮಾಧ್ಯಮ ಸಂಯೋಜಕ ಶ್ರೀನಿವಾಸ ಉಪಾಧ್ಯಯರನ್ನು ಸನ್ಮಾನಿಸಲಾಯಿತು.
ಗುರುನರಸಿಂಹ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಅನಂತಪದ್ಮನಾಭ ಐತಾಳ್, ಕಲಾಕೇಂದ್ರದ ಮುಂದಿನ ಯೋಜನೆಗಳ ಬಗ್ಗೆ ವಿವರಿಸುತ್ತಾ ಕೇಂದ್ರದ ಬೆಳವಣಿಗೆಗೆ ದಾನಿಗಳ ಸಹಕಾರ ಕೋರಿದರು. ಮೇಘಶ್ಯಾಮ ಹೆಬ್ಬಾರ್, ಕಾರ್ಯಕ್ರಮ ನಿರ್ವಹಿಸಿದರು. ಕ್ಷಮಾ ಹೆಬ್ಬಾರ್ ವಂದಿಸಿದರು.
ಚಂದ್ರಕಾಂತ ನಾಯರ್ ಅವರಿಂದ ಸುಗಮ ಸಂಗೀತ, ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ಹಾಗೂ ದೊಂದಿ ಬೆಳಕಿನಲ್ಲಿ ಅಗ್ನಿ ಪರೀಕ್ಷೆ ಮತ್ತು ಶ್ರೀ ರಾಮ ನಿಜ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನ ಗೊಂಡಿತು.