ಅಮೆರಿಕದ ಕಲಾವಿದರನ್ನು ಭಾವುಕಗೊಳಿಸಿದ ಯಕ್ಷಗಾನ!

KannadaprabhaNewsNetwork |  
Published : Jun 29, 2024, 12:31 AM IST
ಯಕ್ಷ28 | Kannada Prabha

ಸಾರಾಂಶ

ನ್ಯೂಯಾರ್ಕ್‌ ಮೂಲದ ರಂಗಕಲಾವಿದರ ತರಬೇತಿಯ ಭಾಗವಾಗಿ ‘ಕುಂಭಕರ್ಣ ಕಾಳಗ’ ಮತ್ತು ‘ಕಾಳಿಂಗ ಮರ್ದನ’ ಎಂಬ ಯಕ್ಷಗಾನ ಪ್ರಸಂಗಗಳನ್ನು ಪೂರ್ಣರಾತ್ರಿ ದೀವಟಿಗೆ ಬೆಳಕಿನಲ್ಲಿ ಬೆಂಗಳೂರಿನ ಮಾಗಡಿಯ ‘ಇನ್‌ಫನೆಟ್‌ ಸೋಲ್‌’ನಲ್ಲಿ ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಥಿಯೇಟರ್‌ ಯಕ್ಷ ಇದರ ಕಲಾವಿದರು ನ್ಯೂಯಾರ್ಕ್‌ ಮೂಲದ ರಂಗಕಲಾವಿದರ ತರಬೇತಿಯ ಭಾಗವಾಗಿ ‘ಕುಂಭಕರ್ಣ ಕಾಳಗ’ ಮತ್ತು ‘ಕಾಳಿಂಗ ಮರ್ದನ’ ಎಂಬ ಯಕ್ಷಗಾನ ಪ್ರಸಂಗಗಳನ್ನು ಪೂರ್ಣರಾತ್ರಿ ದೀವಟಿಗೆ ಬೆಳಕಿನಲ್ಲಿ ಬೆಂಗಳೂರಿನ ಮಾಗಡಿಯ ‘ಇನ್‌ಫನೆಟ್‌ ಸೋಲ್‌’ನಲ್ಲಿ ಪ್ರದರ್ಶಿಸಿದರು. ಪೃಥ್ವಿರಾಜ ಕವತ್ತಾರು ನಿರ್ದೇಶಿಸಿದ ಈ ಪ್ರಸಂಗವನ್ನು ಪ್ರಸಿದ್ಧ ರಂಗಕಲಾವಿದರಾದ ಕೀರ್ತನಾ ಕುಮಾರ್‌ ಮತ್ತು ಕೋನಾರ್ಕ್‌ ರೆಡ್ಡಿ ಸಂಯೋಜಿಸಿದ್ದರು.

ಇವು ರಾಮಾಯಣ ಮತ್ತು ಭಾಗವತ ಮಹಾಕಾವ್ಯಗಳಿಂದ ಆಯ್ದ ಕಥಾನಕಗಳಾಗಿದ್ದು, ಸುಮಾರು ಒಂದೂವರೆ ಗಂಟೆ ಅವಧಿಯ ಪೂರ್ವರಂಗದೊಂದಿಗೆ ಮತ್ತು ಶ್ರೀರಾಮ-ಲಕ್ಷ್ಮಣರ ಪೂರ್ಣ ಒಡ್ಡೋಲಗ, ಸುಗ್ರೀವನ ಪಾರಂಪರಿಕ ಪ್ರವೇಶ, ಹನುಮಂತನ ತೆರೆಪೊರಪ್ಪಾಟ್‌, ರಾವಣನ ನಿತ್ಯವಿಧಿ, ಕುಂಭಕರ್ಣನ ಸಾಂಪ್ರದಾಯಿಕ ನಡೆ, ಶೂರ್ಪನಖಿಯ ಪ್ರವೇಶ, ಕಾಳಿಂಗ- ಗರುಡರ ಯುದ್ಧಕುಣಿತ ಇತ್ಯಾದಿ ಪಾರಂಪರಿಕ ಅಂಶಗಳೊಂದಿಗೆ ಪ್ರದರ್ಶನವನ್ನು ಸಾಂಪ್ರದಾಯಿಕ ಘನತೆಯಲ್ಲಿ ಪ್ರಸ್ತುತಪಡಿಸಲಾಯಿತು. ಸುಮಾರು ಮೂವತ್ತು ಮಂದಿ ಅಮೆರಿಕನ್‌ ಕಲಾವಿದರು ಈ ಪ್ರದರ್ಶನವನ್ನು ಪೂರ್ಣರಾತ್ರಿ ವೀಕ್ಷಿಸಿದರು.

