ಯಕ್ಷಗಾನ ಪ್ರಸಂಗಕರ್ತ ರಘುರಾಮ ಶೆಟ್ಟಿ ನಿಧನ

KannadaprabhaNewsNetwork |  
Published : Nov 27, 2025, 02:45 AM IST
ಕಂದಾವರ | Kannada Prabha

ಸಾರಾಂಶ

ಯಕ್ಷಗಾನ ರಂಗದ ಶ್ರೇಷ್ಠ ಸಾಧಕ, ಪ್ರಸಂಗಕರ್ತ, ಖ್ಯಾತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಕುಂದಾಪುರ: ಯಕ್ಷಗಾನ ರಂಗದ ಶ್ರೇಷ್ಠ ಸಾಧಕ, ಪ್ರಸಂಗಕರ್ತ, ಖ್ಯಾತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಬುಧವಾರ ಬೆಳಗ್ಗೆ ನಿಧನ ಹೊಂದಿದರು. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ನಾಟಕ ಕಲಾವಿದರಾಗಿ ರಘುರಾಮ ಶೆಟ್ಟಿ ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದರು.ಕಂದಾವರ ರಘುರಾಮ ಶೆಟ್ಟಿ ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ಕಂದಾವರದಲ್ಲಿ 1936 ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ- ಪುಟ್ಟಮ್ಮ ದಂಪತಿ ಪುತ್ರನಾಗಿ ಜನಿಸಿದ್ದರು. ಆರಂಭದಲ್ಲಿ ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ‘ಮಾದರಿ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದರು.ವಿದ್ಯಾರ್ಥಿಯಾಗಿದ್ದಾಗಲೇ ಮಕ್ಕಳ ಯಕ್ಷಗಾನದಲ್ಲಿ ಭಾಗವತಿಕೆ ಮಾಡಿ ಬಾಲ ಭಾಗವತ ಎಂದು ಖ್ಯಾತರಾಗಿದ್ದರು. ದಿ. ಎಂ. ಎಂ. ಹೆಗ್ಡೆ ಅವರ ಕೂಟದಲ್ಲಿ ಹವ್ಯಾಸಿಯಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದರು. ಅರ್ಥಧಾರಿಯಾಗಿಯೂ ತಾಳಮದ್ದಲೆಯಲ್ಲಿ ಖ್ಯಾತಿ ಪಡೆದಿದ್ದರು. 1978 ರಿಂದ ಪ್ರಸಂಗಕರ್ತರಾಗಿ ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀ ದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿಯಂತಹ ಸೂಪ‌ರ್ ಹಿಟ್ ಪ್ರಸಂಗಗಳನ್ನು ನೀಡಿದ್ದಾರೆ.ಕಂದಾವರ ರಘುರಾಮ ಶೆಟ್ಟಿ ನಿಧನದಿಂದ ಯಕ್ಷಗಾನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