ಬಾಲಾಜಿ ಕ್ಯಾಂಪ್‌ಗೆ ರಾಕಿಂಗ್‌ಸ್ಟಾರ್ ಯಶ್ ಭೇಟಿ; ನೂಕು-ನುಗ್ಗಲು

KannadaprabhaNewsNetwork | Published : Mar 1, 2024 2:19 AM

ಸಾರಾಂಶ

ಬಳ್ಳಾರಿ ನಗರ ಹೊರವಲಯದ ಬಾಲಾಜಿ ನಗರ ಕ್ಯಾಂಪ್‌ ಬಳಿ ನೂತನವಾಗಿ ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮಕ್ಕೆ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ, ಪೂಜೆ ಸಲ್ಲಿಸಿದರು.

ಬಳ್ಳಾರಿ: ನಗರ ಹೊರವಲಯದ ಬಾಲಾಜಿ ನಗರ ಕ್ಯಾಂಪ್‌ ಬಳಿ ನೂತನವಾಗಿ ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮಕ್ಕೆ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ, ಪೂಜೆ ಸಲ್ಲಿಸಿದರು. ತೆಲುಗಿನ ಚಿತ್ರ ನಿರ್ಮಾಪಕ ಹಾಗೂ ವಿತರಕ ಕೊರ್ರಪಾಟಿ ರಂಗನಾಥ ಸಾಯಿ ಅವರು ಯಶ್ ಅವರನ್ನು ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಯಶ್ ಸೇರಿ ತೆಲುಗು ಚಿತ್ರರಂಗದ ನಿರ್ದೇಶಕರು, ಹಿನ್ನೆಲೆ ಗಾಯಕರು ಆಗಮಿಸಿದ್ದರು. ಯಶ್‌ ನೋಡಲು ಸಾವಿರಾರು ಯುವಕರು ದೇವಸ್ಥಾನ ಮುಂಭಾಗದಲ್ಲಿ ಜಮಾಯಿಸಿದ್ದರು. ಯುವಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಚಂದ್ರಮೌಳಿ ಹಾಗೂ ಕುಟುಂಬ ಸದಸ್ಯರು, ತೆಲುಗು ಹಿನ್ನೆಲೆಯಲ್ಲಿ ಗಾಯಕಿ ಮಂಗ್ಲಿ ಅವರು ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ವೇಳೆ ಕೊರ್ರಪಾಟಿ ರಂಗನಾಥ ಸಾಯಿ, ಕೊರ್ರಪಾಟಿ ರಜಿನಿ, ಸಾಯಿ ಶಿವಾನಿ, ರಾಮಕೃಷ್ಣ, ಸುನೀತಾ ಇದ್ದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ: ಬಾಲಾಜಿ ನಗರ ಕ್ಯಾಂಪ್‌ನಲ್ಲಿ ನೂತನವಾಗಿ ನಿರ್ಮಿಸಿದ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ ನಿಮಿತ್ತ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ರುದ್ರ ಪಾರಾಯಣ, ಮಹಾಮಂಗಳಾರತಿ, ರುದ್ರಕ್ರಮಾರ್ಚಣೆ, ಅಷ್ಟಾವಧಾನ ಸೇವೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಫೆ.25ರಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗೋಪೂಜೆ, ಗಂಗೆಪೂಜೆ, ಯಾಗಶಾಲಾ ಪ್ರವೇಶ, ಗುರುದೇವತಾ ಪ್ರಾರ್ಥನೆ, ದೇವಾನಂದಿ ಮಹಾಸಂಕಲ್ಪ, ಮಹಾಕುಂಭಾಭಿಷೇಕ, ಮಹಾರುದ್ರಯಾಗ ಸೇರಿ ನಾನಾ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

₹14 ಕೋಟಿ ವೆಚ್ಚದ ದೇವಸ್ಥಾನ: ದೇವಸ್ಥಾನವನ್ನು ₹14 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ₹1 ಕೋಟಿ ವೆಚ್ಚದ ಎರಡೂವರೆ ಅಡಿ ಎತ್ತರದ ಸ್ಫಟಿಕ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಶಿವನ ದೇವಾಲಯದ ಎಡ ಮತ್ತು ಬಲಭಾಗದಲ್ಲಿ ಗಣಪತಿ ಹಾಗೂ ಪಾರ್ವತಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈಶಾನ್ಯದಲ್ಲಿ ನವಗ್ರಹ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ 32 ಅಡಿ ಎತ್ತರದ ಏಕಶಿಲಾ ಆಂಜಿನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ದೇವಾಲಯಕ್ಕೆ ವಿಶೇಷ ಕಳೆ ತಂದುಕೊಟ್ಟಿದೆ.

