ಯಲ್ಲಮ್ಮಾ ರೈಲ್ವೆ ಮಾರ್ಗ : 9 ದಿನಗಳ ಹೋರಾಟ ಅಂತ್ಯ

KannadaprabhaNewsNetwork |  
Published : Jan 31, 2026, 03:00 AM IST
Savadatti

ಸಾರಾಂಶ

ಸವದತ್ತಿಪಟ್ಟಣದ ಗಾಂಧಿಚೌಕದಲ್ಲಿ ಲೋಕಾಪುರ, ರಾಮದುರ್ಗ, ಸವದತ್ತಿ ಧಾರವಾಡದ ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗ ನಿರ್ಮಾಣ ಕುರಿತು ನಿರಂತರವಾಗಿ ಒಂಬತ್ತು ದಿನಗಳ ಕಾಲ ನಡೆಯುತ್ತಿರುವ ಸತ್ಯಾಗ್ರಹದ ಹೋರಾಟವನ್ನು ಶುಕ್ರವಾರ ಅಂತ್ಯಗೊಳಿಸಲಾಗಿದೆ.

 ಸವದತ್ತಿ :  ಪಟ್ಟಣದ ಗಾಂಧಿಚೌಕದಲ್ಲಿ ಲೋಕಾಪುರ, ರಾಮದುರ್ಗ, ಸವದತ್ತಿ ಧಾರವಾಡದ ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗ ನಿರ್ಮಾಣ ಕುರಿತು ನಿರಂತರವಾಗಿ ಒಂಬತ್ತು ದಿನಗಳ ಕಾಲ ನಡೆಯುತ್ತಿರುವ ಸತ್ಯಾಗ್ರಹದ ಹೋರಾಟವನ್ನು ಶುಕ್ರವಾರ ಅಂತ್ಯಗೊಳಿಸಲಾಗಿದೆ.

ಒಂಬತ್ತನೇ ದಿನದ ಮುಕ್ತಾಯದ ಸತ್ಯಾಗ್ರಹದಲ್ಲಿ ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಯುಸಿಸಿ ನಾಮನಿರ್ದೇಶಕ ಸದಸ್ಯ ಎಫ್.ಎಸ್.ಸಿದ್ದನಗೌಡರ ಭಾಗವಹಿಸಿ ಮಾತನಾಡಿ, ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗ ನಿರ್ಮಾಣದ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಹೋರಾಟಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.

120 ಕಿಮೀ ಈ ರೈಲು ಮಾರ್ಗ

ಮುಂಬರುವ ಕೇಂದ್ರದ ಬಜೆಟ್‌ನಲ್ಲಿ 120 ಕಿಮೀ ಈ ರೈಲು ಮಾರ್ಗದ ಕುರಿತು ಚರ್ಚಿಸಲು ನಮ್ಮ ಸಂಸದರಾದ ಜಗದೀಶ ಶೆಟ್ಟರ್‌ ಮತ್ತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿಯವರು ಸೂಕ್ತ ಮಾಹಿತಿಯನ್ನು ಪಡೆದುಕೊಂಡಿದ್ದು, ಅದರಂತೆ ಬಜೆಟ್ ಅಧಿವೇಶನದಲ್ಲಿ ಅವಶ್ಯಕವಾಗಿರುವ ನಮ್ಮ ಭಾಗದ ರೈಲ್ವೆ ಮಾರ್ಗದ ಕುರಿತು ಚರ್ಚೆ ನಡೆಸುವಂತೆ ಅವರಲ್ಲಿ ವಿನಂತಿಸಲಾಗಿದೆ. ಅವರು ಸಹ ಕೇಂದ್ರದ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಒಂಬತ್ತು ದಿನಗಳ ಕಾಲ ನಡೆದ ಈ ಹೋರಾಟ

ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ ಖಾಜಿ ಮಾತನಾಡಿ, ಒಂಬತ್ತು ದಿನಗಳ ಕಾಲ ನಡೆದ ಈ ಹೋರಾಟದಲ್ಲಿ ಅನೇಕರು ಬೆಂಬಲ ನೀಡಿ ಸಹಕಾರ ನೀಡಿದ್ದಾರೆ. ನಮ್ಮ ಈ ರೈಲ್ವೆ ಮಾರ್ಗದ ಹೋರಾಟಕ್ಕೆ ಕೇಂದ್ರ ಸರ್ಕಾರವು ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬಹುದು ಎಂಬ ಭರವಸೆಯಲ್ಲಿದ್ದೇವೆ. ನಮ್ಮ ಭರವಸೆ ಸಂಪೂರ್ಣವಾಗಿ ಈಡೇರುವವರೆಗೆ ಒಂದಿಲ್ಲೊಂದು ರೂಪದಲ್ಲಿ ನಮ್ಮ ಹೋರಾಟವನ್ನು ಮುಂದುವರಿಸೋಣ. ಈ ಭಾಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣದ ಗುರಿಯನ್ನು ನಾವು ಖಂಡಿತ ತಲುಪುತ್ತೇವೆ ಎಂದರು.

ಗದಗ ಬೆಟಗೇರಿಯ ಅಶೋಕ ಸುತಾರ ಕಲಾತಂಡದವರು ಪಾಂಡವರ ವೇಷವನ್ನು ಧರಿಸಿಕೊಂಡು ನಮ್ಮ ಭಾಗದ ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗದ ಬೇಡಿಕೆಗೆ ಒತ್ತಾಯಿಸಿ ಎಪಿಎಂಸಿಯಿಂದ ಮೆರವಣಿಗೆ ಮೂಲಕ ಗಾಂಧಿಚೌಕದಲ್ಲಿರುವ ಸತ್ಯಾಗ್ರಹದ ವೇದಿಕೆಗೆ ಆಗಮಿಸಿ ಬೆಂಬಲ ನೀಡಿದರು.

ಈ ವೇಳೆ ಬಸವರಾಜ ಬಿಜ್ಜೂರ, ಫಕರುದ್ದೀನ ನದಾಫ, ಬಸವರಾಜ ಕಪ್ಪಣ್ಣವರ, ಮಲ್ಲಿಕಾರ್ಜುನ ಬೀಳಗಿ, ಉಮೇಶ ಭೀಮನ್ನವರ, ರಾಜಶೇಖರ ನಿಡವಣಿ, ಭರಮಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ಕಲಾದಗಿ ಇತರರು ಉಪಸ್ಥಿತರಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ
ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ : ಸಚಿವರ ಸವಾಲ್