ರಾಜ್ಯದಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಸಿಎಂ ಆಗ್ರಹ

KannadaprabhaNewsNetwork |  
Published : Jun 29, 2024, 12:30 AM ISTUpdated : Jun 29, 2024, 10:25 AM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದರು.

  ನವದೆಹಲಿ :  ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್‌ ಪಡೆಯ ಬಲವರ್ಧನೆಗೆ ಸಂಬಂಧಿಸಿದ ಪ್ರಸ್ತಾವನೆಗಳ ಮಂಜೂರಾತಿ ಕುರಿತು ಗಮನ ಸೆಳೆದರು.

ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರ 80 ಕೋಟಿ ರು. ವೆಚ್ಚದಲ್ಲಿ India Reserve Battalion ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 2 ಬೆಟಾಲಿಯನ್‌ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಿದರು.

ನಿರ್ಭಯಾ ನಿಧಿಯಡಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್‌ ಸಿಟಿ ಯೋಜನೆಯನ್ನು ತಲಾ 200 ಕೋಟಿ ರು.ನಂತೆ ಒಟ್ಟು1000 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡುವುದು, ಹೈಕೋರ್ಟ್‌ ಆದೇಶದಂತೆ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ ಕ್ಯಾಮೆರಾ (Body worn camera) ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ 175 ಕೋಟಿ ರು. ವೆಚ್ಚದಲ್ಲಿ 58,546 ಕ್ಯಾಮೆರಾ(Body worn camera) ಖರೀದಿಸುವ ಅಗತ್ಯವಿದ್ದು, 100 ಕೋಟಿ ರು. ನೆರವು ನೀಡುವಂತೆ ಮನವಿ ಸಲ್ಲಿಸಿದರು.

ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ ಮಾದರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿಗೂ ಕ್ಯಾಂಟೀನ್‌ ಸ್ಥಾಪನೆಗೆ ಅಗತ್ಯ ಅನುಮತಿಗಳನ್ನು ಒದಗಿಸುವುದು, ಪೊಲೀಸ್‌ ವಸತಿ ಗೃಹಗಳ ನಿರ್ಮಾಣಕ್ಕೆ ನೆರವು, ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ಮತ್ತಿತರ ವಿಷಯಗಳ ಕುರಿತೂ ಕೇಂದ್ರ ಸಚಿವರೊಂದಿಗೆ ಈ ವೇಳೆ ಚರ್ಚಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ಬಾಡಿಗೆ ಕಟ್ಟದಲ್ಲಿರುವ/ ಶಿಥಿಲಾವಸ್ಥೆಯಲ್ಲಿರುವ 100 ಪೊಲೀಸ್‌ ಠಾಣೆಗಳಿಗೆ ಹೊಸ ಕಟ್ಟಡವನ್ನು ತಲಾ 3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 300 ಕೋಟಿ ರು. ಅಗತ್ಯವಿದೆ. ಇದಕ್ಕೆ ನೆರವು ಒದಗಿಸುವಂತೆಯೂ ಗೃಹ ಸಚಿವರನ್ನು ಕೋರಿದರು.

ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೋಧನೆಯಲ್ಲಿ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳಲಿ: ಪ್ರೊ. ಎ.ಎಂ. ಖಾನ್
ಮಾನಸಿಕ, ಶಾರೀರಿಕ ಸದೃಢತೆಗೆ ಕ್ರೀಡಾ ಉತ್ಸವಗಳು ಸಹಕಾರಿ: ಸಭಾಪತಿ ಹೊರಟ್ಟಿ