ಕೊಪ್ಪ ವಿಭಾಗಕ್ಕೆ ಹೊಸ ಆನೆ ಕಾರ್ಯಪಡೆ ತಂಡ ನಿಯೋಜನೆ: ಖಂಡ್ರೆ ಆದೇಶ

KannadaprabhaNewsNetwork |  
Published : Mar 01, 2026, 01:30 AM IST
೨೮ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ನಡೆದ ಮಾನವ-ಪ್ರಾಣಿ ಸಂಘರ್ಷದ ಸಂವಾದ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಮನವಿ ಸ್ವೀಕರಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು ಮಾನವ-ಕಾಡಾನೆ ಸಂಘರ್ಷ ತಡೆಯುವ ಉದ್ದೇಶದಿಂದ ಕೊಪ್ಪ ಉಪ ವಿಭಾಗ ವ್ಯಾಪ್ತಿಗೆ ಹೊಸದಾಗಿ ನಿಯೋಜನೆ ಮಾಡಿದ ಆನೆ ಕಾರ್ಯಪಡೆ (ಇಟಿಎಫ್) ತಂಡದ 32 ಸಿಬ್ಬಂದಿ ಸೋಮವಾರದಿಂದಲೇ ಕಾರ್ಯ ಆರಂಭಿಸಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ

ಮತ್ತೊಂದು ಕಾಡಾನೆ ಸೆರೆಗೂ ಆದೇಶ । ಮಾನವ-ಪ್ರಾಣಿ ಸಂಘರ್ಷ ಶಾಶ್ವತ ಪರಿಹಾರಕ್ಕೆ ಸಾಫ್ಟ್ ರಿಲೀಸ್ ಸೆಂಟರ್ । |