ಸಂಪೂರ್ಣ ಕಲ್ಲು ಹಾಗೂ ಕೃಷ್ಣಶಿಲೆಯಿಂದ ದೇವಸ್ಥಾನ ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತ 12 ಜ್ಯೋತಿರ್ಲಿಂಗಗಳನ್ನು ಕೆತ್ತಲಾಗಿದೆ. ದೇವಾಲಯ ಪಕ್ಕದಲ್ಲಿ ಕೆರೆಯೊಂದನ್ನು ನಿರ್ಮಿಸಲಾಗಿದ್ದು, ತೆಪ್ಪೋತ್ಸವ, ಕಡೆ ಕಾರ್ತೀಕೋತ್ಸವ ಸೇರಿ ವಿಶೇಷ ಸಂದರ್ಭಗಳಲ್ಲಿ ಪೂಜಾ ವಿಧಿ-ವಿಧಾನಗಳಿಗೆ ಕೆರೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

-ಬಾಕ್ಸ್‌-

ಕೊರ್ರಪಾಟಿ ರಂಗನಾಥ ಸಾಯಿ ನನಗೆ ಆತ್ಮೀಯ: ಯಶ್‌

ಕೊರ್ರಪಾಟಿ ರಂಗನಾಥ ಸಾಯಿ ಅವರು ನನಗೆ ಆತ್ಮೀಯರು. ಹೀಗಾಗಿ ಬಾಲಾಜಿ ಕ್ಯಾಂಪ್‌ಗೆ ಆಗಮಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ಕೊರ್ರಪಾಟಿ ರಂಗನಾಥ ಸಾಯಿ ಅವರು ಕೆಜಿಎಫ್ ಚಿತ್ರದ ಹಂಚಿಕೆ ಮಾಡಿದ್ದರು. ಕೆಜಿಎಫ್ ಯಶಸ್ವಿಯಲ್ಲಿ ಸಾಯಿ ಅವರ ಪಾತ್ರವೂ ಇದೆ. ದೇವಸ್ಥಾನ ಕಟ್ಟುವ ಮುಂಚೆಯೇ ನನಗೆ ಹೇಳಿದ್ದರು. ತಪ್ಪದೆ ಬರುತ್ತೇನೆ ಎಂದು ಹೇಳಿದ್ದೆ. ಹೀಗಾಗಿಯೇ ಆಗಮಿಸಿದೆ ಎಂದರು.

29 ಬಿಆರ್‌ವೈ 1 -2

ಬಳ್ಳಾರಿ ಹೊರ ವಲಯದ ಬಾಲಾಜಿ ಕ್ಯಾಂಪ್‌ನಲ್ಲಿ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮಕ್ಕೆ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ, ಪೂಜೆ ಸಲ್ಲಿಸಿದರು.

29 ಬಿಆರ್‌ವೈ 3

ಬಳ್ಳಾರಿ ಹೊರ ವಲಯದ ಬಾಲಾಜಿ ಕ್ಯಾಂಪ್‌ಗೆ ಆಗಮಿಸಿದ್ದ ರಾಕಿಂಗ್ ಸ್ಟಾರ್ ಯಶ್ ನೋಡಲು ನೂರಾರು ಯುವಕರು ಆಗಮಿಸಿದ್ದರು. 29 ಬಿಆರ್‌ವೈ 4

ಬಳ್ಳಾರಿ ಹೊರವಲಯದ ಬಾಲಾಜಿಕ್ಯಾಂಪ್‌ನಲ್ಲಿ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನ.

Share this article