2025ರ ಸಿಂಹಾವಲೋಕನ: ನಕ್ಸಲ್ ಲಕ್ಷ್ಮೀ ಶರಣಾಗತಿ, ಉಡುಪಿಗೆ ಮೋದಿ ಭೇಟಿ, ಶಿರೂರು ಪರ್ಯಾಯಕ್ಕೆ ಸಿದ್ದತೆ

KannadaprabhaNewsNetwork |  
Published : Jan 01, 2026, 03:45 AM IST
32 | Kannada Prabha

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಾಮೂಲಿಯಾಗಿ ಜಿಲ್ಲೆಯಲ್ಲಿ 2,754 ಮಿಮಿ ಮಳೆಯಾಗುವ ವಾಡಿಕೆಯಾದರೂ, ಈ ಬಾರಿ 3,727 ಮಿಮಿ ಅಂದರೇ ಶೇ 35ರಷ್ಟು ಹೆಚ್ಚುವರಿ ಮಳೆಯಾಗಿರುವುದು ಇಂದು ಕೊನೆಗೊಳ‍್ಳುತ್ತಿರುವ ಈ ವರ್ಷದ ವಿಶೇಷವಾಗಿದೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಾಮೂಲಿಯಾಗಿ ಜಿಲ್ಲೆಯಲ್ಲಿ 2,754 ಮಿಮಿ ಮಳೆಯಾಗುವ ವಾಡಿಕೆಯಾದರೂ, ಈ ಬಾರಿ 3,727 ಮಿಮಿ ಅಂದರೇ ಶೇ 35ರಷ್ಟು ಹೆಚ್ಚುವರಿ ಮಳೆಯಾಗಿರುವುದು ಇಂದು ಕೊನೆಗೊಳ‍್ಳುತ್ತಿರುವ ಈ ವರ್ಷದ ವಿಶೇಷವಾಗಿದೆ.

ಬಹಳ ವರ್ಷಗಳ ನಂತರ ವರ್ಷದ ಕೊನೆಗೆ ಡಿಸೆಂಬರ್ ತಿಂಗಳಿಡೀ ಚಳಿ ವಾತಾವರಣವಿದೆ.ನಕ್ಸಲ್‌ವಾದಿ ತೊಂಬಟ್ಟು ಲಕ್ಷ್ಮೀಯ ಶರಣಾಗತಿ, ಶಿರೂರು ಮಠದ ಪರ್ಯಾಯಕ್ಕೆ ಸಿದ್ದತೆಗಳು, ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ, ಕೃಷ್ಣನಿಗೆ ಪುತ್ತಿಗೆ ಶ್ರೀಗಳಿಂದ ಚಿನ್ನದ ರಥ ಸಮರ್ಪಣೆ ಈ ವರ್ಷದ ವಿಶೇಷಗಳಾಗಿವೆ.ತನ್ನ ಹುಟ್ಟೂರಿನ ಮೂಲ ಸೌಕರ್ಯ- ಸಮೆಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಹೋರಾಟ ನಡೆಸಿ, ಸೋತು, ಬೇಸತ್ತು 2006ರಲ್ಲಿ ನಕ್ಸಲ್‌ ಚಳವಳಿಗೆ ಸೇರಿಕೊಂಡ ಕುಂದಾಪುರ ತಾಲೂಕಿನ ತೊಂಬಟ್ಟು ಗ್ರಾಮದ ಲಕ್ಷ್ಮೀ ಪೂಜಾರಿ ಯಾನೆ ಪ್ರೇಮ ಫೆ. 1ರಂದು ಬಂದೂಕು ಕೆಳಗಿಟ್ಟು, ಉಡುಪಿ ಜಿಲ್ಲಾಧಿಕಾರಿ ಮುಂದೆ ಶರಣಾದರು. ಇದರೊಂದಿಗೆ ಜಿಲ್ಲೆಯಲ್ಲಿ ನಕ್ಸಲ್ ಚಳವಳಿ ಅಧ್ಯಾಯ ಬಹುತೇಕ ಕೊನೆಗೊಂಡಿತು. ಇದೀಗ ಆಕೆ ಮೇಲಿರುವ 3 ಪ್ರಕರಣಗಳ ತನಿಖೆ ನಡೆಯುತ್ತಿದೆ.