ಅರಣ್ಯ ಇಲಾಖೆ ಜನಸ್ನೇಹಿಯಾಗಿಸಲು ಸಿಬ್ಬಂದಿಗೆ ಸೂಚನೆ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಾನವ-ಕಾಡಾನೆ ಸಂಘರ್ಷ ತಡೆಯುವ ಉದ್ದೇಶದಿಂದ ಕೊಪ್ಪ ಉಪ ವಿಭಾಗ ವ್ಯಾಪ್ತಿಗೆ ಹೊಸದಾಗಿ ನಿಯೋಜನೆ ಮಾಡಿದ ಆನೆ ಕಾರ್ಯಪಡೆ (ಇಟಿಎಫ್) ತಂಡದ 32 ಸಿಬ್ಬಂದಿ ಸೋಮವಾರದಿಂದಲೇ ಕಾರ್ಯ ಆರಂಭಿಸಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ.ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ ಶನಿವಾರ ಆಯೋಜಿಸಿದ್ದ ಮಾನವ-ಪ್ರಾಣಿ ಸಂಘರ್ಷ ಕುರಿತು ಸಾರ್ವಜನಿಕರೊಂದಿಗೆ ಸಂವಾದದಲ್ಲಿ ವಿವಿಧ ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದರು.ಅನಾದಿ ಕಾಲದಿಂದಲೂ ಇರುವ ಮಾನವ ಪ್ರಾಣಿ ಸಂಘರ್ಷ ಅತ್ಯಂತ ಸವಾಲಿನ ಸಂಗತಿ. ವರ್ಷಕ್ಕೆ 50-6- ಜನ ಇದಕ್ಕೆ ತುತ್ತಾಗಿ ಜೀವ ತೆರುತ್ತಿದ್ದಾರೆ. ಪ್ರಕೃತಿ-ಪರಿಸರದ ಸಮನ್ವಯತೆ ಕಾಪಾಡಲು ವನ್ಯಜೀವಿ ಸಂರಕ್ಷಣೆ ಆಗಬೇಕಿದೆ. ಇದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ಬಳಿಕ ವನ್ಯಜೀವಿಗಳ ಸಂತತಿ ಹೆಚ್ಚಾಗಿದೆ. ರಾಜ್ಯದಲ್ಲಿ 6500ಕ್ಕೂ ಅಧಿಕ ಆನೆಗಳಿದ್ದು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಹಾಸನ ಭಾಗದಲ್ಲಿ 100 ಕಾಡಾನೆಗಳು, ಕೊಡಗು ಭಾಗದಲ್ಲಿ 60 ಹಾಗೂ ಚಿಕ್ಕಮಗಳೂರು ಭಾಗದಲ್ಲಿ 60 ಆನೆಗಳು ಕಾಡು ಬಿಟ್ಟು ನಾಡಿಗೆ ಬಂದು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಇಲ್ಲಿನ ಆಹಾರ ಪದ್ಧತಿಗೆ ಒಗ್ಗಿ ಕೊಂಡಿವೆ. ಮನುಷ್ಯನಿಗೆ ಕಾನೂನು ಕಾಯ್ದೆ ಗೊತ್ತಿದೆ. ಪ್ರಾಣಿಗಳಿಗೆ ಕಾನೂನು, ಜನವಸತಿ ಪ್ರದೇಶ, ಅರಣ್ಯ ಎಂದು ತಿಳಿಯುವುದಿಲ್ಲ ಎಂದರು. ಮಾನವ ಜೀವವೂ ಅಮೂಲ್ಯ ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಅರಣ್ಯ ಇಲಾಖೆ ಜನರ ವಿರುದ್ಧವಿಲ್ಲ. ಜನರು ಅರಣ್ಯದ ಕಾಯ್ದೆ ಅರಿಯಬೇಕಿದೆ. ಕಾಯ್ದೆಗಳು ಕೇವಲ ರಾಜ್ಯದ ವ್ಯಾಪ್ತಿಯ ದ್ದಲ್ಲ. ಕೇಂದ್ರದ ವ್ಯಾಪ್ತಿಗೂ ಬರುತ್ತದೆ. ಕಾಡಾನೆ ದಾಳಿಯ ಕುರಿತು ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿಗಳ ಬಳಿ ಅನುಮತಿ ಪಡೆದಿದ್ದು, ರೈಲ್ವೇ ಬ್ಯಾರಿಕೇಡ್ ಎಲ್ಲಿಗೆ ಎಷ್ಟು ಅಗತ್ಯವಿದೆಯೋ ಅದನ್ನು ಮಾಡಲು ಅನುಮೋದನೆ ಪಡೆಯಲಾಗಿದೆ. ಸುಮಾರು 125 ಕಿಮೀ ರೈಲ್ವೇ ಬ್ಯಾರಿಕೇಡ್‌ಗೆ ಪ್ರಸ್ತಾವನೆಯಾಗಿದ್ದು, 1 ಕಿಮೀ ಬ್ಯಾರಿಕೇಡ್‌ಗೆ ₹1.50 ಕೋಟಿ ವೆಚ್ಚ ತಗುಲಲಿದೆ. ಈಗಾಗಲೇ 7.50 ಕಿಮೀ ರೈಲ್ವೇ ಬ್ಯಾರಿಕೇಡ್ ಕಾಮಗಾರಿ ನಿರ್ಮಾಣ ಹಂತದಲ್ಲಿದೆ.

