ಕನ್ನಡಪ್ರಭ ವಾರ್ತೆ ಮೈಸೂರು
ರಾಜಕಾರಣದಲ್ಲಿ 50ನೇ ವಸಂತದ ಸಂಭ್ರಮದಲ್ಲಿರುವ ಯಡಿಯೂರಪ್ಪ ಅವರು, ಸುದೀರ್ಘ ಅನುಭವ ಹೊಂದಿದ್ದರೂ ಸುಳ್ಳು ವಿಶ್ಲೇಷಣೆ ಮುಂದಿಟ್ಟಿರುವುದು ಸಮಂಜಸವಲ್ಲ. ಯುದ್ಧ ಭೀತಿ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಅಸಮರ್ಪಕ ವಿದೇಶಾಂಗ ನೀತಿಯ ಫಲವಾಗಿ ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಮಯದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಜನತೆಗೆ ಒದಗಿಸುತ್ತಿರುವ 5 ಗ್ಯಾರಂಟಿ ಯೋಜನೆಗಳು, ನೆರವಿನೊಂದಿಗೆ ಸಾಂತ್ವನವನ್ನೂ ನೀಡುತ್ತಿವೆ. ಆದರೆ, ಬಿಜೆಪಿ ನಾಯಕರು, ಬಂಗಾಳದ ಮತದಾನ ಮುಗಿದ ಮರು ದಿನವೇ, ಸಿಲಿಂಡರ್ ಬೆಲೆಯನ್ನು ಸರಿಸುಮಾರು ಒಂದು ಸಾವಿರ ರೂಪಾಯಿಯಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿ, ಗಾಯದ ಮೇಲೆ ಬರೆ ಎಳೆದಿದ್ದಾರೆ. ಇಂತಹ ಜನವಿರೋಧಿ ಆಡಳಿತಗಾರರಿಗೆ ಮತದಾರ ಮನ್ನಣೆ ನೀಡುತ್ತಾನೆ ಎಂದು ಸಮರ್ಥಿಸಿಕೊಳ್ಳುವುದು ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಷ್ಟಕ್ಕೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೇಗೆ ಜಯಗಳಿಸಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಭಿವೃದ್ಧಿ ಕೆಲಸಗಳು ಮತ್ತು ಜನಪರ ಆಡಳಿತಕ್ಕೆ ಜನ ಮನ್ನಣೆ ನೀಡುತ್ತಾರೆ ಎನ್ನುವುದು ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಫಲಿತಾಂಶದಲ್ಲಿ ಸಾಬೀತಾಗಿದೆ. ಈ ಹಿನ್ನೆಲೆ ಗಮನಿಸಿ ಹೇಳುವುದಾದರೆ ರಾಜ್ಯದಲ್ಲಿ 2028 ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.ಬಿಜೆಪಿಯಲ್ಲಿ ಹಿರಿಯರಾಗಿರುವ ಯಡಿಯೂರಪ್ಪ, ಮುಖ್ಯಮಂತ್ರಿಯಾಗಿದ್ದಾಗಲೇ ತಮ್ಮದೇ ಪಕ್ಷದಿಂದ ಹೀನಾಯವಾಗಿ ಮೂಲೆಗೆ ತಳ್ಳಲ್ಪಟ್ಟರು. ಈಗ ರಾಜ್ಯಾಧ್ಯಕ್ಷರಾಗಿರುವ ತಮ್ಮ ಮಗ ಮತ್ತು ಬಿಜೆಪಿಯ ವಿಫಲ ಮುಂಚೂಣಿ ನಾಯಕ ಬಿ.ವೈ. ವಿಜಯೇಂದ್ರ ಅವರ ಕುರ್ಚಿ ಉಳಿಸಿಕೊಳ್ಳಲು ಜನರನ್ನು ಸೇರಿಸಿ ಅಭಿಮಾನೋತ್ಸವ ನಡೆಸುತ್ತಿದ್ದಾರೆ. ವಿಶ್ರಾಂತಿ ಬಯಸುವ ಈ ಇಳಿವಯಸ್ಸಿನಲ್ಲಿ ಯಡಿಯೂರಪ್ಪ ಅಂತಹ ಹಿರಿಯರಿಗೆ ಅಸ್ತಿತ್ವ ಉಳಿಸಿಕೊಳ್ಳುವ ಇಂತಹ ಹೋರಾಟದ ಅಗತ್ಯವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.