ಮಂದ ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನ: ಪಾರ್ತಿಸುಬ್ಬನ ಊರಿನಲ್ಲಿ ವಿಶಿಷ್ಟ ಪ್ರಯೋಗ

KannadaprabhaNewsNetwork | Published : Jan 30, 2025 12:31 AM

ಸಾರಾಂಶ

ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಜನ್ಮಭೂಮಿ ಕುಂಬಳೆಯ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ವಿಶೇಷವಾಗಿ ದೀಪದ ಬೆಳಕಿನಲ್ಲಿ ಯಕ್ಷಗಾನ ನಡೆಯಿತು. ಗಡಿನಾಡು ಕಾಸರಗೋಡಿನ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ‘ಕಾಲನೇಮಿ ಕಾಳಗ’ ಹಾಗೂ ‘ಜಾಂಬವತಿ ಕಲ್ಯಾಣ’ ಎಂಬ ಪೌರಾಣಿಕ ಕಥಾನಕಗಳ ಪ್ರದರ್ಶನಗಳು ನಡೆದವು.

ಕನ್ನಡಪ್ರಭ ವಾರ್ತೆ ಮಂಗಳೂರುಯಕ್ಷಗಾನದ ಇತಿಹಾಸದುದ್ದಕ್ಕೂ ಅನೇಕಾನೇಕ ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಜನ್ಮಭೂಮಿ ಕುಂಬಳೆಯ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ವಿಶೇಷವಾಗಿ ದೀಪದ ಬೆಳಕಿನಲ್ಲಿ ಯಕ್ಷಗಾನ ನಡೆಯಿತು.

