ಯಮನೂರ ಗ್ರಾಮದ ಹತ್ತಿರ ಹರಿಯುವ ಬೆಣ್ಣಿಹಳ್ಳದ ನೀರು ಚರ್ಮ ರೋಗ ನಿವಾರಕವಾಗಿದೆ. ಹೀಗಾಗಿ ಜಾತ್ರೆಗೆ ಆಗಮಿಸುವ ಭಕ್ತರು ಹಳ್ಳದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಜತೆಗೆ ತಮ್ಮ-ತಮ್ಮ ಕುಟುಂಬದವರಿಗೆ ಹಳ್ಳದ ನೀರು ತೆಗೆದುಕೊಂಡು ಹೋಗುತ್ತಾರೆ.
ಫಕೃದ್ದೀನ್ ಎಂ ಎನ್
ನವಲಗುಂದ:
ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ಭಕ್ತ ಸಮೂಹ ಹೊಂದಿರುವ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ತಾಲೂಕಿನ ಯಮನೂರು ಗ್ರಾಮದ ರಾಜಾಬಾಗ ಸವಾರ ಊರ್ಫ ಚಾಂಗದೇವ ಮಹಾರಾಜರ ಜಾತ್ರೆ ಶನಿವಾರದಿಂದ ಆರಂಭಗೊಂಡಿದ್ದು, ಮಾ. 8ರಂದು ಉರೂಸ್ (ಪುಣ್ಯತಿಥಿ) ಜರುಗಲಿದೆ. ತಿಂಗಳಾದ್ಯಂತ ಈ ಜಾತ್ರಾ ಮಹೋತ್ಸವ ನಡೆಯುವುದು ವಿಶೇಷ.
ಭಾವೈಕ್ಯದ ಸಂಕೇತ ಸಾರಿದ ಚಾಂಗದೇವ ಪುಣ್ಯಸ್ಥಳ ಯಮನೂರಿನಲ್ಲಿ ಶನಿವಾರ ಗಂಧಾಭಿಷೇಕದೊಂದಿಗೆ ಲಕ್ಷಾಂತರ ಭಕ್ತರ ನಡುವೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಚಾಂಗದೇವರ ಗಂಧಾಭಿಷೇಕದ ಮೂರ್ತಿಯನ್ನು ಹೊತ್ತ ಬರ್ಗೆ ಕುಟುಂಬದಿಂದ ಪೂಜೆ ಹಾಗೂ ಮುಸ್ಲಿಂ ಧರ್ಮಗುರುಗಳಿಂದ ಫಾತಿಹಾ (ಓದಿಕೆ) ಏಕಕಾಲಕ್ಕೆ ನಡೆಯಿತು. ಗಂಧಾಭಿಷೇಕಕ್ಕೆ ಸಂಬಂಧಿಸಿದಂತೆ ಬರ್ಗೆ ಮನೆತನ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿಹಳ್ಳದ ನೀರು ತಂದು ಹಳ್ಳದ ನೀರಿನಿಂದ ಗರ್ಭಗುಡಿಯಲ್ಲಿ ದೀಪ ಹಚ್ಚಿದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ರಸ್ತೆಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಬೆಣ್ಣೆ ಹಳ್ಳದ ವರೆಗೆ ರಸ್ತೆ ಹಾಗೂ ಸೇತುವೆ ಮೇಲೆ ನಿಂತು ಮೆರವಣಿಗೆ ದರ್ಶನ ಪಡೆಯುವುದರೊಂದಿಗೆ ಪೂಜೆ ಸಲ್ಲಿಸಿದರು.