ಕಾಡಾನೆ-ಮಾನವ ಸಂಘರ್ಷ ತಡೆಯಲು ಡ್ರೋನ್ ಬಳಕೆ, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮುಂತಾದ ಕ್ರಮಗಳನ್ನು ಸಹ ಅರಣ್ಯ ಇಲಾಖೆ ಕೈಗೊಂಡಿದೆ. ಹೆಚ್ಚು ಹಾನಿ ಮಾಡುವ ಪುಂಡಾನೆಗಳ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸಿ ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದೆ. ಆನೆ ಕಾರ್ಯಾಚರಣೆ ಸಂದರ್ಭದಲ್ಲಿ ನಮ್ಮ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದು, ಇದನ್ನೂ ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆ ಹಿಂದಿನ ಸರ್ಕಾರದ್ದು: ಈ ಸಮಸ್ಯೆ ಹಿಂದಿನ ಸರ್ಕಾರದ ಸಮಸ್ಯೆ. ಇದನ್ನು ನಾವು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದರು.ಹಿಂದಿನ ಸರ್ಕಾರ 10 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಸುಪ್ರೀಂ ಕೋಟ್‌ ಅಫಿಡವಿಟ್ ಸಲ್ಲಿಸಿದ್ದು, ನಂತರ ಬಂದ ನಮ್ಮ ಸರ್ಕಾರ ಇದು ಸರಿಯಾದ ಕ್ರಮದಲ್ಲಿಲ್ಲ. ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಮನವಿ ಮಾಡಿದ್ದೆವು. ಈ ಬಗ್ಗೆ ಜಿಲ್ಲಾ, ತಾಲೂಕು ಹಂತದಲ್ಲಿ ವಿವಿಧ ಸಮಿತಿಗಳನ್ನು ಮಾಡಿ ಸರ್ವೆ ರಾಜ್ಯದಲ್ಲಿ 3.33 ಲಕ್ಷ ಹೆಕ್ಟೇರ್‌ಗೆ ಡೀಮ್ಡ್ ಅರಣ್ಯ ವನ್ನು ಇಳಿಕೆ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲಿಯೇ 1.20 ಲಕ್ಷ ಎಕರೆ ಡೀಮ್ಡ್ ವ್ಯಾಪ್ತಿಗೆ ಸೇರಿದೆ. ಹಿಂದಿನ ಸರ್ಕಾರದವರ ತಪ್ಪಿನಿಂದ ಇಂದು ನಾವು ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗಿದೆ. ಇದಕ್ಕಾಗಿ 6 ತಿಂಗಳು ಸಮಯಾವ ಕಾಶ ನೀಡಿದ್ದು, ಈ ಬಗ್ಗೆ ಸರ್ವೆ ಮಾಡಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದು ಸರ್ಕಾರಿ ಭೂಮಿ ಅಲ್ಲವೋ ಅದನ್ನು ಮಾತ್ರ ಪರಿಭಾವಿತ ಅರಣ್ಯ ಎಂದು ತಿಳಿಸಲು ಹೇಳಲಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ನಾವು ಬದ್ಧವಿದ್ದೇವೆ ಎಂದರು.

ಕುದುರೆಮುಖ ಅಭಯಾರಣ್ಯದ ಜನರ ಸ್ಥಳಾಂತರ, ಪುನರ್ವಸತಿಗೆ ರೂ.1800 ಕೋಟಿ ರೂಪಾಯಿ ಅಗತ್ಯವಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಕುದುರೆಮುಖ ವ್ಯಾಪ್ತಿಯಲ್ಲಿ 1300 ಕುಟುಂಬಗಳಿದ್ದು, ಒಟ್ಟು 1800 ಕೋಟಿ ರೂಪಾಯಿ ಅಗತ್ಯವಿದೆ ಎಂದರು.

ಬಾಳೆಹೊನ್ನೂರಲ್ಲಿ ಬಿಗಿ ಬಂದೋಬಸ್ತ್ : ಇತ್ತೀಚೆಗೆ ಆನೆ ದಾಳಿಗೆ ಮೃತಪಟ್ಟಾಗ ಸಾರ್ವಜನಿಕರ ಪ್ರತಿಭಟನೆ ಹಾಗೂ ಪೊಲೀಸರ ಲಾಠಿ ಚಾರ್ಜ್ ಘಟನೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಶನಿವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗಮನದ ಹಿನ್ನೆಲೆಯಲ್ಲಿ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಪಟ್ಟಣದ ಆಯ್ದ ಭಾಗಗಳಲ್ಲಿ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.

