ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ರೈತನಾಯಕ ಬಿ.ಎಸ್. ಯಡಿಯೂರಪ್ಪ ಅವರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ರೈತನಾಯಕ ಬಿ.ಎಸ್. ಯಡಿಯೂರಪ್ಪ ಅವರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶನಿವಾರ ಹಿರೇಕಲ್ಮಠದಲ್ಲಿ ನಡೆದ ಎರಡನೇ ದಿನದ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರಿಗಾಗಿ ಹಗಲಿರುಳು ಹೋರಾಟ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ನಾವು ಉಪಯೋಗಿಸುವ ಯಾವುದೇ ರಾಸಾಯನಿಕ ಗೊಬ್ಬರಗಳಿಗೆ ಶೇ.25ರಷ್ಟು ದರ ಮಾತ್ರ ನೀಡಿದರೆ, ಕೇಂದ್ರ ಸರ್ಕಾರ ಶೇ.75 ಸಬ್ಸಿಡಿ ನೀಡುತ್ತಿದೆ. ಅಡಕೆಗೆ ಇಂದು ವೈಜ್ಞಾನಿಕ ಬೆಲೆ ಉಳಿದಿದೆ ಎಂದರೆ ಅದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಣ ಎಂದರು.
ರಾಷ್ಟ್ರೀಯ ಹೆದ್ದಾರಿ ಘೋಷಣೆ ಸಾಧ್ಯತೆ:
ಹೊಸಪೇಟಿ-ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ರಾಷ್ಟ್ರ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಸಲ್ಲಿಸಿ, ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಬಂದಿಸಿದ್ದು, ಇಷ್ಟರಲ್ಲೇ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಅವಿನಾಭಾವ ಸಂಬಂಧ:
ಹಿರೇಕಲ್ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಅಮ್ಮನ ಅಪ್ಪ, ಅಂದರೆ ತಾತನವರು ಹೊನ್ನಾಳಿಯಲ್ಲಿ ರೈಸ್‌ಮಿಲ್ ನಡೆಸುತ್ತಿದ್ದರು. ಅದನ್ನು ಶ್ರೀಮಠಕ್ಕೆ ಬರೆದುಕೊಟ್ಟಿದ್ದನ್ನು ನಾವು ಕೇಳಿದ್ದೇವೆ. ಇಂದು ಅದೇ ಜಾಗದಲ್ಲಿ ಶ್ರೀಮಠದಿಂದ ವಿದ್ಯಾರ್ಥಿಗಳ ವಸತಿ ಗೃಹ ನಡೆಸಲಾಗುತ್ತಿದೆ. ಹೀಗಾಗಿ ಅಂದಿನಿಂದ ನಮ್ಮ ಕುಟುಂಬಕ್ಕೂ ಶ್ರೀಮಠಕ್ಕೂ ಸಂಬಂಧ ಮುಂದುವರಿದುಕೊಂಡು ಬಂದಿದೆ. ಮಠದ ಸ್ವಾಮೀಜಿಗಳು ಏನೇ ಕಾರ್ಯಕ್ರಮ ಮಾಡಿದರೂ ದೊಡ್ಡಮಟ್ಟದಲ್ಲಿ ಆಲೋಚನೆ ಮಾಡಿ ಮಾಡುತ್ತಾರೆ. ಹೀಗಾಗಿ ಅವರು ಮಾಡುವ ಯಾವುದೇ ಕಾರ್ಯಕ್ರಮಗಳು ರೈತಪರವಾಗಿರುತ್ತವೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃಷಿಮೇಳ ಉದ್ಘಾಟಿಸಿದರು. ಯಡಿಯೂರಪ್ಪ ಅವರಿಗೆ ಸ್ವಾಮೀಜಿಗಳು ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಅವರು ನೇಗಿಲ ಮಾದರಿಯನ್ನು ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರಿನ ಸಿದ್ದಲಿಂಗ ಸ್ವಾಮಿಗಳು, ಶಾಸಕ ಡಿ.ಜಿ. ಶಾಂತನಗೌಡ, ಅನ್ನದಾನಯ್ಯ ಶಾಸ್ತ್ರಿ, ಹರಿಹರದ ಚಂದ್ರಶೇಖರ್ ಪೂಜಾರ್, ಬೆನಕನಹಳ್ಳಿ ವೀರಣ್ಣ, ಕಡದಕಟ್ಟೆ ದಾನಪ್ಪ, ಕುಮಾರಸ್ವಾಮಿ, ಹಿರೇಮಠ ರಾಜು, ಪ್ರಶಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.