ಯಕ್ಷಗಾನ ಪರಿಪೂರ್ಣ ಪಾರಂಪರಿಕ ರಂಗಕಲೆ: ಪ್ರೊ.ಸಾಮಗ

KannadaprabhaNewsNetwork | Published : Apr 22, 2024 2:21 AM

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಯಕ್ಷಗಾನದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ಎನ್ನುವುದು ಶಾಸ್ತ್ರೀಯ ಮತ್ತು ಜಾನಪದ, ಬೌದ್ಧಿಕ ಹಾಗೂ ಸೌಂದರ್ಯಾತ್ಮಕ, ಮನೋರಂಜಕ ಹಾಗೂ ಚಿಕಿತ್ಸೆಯ ಗುಣಗಳನ್ನೊಳಗೊಂಡ ಸಂಪೂರ್ಣವಾದ ಪಾರಂಪರಿಕ ರಂಗ ಕಲೆ ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ ಹೇಳಿದರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಯಕ್ಷಗಾನದ ಕುರಿತು ವಿಶೇಷ ಉಪನ್ಯಾಸ ನೀಡಿ, ಯಕ್ಷಗಾನ ಸಂಗೀತ, ನೃತ್ಯ, ಸಂಭಾಷಣೆ, ಅಭಿನಯ, ಕಥಾನಕ, ಶ್ರೀಮಂತ ಉಡುಗೆ, ತೊಡುಗೆಗಳನ್ನೊಳಗೊಂಡ ಸಂಪೂರ್ಣವಾದ ರಂಗಕಲೆ ಎಂದು ಅಭಿಪ್ರಾಯಪಟ್ಟರು.

ಕೆಲವು ನೂರು ವರ್ಷಗಳ ಹಿಂದೆ ಒಂದು ಗಾನ (ಸಂಗೀತ) ಪ್ರಕಾರವಾಗಿ ಹುಟ್ಟಿಕೊಂಡ ಈ ಕಲೆ, ಒಂದು ರಂಗಕಲೆಯಾಗಿ ಈಗಿರುವ ಸ್ವರೂಪವನ್ನು ಪಡೆದುಕೊಂಡಿದ್ದು ಬಹುಶಃ ಇನ್ನೂರು ವರ್ಷಗಳ ಹಿಂದೆ ಎನ್ನಬಹುದು. ಇದು ಹೆಚ್ಚಾಗಿ ಪೌರಾಣಿಕ ಕಥಾನಕಗಳನ್ನು ಆಧರಿಸಿದ ರಂಗಕಲೆಯಾದರೂ, ಇದರಲ್ಲಿ ಬೌದ್ಧಿಕ - ತಾತ್ವಿಕ ಚರ್ಚೆಗಳಿಗೆ ಇರುವ ಅವಕಾಶ ಗಮನಾರ್ಹವಾದುದು ಎಂದು ಪ್ರೊ.ಸಾಮಗ ನುಡಿದರು.

ಕಥಾನಕದ ಅಂತ್ಯ ಸಾಮಾನ್ಯವಾಗಿ ಪಾರಂಪರಿಕವಾದರೂ, ಇದರ ಆದಿ ಮತ್ತು ಅಂತ್ಯದ ಮಧ್ಯದಲ್ಲಿ ಬೌದ್ಧಿಕ - ತಾತ್ವಿಕ ಸೃಷ್ಟಿಶೀಲತೆಗೆ ಸಾಕಷ್ಟು ಅವಕಾಶವಿದೆ ಎಂದು ಅವರು ರಾಮಾಯಣ, ಮಹಾಭಾರತ ಪ್ರಸಂಗಗಳ ಉದಾಹರಣೆಯೊಂದಿಗೆ ವಿವರಿಸಿದರು.ಯಕ್ಷಗಾನದ ಆಂಗಿಕ, ವಾಚಿಕ, ಸಾತ್ವಿಕ ಹಾಗೂ ಆಹಾರ್ಯ ಅಂಶಗಳನ್ನು ವಿವರಿಸುತ್ತಾ ಪ್ರೊ.ಸಾಮಗರು, ಇಂದು ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿಶ್ಲೇಷಿಸಿದರು. ಒಂದು ದೇವಸ್ಥಾನದ ಧಾರ್ಮಿಕ ಕಲೆಯಾಗಿ ಆರಂಭಗೊಂಡ ಯಕ್ಷಗಾನ ಇಂದು ತನ್ನ ಕಲಾತ್ಮಕ ಅಂಶಗಳನ್ನು ವಿಸ್ತರಿಸಿಕೊಂಡಿದೆ. ಮಹಿಳೆಯರನ್ನೂ ಒಳಗೊಂಡಂತೆ ಎಲ್ಲ ಸಮುದಾಯಗಳಿಗೆ ಮುಕ್ತವಾಗಿ, ವಿಶ್ವದಾದ್ಯಂತ ಸಂಚರಿಸುತ್ತಿದೆ ಎಂದು ಹೇಳಿದರು.

ಧಾರ್ಮಿಕತೆಯಲ್ಲಿ ಮುಕ್ತತೆ, ಕಲಾತ್ಮಕತೆಯಲ್ಲಿ ಬೌದ್ಧಿಕತೆ, ಮನೋರಂಜನೆಯಲ್ಲಿನ ಶೈಕ್ಷಣಿಕ ಕಾರಣಗಳಿಗೆ, ಯಕ್ಷಗಾನ ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿದೆಯೆಂದು ಅವರು ಅಭಿಪ್ರಾಯಪಟ್ಟರು.

ಗಾಂಧಿಯನ್ ಸೆಂಟರ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಪ್ರೊ.ನೇಮಿರಾಜ್ ಶೆಟ್ಟಿ, ಡಾ.ಭ್ರಮರಿ ಶಿವಪ್ರಕಾಶ್, ಡಾ.ಜನಾರ್ದನ್ ಹಾವಂಜೆ, ಗೋವಿಂದ ಪ್ರಭು ಮತ್ತಿತರರು ಸಂವಾದದಲ್ಲಿ ಭಾಗವಹಿಸಿದರು. ಸಂಶೋಧಕಿ ಶ್ರುತಿ ಮತ್ತು ಅಧ್ಯಾಪಕಿ ಕೌಸ್ತುಭ ಕಾರ್ಯಕ್ರಮ ನಿರ್ವಹಿಸಿದರು.

Share this article