ಶಾಸಕ ಟಿ.ಡಿ.ರಾಜೇಗೌಡ, ಪಿಸಿಸಿಎಫ್ ಮೀನಾಕ್ಷಿ ನೇಗಿ, ಸಿಸಿಎಫ್ ಯಶ್‌ಪಾಲ್ ಕ್ಷೀರಸಾಗರ್, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಸಿಸಿಎಫ್ ಅಶ್ವಜಿತ್ ಮಿಶ್ರಾ, ಕೊಪ್ಪ ಡಿಎಫ್‌ಓ ಶಿವಶಂಕರ್, ಹಾಸನ ಡಿಎಫ್‌ಓ ಏಳುಕುಂಡಲ, ಚಿಕ್ಕಮಗಳೂರು ಡಿಎಫ್‌ಓ ರಮೇಶ್ ಬಾಬು, ಎಸಿಎಫ್ ಮೋಹನ್‌ಕುಮಾರ್, ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ ಮತ್ತಿತರರು ಹಾಜರಿದ್ದರು. (ಬಾಕ್ಸ್)

ಹಾವಳಿ ನಡೆಸುವ ಕಾಡುಕೋಣ ಸೆರೆ ಶೀಘ್ರಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿಯೂ ಹೆಚ್ಚಾಗಿ ಹಲವರಿಗೆ ತೊಂದರೆ ನೀಡಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮದ್ಯಪ್ರದೇಶಕ್ಕೆ ಕಳುಹಿಸಿ ಕಾಡುಕೋಣಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ, ಸೆರೆ ಹಿಡಿಯು ತರಬೇತಿ ಪಡೆಯಲು ಸೂಚಿಸಲಾಗಿದೆ. ನಮ್ಮ ಸಿಬ್ಬಂದಿ ಈಗಾಗಲೇ ಇದರ ಕಾರ್ಯದಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಡು ಕೋಣಗಳ ಸೆರೆ ಶೀಘ್ರ ಆರಂಭಿಸಲಾಗುವುದು ಎಂದರು. (ಬಾಕ್ಸ್)

ಮತ್ತೊಂದು ಕಾಡಾನೆ ಸೆರೆಗೆ ಆದೇಶ ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 6 ಕಾಡಾನೆಗಳನ್ನು ಸೆರೆ ಹಿಡಿದಿದ್ದು, ಜನರ ಜೀವ, ಕೃಷಿ ಜಮೀನುಗಳಿಗೆ ತೊಂದರೆ ಮಾಡುತ್ತಿರುವ ಮತ್ತೊಂದು ಕಾಡಾನೆ ಸೆರೆಗೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ., ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಮತ್ತೊಂದು ಕಾಡಾನೆ ಸೆರೆಗೆ ಆದೇಶವನ್ನು ಸ್ಥಳದಲ್ಲಿಯೇ ಮಾಡಲಾಗಿದೆ ಎಂದು ಈಶ್ವರ್ ಬಿ.ಖಂಡ್ರೆ ತಿಳಿಸಿದರು.(ಬಾಕ್ಸ್)

ಸೆಕ್ಷನ್ 4 ಸಮಸ್ಯೆ ಸ್ವಾತಂತ್ರ್ಯ ಪೂರ್ವದ್ದು ಸೆಕ್ಷನ್ 4 ಸಮಸ್ಯೆ ಸ್ವಾತಂತ್ರ್ಯ ಪೂರ್ವದ್ದಾಗಿದ್ದು, ರಾಜ ಮಹಾರಾಜರ ಕಾಲದಲ್ಲಿಯೇ ಅಧಿಸೂಚನೆ ಆದ ಹಲವು ಪ್ರಕರಣ ಸೆಕ್ಷನ್ 17 ಆಗದೆ ಇನ್ನೂ ಬಾಕಿಯಿದೆ. ಸೆಕ್ಷನ್ 4ನಿಂದ 17 ಮಾಡಲು ಕೇವಲ ರಾಜ್ಯ ಸರ್ಕಾರದ ಕೈಯಿಂದ ಆಗಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಗೂ ಬರುತ್ತದೆ.ಸರ್ಕಾರ ಕಾನೂನು ವ್ಯಾಪ್ತಿಯಲ್ಲಿಯೇ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ. ಅರಣ್ಯ ಭೂಮಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ, ಶಾಲೆ, ಆಸ್ಪತ್ರೆ ಮುಂತಾದವು ನಿರ್ಮಾಣ ಮಾಡಲು ಬಳಸಬೇಕಾದರೆ ತೀರುವಳಿ (ಎಫ್‌ಸಿ) ನಿಯಮಗಳ ಪಾಲನೆ ಮಾಡಬೇಕಾಗುತ್ತದೆ. ಇದಕ್ಕೂ ಸಹ ಸಮಯ ಬೇಕಾಗಲಿದೆ ಎಂದು ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.(ಬಾಕ್ಸ್)