ಜ. 18ರಂದು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದದರು ತಮ್ಮ ಪ್ರಥಮ ಶ್ರೀ ಕೃಷ್ಣ ಪೂಜಾಧಿಕಾರ ಪಡೆಯುವ ಪರ್ಯಾಯ ಪೀಠವನ್ನೇರಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ, ಸಂಪ್ರದಾಯದಂತೆ ಮುಂದಿನ 2 ವರ್ಷಗಳ ಕಾಲ ಕೃಷ್ಣಮಠದಲ್ಲಿ ನಿತ್ಯ ಅನ್ನದಾನಕ್ಕೆ ಪೂರಕವಾಗಿ ಕಳೆದ ಡಿ. 26ರಂದು ಬಾಳೆ ಮುಹೂರ್ತ, ಮಾ. 6ರಂದು ಅಕ್ಕಿ ಮುಹೂರ್ತ, ಜು. 13ರಂದು ಕಟ್ಟಿಗೆ ಮುಹೂರ್ತ ಮತ್ತು ಡಿ.15ರಂದು ಧಾನ್ಯ- ಭತ್ತ ಮುಹೂರ್ತಗಳನ್ನು ಧಾರ್ಮಿಕ ವಿಧಿವತ್ತಾಗಿ ನಡೆಸಲಾಗಿದೆ.ತಮ್ಮ ಚತುರ್ಥ ದ್ವೈವಾರ್ಷಿಕ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯ ಎಂದು ಆಚರಿಸುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಗೀತೋತ್ಸವದ ಅಂಗವಾಗಿ ನ, 28ರಂದು ಲಕ್ಷ ಕಂಠ ಗೀತಾ ಪಾರಾಯಣವನ್ನು ಆಯೋಜಿಸಿದ್ದರು, ಅಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಉಡುಪಿಗೆ ಆಗಮಿಸಿ, ಪಾರಾಯಣದಲ್ಲಿ ಖುದ್ದು ಭಾಗವಹಿಸಿದ್ದು, ಈ ಕಾರ್ಯಕ್ರಮ ನಭೂತೋ ಎಂಬಂತೆ ನಡೆಯಿತು. ಈ ಸಂದರ್ಭ ಮೋದಿ ಅವರು ಕೃಷ್ಣಮಠದಲ್ಲಿ ಸ್ವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದರು. ಅವರಿಗೆ ಪುತ್ತಿಗೆ ಶ್ರೀಗಳು ‘ಭಾರತ ಭಾಗ್ಯ ವಿದಾತ’ ಬಿರುದು ನೀಡಿ ಸನ್ಮಾನಿಸಿದರು.ಕೃಷ್ಣಮಠದಲ್ಲಿ ಡಿ.7ರಂದು ನಡೆದ ಗೀತೋತ್ಸವದ ಸಮಾರೋಪದಲ್ಲಿ ಆಂದ್ರ ಡಿಸಿಎಂ, ಖ್ಯಾತ ನಟ ಪವನ್ ಕಲ್ಯಾಣ ಭಾಗವಹಿಸಿದ್ದರು. ಡಿ.27ರಂದು ಪುತ್ತಿಗೆ ಶ್ರೀಗಳು ತಮ್ಮ ಸಂನ್ಯಾಸಾಶ್ರಮದ 50ನೇ ವರ್ಷದ ನೆನಪಿಗಾಗಿ ನಿರ್ಮಿಸಿದ ಬಹು ಕೋಟಿ ರು, ವೆಚ್ಚದ ಸುವರ್ಣ ಪಾರ್ಥಸಾರಥಿ ರಥವನ್ನು ಮಂತ್ರಾಲಯದ ರಾಘವೇಂದ್ರ ಮಠದ ಶ್ರೀ ಸುಬುದೇಂದ್ರ ತೀರ್ಥರು ಕೃಷ್ಣನಿಗೆ ಸಮರ್ಪಿಸಿದರು. ಅ.14ರಂದು ಒಲಂಪಿಕ್ ಬ್ಯಾಡ್ಮಿಂಟನ್ ಆಟಗಾರ್ತಿ ನೈನಾ ನೆಹ್ವಾಲ್ ಅವರು ಮಣಿಪಾಲದ ಮಾಹೆಗೆ ಭೇಟಿ ನೀಡಿ, ಕೆಎಂಸಿ ಆಸ್ಪತ್ರೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ರೋಬೋಟಿಕ್ಸ್ ಅನ್ನು ಉದ್ಘಾಟಿಸಿದ್ದರು, ಮಾಹೆ ವಿದ್ಯಾರ್ಥಿಗಳೊಂದಿಗೆ ತಮ್ಮ ಕ್ರೀಡಾ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದರು. ಯೋಗದಲ್ಲಿ 9 ವಿಶ್ವ ದಾಖಲೆಗಳನ್ನು ಮಾಡಿರುವ ಉಡುಪಿಯ ಬಾಲೆ ತನುಶ್ರೀ ಪಿತ್ರೋಡಿ ಅ.24ರಂದು ಬೆಹರಿನ್‌ನಲ್ಲಿ 50 ನಿಮಿಷಗಳಲ್ಲಿ 333 ಯೋಗ ಆಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 10ನೇ ವಿಶ್ವ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಬ್ರಹ್ಮಾವರದ ವಿದುಷಿ ದೀಕ್ಷಾ ವಿ. ಅವರು ಆಗಸ್ಟ್‌ ತಿಂಗಳಲ್ಲಿ 9 ದಿನ, 216 ಗಂಟೆ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉಡುಪಿಯಲ್ಲಿ ಗೌರವಿಸಿ ಅಭಿನಂದಿಸಿದರು. ವರ್ಷದ ಕೊನೆಗೆ ಡಿ. 23ರಂದು ನಾಡಿನ ಖ್ಯಾತ ರಂಗನಿರ್ದೇಶಕ ನಟ ಪ್ರೊ. ರಾಮದಾಸ್ ಅವರು ನಿಧನರಾದುದು ಅವರ ಅಭಿಮಾನಿಗಳಲ್ಲಿ ನೋವನ್ನುಂಟು ಮಾಡಿದರೆ, ರೌಡಿಶೀಟರ್, ಬಸ್ ಉದ್ಯಮಿ ಸೈಫುದ್ದೀನ್ ಆತ್ರಾಡಿ ತನ್ನದೇ 3 ಮಂದಿ ಸಹಚರರಿಂದ ತನ್ನದೇ ಮನೆಯಂಗಳದಲ್ಲಿ ಕೊಲೆಯಾದುದು 2025ರ ಕಪ್ಪುಚುಕ್ಕೆಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