ಗಡಿನಾಡು ಕಾಸರಗೋಡಿನ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ‘ಕಾಲನೇಮಿ ಕಾಳಗ’ ಹಾಗೂ ‘ಜಾಂಬವತಿ ಕಲ್ಯಾಣ’ ಎಂಬ ಪೌರಾಣಿಕ ಕಥಾನಕಗಳ ಪ್ರದರ್ಶನಗಳು ನಡೆದವು. ರಂಗಸಿರಿಯು ಈ ಹಿಂದೆ ದೀಪದ ಬೆಳಕಿನ ತಾಳಮದ್ದಳೆಯನ್ನೂ ನಡೆಸಿ ಯಶಸ್ವಿಯಾಗಿತ್ತು.ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಪರಿಕಲ್ಪನೆಯಂತೆ ಕಾರ್ಯಕ್ರಮವು ಮೂಡಿಬಂತು. ವೇದಿಕೆಗೆ ಗೂಟ ದೀಪದ ಬೆಳಕನ್ನು ಸಜ್ಜುಗೊಳಿಸಲಾಗಿತ್ತು. ವೇದಿಕೆಗೆ ಹೊರಭಾಗದ ಬೆಳಕು ಬಾರದಂತೆಯೂ ಎಚ್ಚರವಹಿಸಿ ವ್ಯವಸ್ಥೆ ಮಾಡಲಾಗಿತ್ತು. ಚೌಕಿಯಲ್ಲಿ ಬಣ್ಣಗಾರಿಕೆ ನಡೆಸಿದ್ದು ಕೂಡಾ ದೀಪದ ಬೆಳಕಿನಲ್ಲಿ ಎಂಬುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ. ಇದರಿಂದಾಗಿ ವಿದ್ಯಾರ್ಥಿ ಕಲಾವಿದರಿಗೆ ವಿಶೇಷ ಅನುಭೂತಿ ದೊರೆತುದಲ್ಲದೆ ಯಕ್ಷರಂಗದಲ್ಲಿ ಈ ಪ್ರಯೋಗವು ದಾಖಲಾರ್ಹವಾಯಿತು.ಕೆಲವೇ ದಿನಗಳಲ್ಲಿ ಅಗತ್ಯ ತಯಾರಿಗಳನ್ನು ನಡೆಸಿ ಈ ಪ್ರಯೋಗ ನಡೆಸಲಾಯಿತು. ಸನ್ಮನಸ್ಸುಗಳು ರಂಗವನ್ನು ಸಜ್ಜುಗೊಳಿಸುವಲ್ಲಿಂದ ತೊಡಗಿ ಕಾರ್ಯಕ್ರಮದುದ್ದಕ್ಕೂ ಇದ್ದು, ವೀಕ್ಷಿಸಿ ಸೂಕ್ತ ಸೂಚನೆಗಳನ್ನು ನೀಡಿದರು. ಪ್ರಬುದ್ಧ ಪ್ರೇಕ್ಷಕರು ಕಾರ್ಯಕ್ರಮದ ಘನತೆ ಹೆಚ್ಚಿಸಿದರು. ಪಾತ್ರವರ್ಗದಲ್ಲಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಡಾ. ವಿದ್ಯಾ ಆನಂದ್ ಕೆಕ್ಕಾರು, ಶಶಿಧರ ಕುದಿಂಗಿಲ, ಅಭಿಜ್ಞಾ ಭಟ್ ಬೊಳುಂಬು, ಮನ್ವಿತ್ ಕೃಷ್ಣ ನಾರಾಯಣಮಂಗಲ, ದೃಶ್ಯಾ ಕುಂಟಾರು, ಪ್ರಜ್ವಲ್ ಅಂಬುಕುಂಜೆ, ಮೋಕ್ಷಾ ಶೆಟ್ಟಿ, ಸುಮನ್, ಬಾನ್ವಿ ಉತ್ತಮ ಪ್ರದರ್ಶನ ನೀಡಿದರು.ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆ ಮದ್ದಳೆಗಳಲ್ಲಿ ವೇಣುಗೋಪಾಲ ಭಟ್ ಬರೆಕರೆ, ಸೂರ್ಯನಾರಾಯಣ ಪದಕಣ್ಣಾಯ ಹಾಗೂ ನೇಪಥ್ಯದಲ್ಲಿ ಕೇಶವ ಕಿನ್ಯ, ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದರು.................ಕಾರ್ಯಕ್ರಮ ಬಹಳ ಅದ್ಭುತವಾಗಿ ನಡೆಯಿತು. ಇಂಥಹ ಅಪೂರ್ವವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೇ ಸರಿ. ಅಪೂರ್ವವಾದ ಪ್ರಯೋಗವಾದದ್ದರಿಂದ ಎಂದಿಗಿಂತ ಹೆಚ್ಚು ಹುಮ್ಮಸ್ಸು, ಉತ್ಸಾಹ ಅನುಭವಕ್ಕೆ ಬಂದದ್ದಂತೂ ಸತ್ಯ. ಇಂಥಹ ಒಂದು ವಿಶೇಷವಾದ ಅನುಭವವನ್ನು ನಮ್ಮದಾಗಿಸಿಕೊಳ್ಳುವ ಅವಕಾಶವನ್ನು ಒದಗಿಸಿದ್ದಕ್ಕೆ ಗುರುಗಳಿಗೂ, ಸಂಸ್ಥೆಗೂ, ಕಾರ್ಯಕ್ರಮದ ಆಯೋಜಕರಿಗೂ ತುಂಬು ಹೃದಯದ ಧನ್ಯವಾದಗಳು.। ಅಭಿಜ್ಞಾ ಭಟ್ ಬೊಳುಂಬು--------------ಕಣಿಪುರದಲ್ಲಿ ಆಯೋಜಿತವಾದ ದೀಪದ ಬೆಳಕಿನ ಯಕ್ಷಗಾನ ನನಗೆ ಒಂದು ವಿಶಿಷ್ಟ ಅನುಭವವನ್ನು ಕೊಟ್ಟಿತು. ಈ ಮೊದಲೇ ದೊಂದಿ ಬೆಳಕಿನಲ್ಲಿ ಆಯೋಜಿಸಲ್ಪಟ್ಟಿದ್ದ ಯಕ್ಷಗಾನವನ್ನು ನೋಡಿದ್ದೆ. ಕಣಿಪುರದ್ದು ಉತ್ತಮ ದರ್ಜೆಯ ಕಾರ್ಯಕ್ರಮವಾಗಿತ್ತು. ಇನ್ನಷ್ಟು ಇಂತಹ ಪ್ರದರ್ಶನಗಳನ್ನು ಕೈಗೊಂಡರೆ, ಸುಧಾರಣೆ ಆದೀತು. ಹಾಗಿದ್ದರೂ ಇದು ಸೀಮಿತ ಸಂಖ್ಯೆಯ ಪ್ರೇಕ್ಷಕರು ಇರುವ, ಮುಚ್ಚಿದ ಸಭಾಂಗಣಗಳಿಗಷ್ಟೇ ಸೂಕ್ತ ಎಂಬುದೊಂದು ಕೊರತೆ ಇದೆ.। ಡಾ. ಮಹೇಶ ಪಿ.ಎಸ್., ಪ್ರೇಕ್ಷಕರು

Share this article