ಸಿದ್ದಾಪುರ: ಯಕ್ಷಗಾನ ದೇವರಿಗೆ ನೀಡುವ ಬೆಳಕಿನ ಸೇವೆ ಎಂದೇ ಪ್ರಸಿದ್ಧವಾದದ್ದು. ಸಮಾಜದಲ್ಲಿ ಧಾರ್ಮಿಕ ಶಕ್ತಿ ಜಾಗ್ರತವಾಗಲು, ಆಸಕ್ತರಿಗೆ ಗುಣಮಟ್ಟದ ಮನರಂಜನೆ ನೀಡುವಲ್ಲಿ ಯಕ್ಷಗಾನ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ. ಶ್ರೀಧರ ವೈದ್ಯ ಹೇಳಿದರು.
ಯಕ್ಷಗಾನ, ತಾಳಮದ್ದಳೆಯ ಹಿರಿಯ ಕಲಾವಿದ ಶ್ರೀನಿವಾಸರಾವ್ ಕಂಚಿಕೊಪ್ಪ ಮಾತನಾಡಿ, ಅನೇಕ ಹಿರಿಯ ಕಲಾವಿದರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಅನನ್ಯವಾದದ್ದು ಎಂದರು.
ಸನ್ಮಾನ ಸ್ವೀಕರಿಸಿದ ತಿಮ್ಮಪ್ಪ ಹೆಗಡೆ ಶಿರಳಗಿ ಮಾತನಾಡಿ, ಯಕ್ಷಗಾನ ಎಲ್ಲವನ್ನೂ ಕೊಟ್ಟಿರುವುದಕ್ಕೆ ಧನ್ಯತೆ ಇದೆ. ಈ ಕಲೆ ಅನ್ನ ಕೊಟ್ಟಿದೆ, ಸಂಸ್ಕಾರ ಕೊಟ್ಟಿದೆ. ದೇಶ, ವಿದೇಶ ಸಂಚಾರದ ಅವಕಾಶ ಒದಗಿಸಿದೆ. ಸಮೂಹ ಕಲೆಯಾದ ಯಕ್ಷಗಾನ ಕಲೆಗೆ ಕಲಾವಿದನ ಜತೆ ಪ್ರೇಕ್ಷಕರ, ಸಂಘಟಕರ ಸಾಂಗತ್ಯವೂ ಅಗತ್ಯ ಎಂದರು.ಸನ್ಮಾನ ಸ್ವೀಕರಿಸಿದ ಕೇಶವ ಹೆಗಡೆ ಕೊಳಗಿ ಮಾತನಾಡಿ, ಕಲಾವಿದನ ಬೆಳವಣಿಗೆಗೆ ಸುತ್ತಲಿನ ಪರಿಸರ ಮುಖ್ಯ. ಯಕ್ಷಗಾನ ಸರ್ವಾಂಗೀಣ ಕಲೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಯಕ್ಷಗಾನ ಕಲಿಕೆಗೆ ಈಗಿನ ಮಕ್ಕಳು, ಯುವಕರು ಮುಂದಾಗಬೇಕು ಎಂದರು.
ಹಿರಿಯ ಕಲಾವಿದ ಚಿದಂಬರ ಹೆಗಡೆ ಕೊಪ್ಪ ಸ್ವಾಗತಿಸಿದರು. ಪತ್ರಕರ್ತ ಗಂಗಾಧರ ಕೊಳಗಿ ಅಭಿನಂದನಾ ಮಾತುಗಳನ್ನಾಡಿದರು. ಗ್ರಾಪಂ ಸದಸ್ಯ ಶ್ರೀಕಾಂತ ಭಟ್ಟ ಕೊಳಗಿ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರೂಪಿಸಿದರು. ಸಂಘಟಕರಾದ ಬಂಗಾರೇಶ್ವರ ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ವೆಂಕಟರಮಣ ಹೆಗಡೆ, ವೇ. ಪ್ರಕಾಶ ಭಟ್ಟ ಕೊಳಗಿ ಸಹಕರಿಸಿದರು.ಆನಂತರ ಕರ್ಣಪರ್ವ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ, ಮಾಧವ ಭಟ್ (ಭಾಗವತಿಕೆ), ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ಹೆಗಡೆ ಕಂಚಿಮನೆ (ಮದ್ದಳೆ), ಗಣೇಶ ಗಾಂವ್ಕರ ಯಲ್ಲಾಪುರ (ಚಂಡೆ), ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳ್ಕೂರು (ಕರ್ಣ), ತಿಮ್ಮಪ್ಪ ಹೆಗಡೆ ಶಿರಳಗಿ (ಅರ್ಜುನ), ಸುಬ್ರಹ್ಮಣ್ಯ ಚಿಟ್ಟಾಣಿ (ಶಲ್ಯ), ಅಶೋಕ ಭಟ್ಟ ಸಿದ್ದಾಪುರ (ದುರ್ಯೋಧನ), ಉದಯ ಹೆಗಡೆ ಕಡಬಾಳ (ಕೃಷ್ಣ), ಪ್ರೀತಿ ಹೆಗಡೆ (ವೃಷಸೇನ) ನಿರ್ವಹಿಸಿದರು.