ಭಾರತೀಯ ನಾಟ್ಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡುತ್ತಿರುವ ಡಾ. ತಮಾಂಡಾ ಅವರು ಪ್ರದರ್ಶನವನ್ನು ವೀಕ್ಷಿಸಿ ಭಾವುಕರಾಗಿ, ಭಾರತೀಯ ಸಾಂಪ್ರದಾಯಿಕ ಪ್ರಾತಿನಿಧಿಕ ಪ್ರಕಾರವನ್ನು ಕಂಡ ಅನುಭವವಾಯಿತು. ಈ ಪ್ರದರ್ಶನ ನನ್ನ ಸಂಶೋಧನೆಗೆ ಪೂರಕವಾಗಿದೆ ಎಂದರು.

ಆರಂಭದಲ್ಲಿ ಪೃಥ್ವಿರಾಜ ಕವತ್ತಾರು, ಯಕ್ಷಗಾನದ ಪ್ರಸಂಗದ ಸ್ಥೂಲ ಪರಿಚಯ ನೀಡಿದರು. ಕೊನೆಗೆ ರಂಗಕಲಾವಿದರು ಯಕ್ಷಗಾನ ಕಲಾವಿದರ ಜೊತೆಗೆ ಸಂವಾದ ನಡೆಸಿದರು.ಈ ಪ್ರದರ್ಶನದಲ್ಲಿ ಮಹೇಶ ಕನ್ಯಾಡಿ, ವಿಶ್ವಾಸ್‌ ಕಾರ್ಬೆಟ್‌, ಸ್ಕಂದ ಕೊನ್ನಾರ್‌, ರಜನೀಶ ಪಡುಬಿದ್ರಿ, ಧೀರಜ್‌ ಹಿಮ್ಮೇಳದಲ್ಲಿ ಸಹಕರಿಸಿದರೆ, ಶಶಿಕಿರಣ ಕಾವು, ಶಂಭಯ್ಯ ಕಂಜರ್ಪಣೆ, ಸುನಿಲ್‌ ಭಾಸ್ಕರ ಪಲ್ಲಮಜಲು, ನಾಗೇಶ ಬೈಲೂರು, ಪವನ್‌ದೇವ್‌ ವೇಣೂರು, ಬಾಲಕೃಷ್ಣ ಮಿಜಾರು, ಲಕ್ಷ್ಮಣ ಮರಕಡ, ಸುರೇಶ್‌ ಬಾಯಾರ್‌, ಶಿವಾನಂದ ಪೆರ್ಲ, ಆದರ್ಶ ಮೂಡುಬಿದಿರೆ, ಶ್ರೀಶ ನಾರಾಯಣ ಹೆಗ್ಡೆ, ರಕ್ಷಿತ್‌ ಗುಡ್ಡೆಯಂಗಡಿ, ಸಂತೋಷ್‌ ಪಂಜಿಕಲ್‌, ಅನ್ವೇಶ್‌ ಬಂಟ್ವಾಳ್‌ ಮುಮ್ಮೇಳದಲ್ಲಿ ಭಾಗವಹಿಸಿದ್ದರು. ಪ್ರಮೋದ್‌, ಶಿವರಾಮ ಪಂಜ, ನಿತಿನ್‌ ಪಡುಬಿದ್ರಿ ನೇಪಥ್ಯ ಕಲಾವಿದರಾಗಿ ನೆರವಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!