ಉಡುಪಿ: ದೆಹಲಿ ಪ್ರತಿಭಟನೆಯ ದಾರಿ ತಪ್ಪಿಸಿ ದಾಂದಲೆ ನಡೆಸಿದ್ದ ದೇಶವಿರೋಧಿ ಶಕ್ತಿಗಳನ್ನು ಸಾಕ್ಷಿ ಸಮೇತ ಪತ್ತೆಹಚ್ಚಿ ಬಂಧಿಸುವ ಕಾರ್ಯ ಕೇಂದ್ರ ಗೃಹ ಇಲಾಖೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ, ವಿದೇಶಗಳಲ್ಲಿ ಸದಾ ಭಾರತ ವಿರೋಧಿ ಹೇಳಿಕೆ ನೀಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಕಾಂಗ್ರೆಸ್ ನಾಯಕರು ಪ್ರಹಸನ ನಡೆಸುತ್ತಿರುವುದು ಹಾಸ್ಯಾಸ್ಪದ. ಜಿಲ್ಲೆಯ ಸಮಸ್ತ ದೇಶಭಕ್ತ ಜನತೆ ರಾಷ್ಟ್ರೀಯವಾದಿ ನಾಯಕ ಶಾಸಕ ಯಶ್ಪಾಲ್ ಸುವರ್ಣ ಅವರ ಜೊತೆಗಿದ್ದಾರೆ. ಕಾಂಗ್ರೆಸ್ಸಿನ ಯಾವುದೇ ಗೊಡ್ಡು ಬೆದರಿಕೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಮೊಳಗಿಸಿದ ವ್ಯಕ್ತಿಗಳ ಮೇಲೆ ಯಾವುದೇ ಕ್ರಮ ಜರಗಿಸದ ಪೊಲೀಸ್ ಇಲಾಖೆ ವಿಷಯನಿಷ್ಠ ಮಾತುಗಳನ್ನಾಡಿದ ಶಾಸಕ ಯಶ್ಪಾಲ್ ಸುವರ್ಣ ಅವರ ಮೇಲೆ ಮಾತ್ರ ಎಫ್ಐಆರ್ ದಾಖಲಿಸಿರುವುದು ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದವರು ಆರೋಪಿಸಿದ್ದಾರೆ.