ಯಲ್ಲಾಪುರ ಪಪಂ ಕಾಂಗ್ರೆಸ್‌ ತೆಕ್ಕೆಗೆ, ಅಧ್ಯಕ್ಷರಾಗಿ ನರ್ಮದಾ ನಾಯ್ಕ ಆಯ್ಕೆ

KannadaprabhaNewsNetwork | Published : Aug 22, 2024 12:49 AM

ಸಾರಾಂಶ

ಪಪಂ ಅಧ್ಯಕ್ಷ ಸ್ಥಾನಕ್ಕೆ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಮಿತ್ ಅಂಗಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಸೀಲ್ದಾರ್ ಅಶೋಕ ಭಟ್ಟ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯೂ ಆದ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಅಮಿತ್ ಅಂಗಡಿ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಈ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಭಾಗವಹಿಸದಿರುವುದರಿಂದ ಹಾಗೂ ಪಪಂ ಅಧ್ಯಕ್ಷ ಸ್ಥಾನಕ್ಕೆ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಮಿತ್ ಅಂಗಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಸೀಲ್ದಾರ್ ಅಶೋಕ ಭಟ್ಟ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಪಪಂನ ಕಾಂಗ್ರೆಸ್ ಬೆಂಬಲಿತ ೧೧, ಜೆಡಿಎಸ್ ಬೆಂಬಲಿತ ಓರ್ವ ಹಾಗೂ ಓರ್ವ ಪಕ್ಷೇತರ ಸದಸ್ಯರು ಸೇರಿದಂತೆ ಒಟ್ಟು ೧೩ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಉಳಿದ ೫ ಬಿಜೆಪಿ ಸದಸ್ಯರು ಗೈರಾಗಿದ್ದರು.

ಶಾಸಕ ಶಿವರಾಮ ಹೆಬ್ಬಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಶಾಸಕ ಶಿವರಾಮ ಹೆಬ್ಬಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ತಮಗೆ ಸೋಲಾಗುತ್ತದೆ ಎಂಬ ಖಚಿತತೆಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಬಹಿಷ್ಕರಿಸಿದ್ದಾರೆ. ಆದರೆ, ಸಭೆಗೆ ಹಾಜರಾತಿ ನನ್ನ ಹಕ್ಕಾಗಿರುವುದರಿಂದ ಭಾಗವಹಿಸಿದ್ದೇನೆ ಎಂದರು.

ಬಿಜೆಪಿಯ ಉಪಾಧ್ಯಕ್ಷ ಅಭ್ಯರ್ಥಿಯನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಹುನ್ನಾರ ನಡೆಸಿದ್ದೀರಿ ಎಂಬ ಆರೋಪವಿದೆ ಎಂಬ ಪ್ರಶ್ನೆಗೆ, ಓರ್ವ ಶಾಸಕರಿಗಿರುವ ಗೌರವ, ಘನತೆ ಬಿಟ್ಟು ಮನಬಂದಂತೆ ಅವಹೇಳನಕಾರಿ ಭಾಷೆ ಬಳಸಿ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಹರಿಬಿಟ್ಟಿರುವುದರಿಂದ ಸೈಬರ್ ಕ್ರೈಂನಡಿ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ. ನಾನು ಪೊಲೀಸರಿಗೆ ದೂರನ್ನೂ ನೀಡಿಲ್ಲ. ಆದರೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಬಿಜೆಪಿ ಹೀಗೆ ಆಪಾದನೆ ಮಾಡುತ್ತಿದೆ ಎಂದರು.

ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಅವರು, ಕಾಂಗ್ರೆಸ್ ಬೆಂಬಲಿತ ೧೨ ಸದಸ್ಯರು ಪಪಂನಲ್ಲಿದ್ದು, ಬಿಜೆಪಿಯವರ ಬಳಿ ಇರುವ ಕೇವಲ ೪ ಸದಸ್ಯರಿಂದ ಚುನಾವಣೆ ಎದುರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಮಾತನಾಡಿದರು. ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಉಲ್ಲಾಸ ಶಾನಭಾಗ, ಪ್ರಶಾಂತ ಸಭಾಹಿತ, ನೂತನ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

Share this article