ಯಕ್ಷಗಾನ ವಿದ್ವಾಂಸ, ಹಿರಿಯ ಮದ್ದಲೆಗಾರ ಗೋಪಾಲಕೃಷ್ಣ ಕುರುಪ್‌ ಇನ್ನಿಲ್ಲ

KannadaprabhaNewsNetwork | Published : Mar 20, 2025 1:15 AM

ಸಾರಾಂಶ

ಹಿರಿಯ ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್‌ (90) ಬುಧವಾರ ಕೇರಳ ನೀಲೇಶ್ವರದ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಚಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದವರಲ್ಲಿ ಮೊದಲಿಗರಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯಕ್ಷಗಾನ ಕ್ಷೇತ್ರದ ವಿದ್ವಜ್ಜನ ಪಂಕ್ತಿ ಭಾಜನರಾಗಿದ್ದ ಹಿರಿಯ ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್‌(90) ಬುಧವಾರ ಕೇರಳ ನೀಲೇಶ್ವರದ ಸ್ವಗೃಹದಲ್ಲಿ ಬುಧವಾರ ನಿಧನರಾದರು.

ಚಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದವರಲ್ಲಿ ಮೊದಲಿಗರಾಗಿದ್ದರು. 1952 ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶ ದೊರೆತು ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ಟರ ಮೆಚ್ಚುಗೆಗಳಿಸಿ, ಮುಂದೆ, ವೃತ್ತಿಪರರಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ್ದರು. . ಮೃದಂಗ ವಿದ್ವಾನ್‌ ಟಿ. ಆರ್‌. ಕೃಷ್ಣನ್‌ರಲ್ಲಿ ಮೃದಂಗ ನುಡಿತದ ಸೂಕ್ಷ್ಮಗಳನ್ನು ಕಲಿತಿದ್ದರು. 80 ರ ದಶಕದಲ್ಲಿ ಕು. ಶಿ. ಹರಿದಾಸ ಭಟ್ಟ, ಮುಳಿಯ ಮಹಾಬಲ ಭಟ್ಟರ ನೇತೃತ್ವದಲ್ಲಿ ಎಂಜಿಎಂ ಕಾಲೇಜಿನ ಆರ್‌ಆರ್‌ಸಿಯಲ್ಲಿ ನಡೆದ ಹಿಮ್ಮೇಳದ ದಾಖಲಾತಿ ಕಮ್ಮಟದಲ್ಲಿ ಓರ್ವ ಪ್ರಮುಖ ಆಕರ ವ್ಯಕ್ತಿಯಾಗಿದ್ದರು.

ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ, ಕರ್ನಾಟಕ-ಕಲಾವಿಹಾರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕುರುಪ್‌ ಅವರು ಸುತ್ತಮುತ್ತಲ ಊರುಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ಯಕ್ಷಗಾನ ಶಿಕ್ಷಕರಾಗಿ ಹೆಸರು ಪಡೆದವರು. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

ಕೇರಳಮೂಲದವರಾದ ಕುರುಪ್‌ ಅವರ ಹಿರಿಯರು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಲ್ಲಿ ನೆಲೆಸಿದವರು. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚೆಗಿನ ದಿನಗಳಲ್ಲಿ ಕೇರಳದ ನಿಲೇಶ್ವರದ ಮಕ್ಕಳ ಮನೆಯಲ್ಲಿ ನೆಲೆಸಿದ್ದರು. ಯಕ್ಷಗಾನ ಕಲಾರಂಗದ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

ಗೋಪಾಲಕೃಷ್ಣ ಕುರುಪ್‌ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

Share this article