ಹೊಟೇಲ್‌ನಲ್ಲಿ 1 ವರ್ಷ ಹಳೇ ಮೀನು,ಕೊಳೆತ ಚಿಕನ್, ದನದ ಮಾಂಸ ಪತ್ತೆ

KannadaprabhaNewsNetwork |  
Published : Aug 10, 2026, 04:30 AM IST
ಯುಬಿ ಸಿಟಿಯ ರೆಸ್ಟೋರೆಂಟ್‌ಗಳಲ್ಲಿ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಅವರಿಂದ ತಪಾಸಣೆ. | Kannada Prabha

ಸಾರಾಂಶ

ನಗರದ ಪ್ರತಿಷ್ಠಿತ ಯುಬಿ ಸಿಟಿಯಲ್ಲಿರುವ ವಿವಿಧ ಬಾರ್ ಆ್ಯಂಡ್ ರೆಸ್ಟೋರೆಂಟ್‌, ಪಬ್‌ಗಳಲ್ಲಿ ಆಹಾರ ತಪಾಸಣೆ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಬಳಕೆಗೆ ಯೋಗ್ಯವಲ್ಲದ 132 ಕೆ.ಜಿ ಮಾಂಸ, ತರಕಾರಿ, ಹಣ್ಣು, ಒಣ ಹಣ್ಣು ಹಾಗೂ15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ನಾಶಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರತಿಷ್ಠಿತ ಯುಬಿ ಸಿಟಿಯಲ್ಲಿರುವ ವಿವಿಧ ಬಾರ್ ಆ್ಯಂಡ್ ರೆಸ್ಟೋರೆಂಟ್‌, ಪಬ್‌ಗಳಲ್ಲಿ ಆಹಾರ ತಪಾಸಣೆ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಬಳಕೆಗೆ ಯೋಗ್ಯವಲ್ಲದ 132 ಕೆ.ಜಿ ಮಾಂಸ, ತರಕಾರಿ, ಹಣ್ಣು, ಒಣ ಹಣ್ಣು ಹಾಗೂ15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ನಾಶಪಡಿಸಿದ್ದಾರೆ.

ವಿಶೇಷವೆಂದರೆ ರೆಸ್ಟೋರೆಂಟ್‌ವೊಂದರಲ್ಲಿ ಮನುಷ್ಯರ ಸೇವನೆಗೆ ಯೋಗ್ಯವಲ್ಲದ ಸುಮಾರು ಒಂದು ವರ್ಷ ಹಳೆಯದಾದ ಮೀನು ಸ್ಟಾಕ್ ಪತ್ತೆಯಾಗಿದ್ದು, ಆಹಾರ ಇಲಾಖೆ ರೆಸ್ಟೋರೆಂಟ್‌ಗೆ ನೋಟಿಸ್ ಜಾರಿ ಮಾಡಿದೆ. ಹೊಟೇಲ್ ಸ್ಕೈನಲ್ಲಿ ಬಳಕೆಗೆ ಯೋಗ್ಯವಲ್ಲದ 45 ಕೆ.ಜಿ ಕೊಳೆತ ಚಿಕನ್, ಬೀಫ್, 6 ಕೆ.ಜಿ ಕಟ್ಲೆಟ್, 15 ಲೀಟರ್ ಬಳಸಿದ ಅಡುಗೆಯನ್ನು ಜಪ್ತಿ ಮಾಡಿ ನಿಯಮಾನುಸಾರ ನಾಶಪಡಿಸಲಾಗಿದೆ. ರಾಯಲ್ ಚೈನ್ ಹೊಟೇಲ್‌ನಲ್ಲಿ 50 ಕೆ.ಜಿ ಬಾತುಕೋಳಿ ಮಾಂಸ, 5 ಕೆ.ಜಿ ಮೀನು, ಮದ್ರಾಸ್ ಕಿಚನ್‌ನಲ್ಲಿ 5 ಕೆ.ಜಿ ಹಸಿರು ಬಟಾಣಿ, ಟೆಸ್ಕಾನ್ ಹೊಟೇಲ್‌ನಲ್ಲಿ 5 ಕೆ.ಜಿ ಮಶ್ರೂಮ್, ಶೆನ್ಚೇಜ್ ಹೊಟೇಲ್‌ನಲ್ಲಿ 3 ಕೆ.ಜಿ ಮೀನು, 7 ಕೆ.ಜಿ ಕೇಕ್, ಆಲೂಗಡ್ಡೆ ಮತ್ತು ಟಾಕೋಸ್ ನಾಶ ಮಾಡಲಾಗಿದೆ. ಇದೆಲ್ಲವೂ ಬಳಕೆಗೆ ಯೋಗ್ಯವಲ್ಲದಿದ್ದರೂ ಹೊಟೇಲ್‌ನಲ್ಲಿ ಸ್ಟಾಕ್ ಇರಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹೊಟೇಲ್‌ಗಳಲ್ಲಿ ಸ್ವತಃ ಪರಿಶೀಲನೆ ನಡೆಸಿ ಮಾತನಾಡಿದ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್, ಮೀನುಗಳನ್ನು ಗರಿಷ್ಟ ಒಂದು ತಿಂಗಳು ಸ್ಟಾಕ್ ಇಡಬಹುದು. ಆದರೆ, ರೆಸ್ಟೋರೆಂಟ್‌ವೊಂದರಲ್ಲಿ ಒಂದು ವರ್ಷದಿಂದ ಸ್ಟಾಕ್ ಇರಿಸಲಾಗಿದೆ. ಹೀಗಾಗಿ, ರೆಸ್ಟೋರೆಂಟ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಮೀನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಫ್ರೀಜ್ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ರೀತಿ ಮಟನ್, ಚಿಕನ್ ಕೂಡ ಅವಧಿ ಮುಗಿದಿರುವುದು ಕಂಡು ಬಂದಿದೆ ಎಂದು ಹೇಳಿದರು.