ಈ ಕ್ಷೇತ್ರದ ಆಧಿದೈವ:
ಮಹರಾಷ್ಟ್ರದ ಸಂತ ಪರಂಪರೆಯ ಮಹಿಮಾನ್ವಿತ ಈ ಚಾಂಗದೇವ. ಮಹಾರಾಜರು ಮುಪ್ಪು-ಸಾವನ್ನೂ ಮೀರಿ 1400 ವರ್ಷ ಬದುಕನ್ನು ಸವೆಸುತ್ತಿದ್ದಾಗ ವಿಠೋಬ ದೇವರು ಯಾಕಪ್ಪ ವ್ಯರ್ಥ ಕಾಲಹರಣಕ್ಕೆ ಮಾರು ಹೋಗಿದ್ದಿ ಎಂದು ಸ್ವಪ್ನ ಸಂದೇಶ ನೀಡಿದರಂತೆ. ಆಗ ಮಹಾರಾಷ್ಟ್ರದ ಮಹಿಮಾ ಪುರುಷ ಸಂತ ಶ್ರೇಷ್ಠ ಜ್ಞಾನ ದೇವರಿಂದ ದೀಕ್ಷೆ ಪಡೆದು ಧರ್ಮೊದ್ಧಾರ, ಭಕ್ತ ಪರಿಪಾಲನೆಗೆ ಮುಂದಾದರಂತೆ. ಚಾಂಗದೇವರ ಶಿಷ್ಯನಾಗಿದ್ದ ಮಹಾರಾಷ್ಟ್ರದ ಕ್ಷೇತ್ರೋಜಿರಾಮ ಬರ್ಗೆ ಎಂಬ ಭಕ್ತ ನವಲಗುಂದ ತಾಲೂಕಿನ ಯಮನೂರ ಗ್ರಾಮಕ್ಕೆ ಆಗಮಿಸಿ ಅಲ್ಲಿ ನರಸಿಂಹ ಸಾಲಿಗ್ರಾಮವೊಂದನ್ನು ಪ್ರತಿಷ್ಠಾಪಿಸಿದ. ಗುರುವಿನ ಆಜ್ಞೆಯಂತೆ ಕ್ಷೇತ್ರೋಜಿರಾವ ಬರ್ಗೆ ಸಾಲಿ ಗ್ರಾಮಕ್ಕೆ ತನ್ನ ಬೆರಳಿನ ಐದು ಹನಿ ರಕ್ತದಿಂದ ಪೂಜಿಸುತ್ತಿದ್ದ ಸಾಲಿಗ್ರಾಮಕ್ಕೆ ಮುಂದಿನ ಪೀಳಿಗೆ ರಕ್ತದಿಂದ ಪೂಜೆ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಸಾಲಿಗ್ರಾಮವನ್ನು ಮುಚ್ಚಿಸಿ ಗದ್ದುಗೆ ರೂಪ ನೀಡಿದ್ದನಂತೆ. ಅಂದಿನಿಂದ ಇಂದಿಗೂ ಬರ್ಗೆ ಮನೆತನದವರೇ ಈ ಕ್ಷೇತ್ರದ ಅರ್ಚಕರು.
ಹಲವು ಪವಾಡ:
ಜ್ಞಾನದೇವರನ್ನು ಕಾಣಲು ಚಾಂಗದೇವ ಹುಲಿಯನ್ನೇ ವಾಹನ ಮಾಡಿ ಚೇಳನ್ನು ಮೂಗುದಾರ, ಹಾವಿನ ಬಾರಕೋಲು ಮಾಡಿಕೊಂಡು ಹೊರಟನಂತೆ. ಈತನ ಈ ವೇಷ ಕಂಡ ಜ್ಞಾನ ದೇವರು ತಾವು ಕುಳಿತ ಗೋಡೆಯನ್ನೇ ನಡೆಸಿಕೊಂಡು ಬಂದರಂತೆ. ಅಹಂ ಮಾಯವಾಗಿ ಜ್ಞಾನ ದೇವರಿಗೆ ಶರಣಾದರಂತೆ. ಅಂದಿನಿಂದ ಚಾಂಗದೇವನಾಗಿ ಹಿಂದುಗಳಿಗೆ, ರಾಜಾ ಭಾಗಸವಾರನಾಗಿ ಮುಸ್ಲಿಮರಿಗೆ ಯಮನೂರು ಭಾವೈಕ್ಯದ ಕ್ಷೇತ್ರವಾಗಿದೆ.
ರೋಗ ನಿವಾರಕ ಬೆಣ್ಣಿ ಹಳ್ಳದ ನೀರು:
ಯಮನೂರ ಗ್ರಾಮದ ಹತ್ತಿರ ಹರಿಯುವ ಬೆಣ್ಣಿಹಳ್ಳದ ನೀರು ಚರ್ಮ ರೋಗ ನಿವಾರಕವಾಗಿದೆ. ಹೀಗಾಗಿ ಜಾತ್ರೆಗೆ ಆಗಮಿಸುವ ಭಕ್ತರು ಹಳ್ಳದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಜತೆಗೆ ತಮ್ಮ-ತಮ್ಮ ಕುಟುಂಬದವರಿಗೆ ಹಳ್ಳದ ನೀರು ತೆಗೆದುಕೊಂಡು ಹೋಗುತ್ತಾರೆ. ಜಾತ್ರೆ ನಿಮತ್ತ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು. ರಾಜ್ಯ ಹೊರ ರಾಜ್ಯದಿಂದ ಜಾತಿ, ಭೇದವಿಲ್ಲದೇ ಸಮರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.