ನಾವು ಪರಿಶೀಲನೆಗೆ ಬಂದಾಗ ಅಲ್ಲಿನ ಸಿಬ್ಬಂದಿ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಮ್ಯಾನ್ಯುಫ್ಯಾಕ್ಟರಿಂಗ್ ಮತ್ತು ಎಕ್ಸ್‌ಪೈರಿ ಡೇಟ್ ಇರುವ ಸ್ಟಿಕ್ಕರ್ ಅಂಟಿಸಿದ್ದಾರೆ. ಆದರೆ, ಹಾಗೇ ಮಾಡುವಂತಿಲ್ಲ. ಆಹಾರ ಪದಾರ್ಥಗಳು ತಂದ ಸಂದರ್ಭದಲ್ಲೇ ಎಲ್ಲ ಮಾಹಿತಿ ಅಂಟಿಸಿರಬೇಕಿತ್ತು ಎಂದು ಶ್ರೀನಿವಾಸ್ ಹೇಳಿದರು.

ಮಾಂಸ, ಹಣ್ಣು, ತರಕಾರಿಗಳನ್ನು ನಿಗದಿತ ತಾಪಮಾನದಲ್ಲಿ ಎಷ್ಟು ಕಾಲದವರೆಗೆ ಸ್ಟಾಕ್ ಇರಿಸಬಹುದು ಎಂಬ ಕುರಿತು ಶೀಘ್ರದಲ್ಲೇ ಮಾರ್ಗಸೂಚಿಯನ್ನು ಹೊರಡಿಸುತ್ತೇವೆ.

-ಶ್ರೀನಿವಾಸ್, ಆಯುಕ್ತರು, ಆರೋಗ್ಯ ಇಲಾಖೆ

ಪರೀಕ್ಷೆಗೆ ಸ್ಯಾಂಪಲ್‌

ಹೊಟೇಲ್‌ಗಳಲ್ಲಿ ಸಂಶಯಾಸ್ಪದವಾಗಿರುವ ಹಲವು ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಅಲ್ಲದೇ, ಕೆಲವು ಫ್ರಿಜರ್‌ಗಳನ್ನು ಹೆಚ್ಚಿನ ತಪಾಸಣೆಗಾಗಿ ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಂಕ್‌ನಿಂದಲೇ ನಕಲಿ ಚಿನ್ನ ಅಡಮಾನ!
ಕ್ವಿಟ್ ವೋಟ್ ಚೋರಿ ಚಳವಳಿ ಅಗತ್ಯ: ಸಿಎಂ