ಕಂದಾಯ-ಅರಣ್ಯ ಸರ್ವೆಗೆ ಟಾಸ್ಕ್ಪೋರ್ಸ್ ಕಂದಾಯ-ಅರಣ್ಯ ಭೂಮಿ ಸಮಸ್ಯೆಯ ಸರ್ವೆಗೆ ಪ್ರತ್ಯೇಕ ಟಾಸ್ಕ್ಪೋರ್ಸ್ ರಚನೆಗೆ ಆದೇಶಿಸಲಾಗಿದೆ. ಇದು ತನ್ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.

(ಬಾಕ್ಸ್)

ಡೀಮ್ಡ್ ಫಾರೆಸ್ಟ್ ವಿಚಾರ ಪ್ರಸ್ತಾಪಕ್ಕೆ ಆಕ್ಷೇಪ: ಸಭೆಯಲ್ಲಿ ಗೊಂದಲಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಡೀಮ್ಡ್ ಫಾರೆಸ್ಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಸಭೆಯಲ್ಲಿದ್ದ ಶೃಂಗೇರಿ ಬಿಜೆಪಿ ಮುಖಂಡ ಅಂಬ್ಲೂರು ರಾಮಕೃಷ್ಣ ತಕರಾರು ತೆಗೆದು ಸಚಿವರು ಮಾತನಾಡದಂತೆ ಅಡ್ಡಿಪಡಿಸಿದ್ದು, ಕೆಲ ಕಾಲ ಸಭೆಯಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಯಿತು.ಸಚಿವರು ಕೂಡಲೇ ನಾನು ಮಾತನಾಡಿ ಮುಗಿಸಿದ ಮೇಲೆ ನೀವು ಅದಕ್ಕೆ ಪ್ರಶ್ನೆ ಕೇಳಿ, ನಾನು ಉತ್ತರ ನೀಡುತ್ತೇನೆ ಎಂದರೂ ರಾಮಕೃಷ್ಣ ಅದನ್ನು ಆಲಿಸದೆ ಪುನಃ ಆಕ್ಷೇಪವೆತ್ತಿದ್ದು, ಸ್ಥಳದಲ್ಲಿದ್ದ ಅಡಿಷನಲ್ ಎಸ್ಪಿ ಜಯಕುಮಾರ್ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಅವರ ಬಳಿ ಹೋಗಿ ಮಾತನಾಡದಂತೆ ಸೂಚಿಸಿದರು. ಆದರೂ ಪ್ರತಿರೋಧ ತೋರಿದಾಗ ಪೊಲೀಸರು ಅವರನ್ನು ಹೊರ ಕಳುಹಿಸಲು ಯತ್ನಿಸಿದರು. ಸ್ಥಳದಲ್ಲಿದ್ದ ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯಿಸಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿಮ್ಮ ಸರ್ಕಾರವಿದ್ದಾಗ ಬಗೆಹರಿಸಲು ಆಗಲಿಲ್ಲ. ಈಗ ಇಲ್ಲಿ ತಕರಾರು ತೆಗೆಯಲು ಬಂದಿದ್ದೀರಾ. ಸುಮ್ಮನೆ ಕುಳಿತುಕೊಳ್ರಿ. ಸಭೆ ಹಾಳು ಮಾಡಲು ಬಂದಿದ್ದೀರಾ ಎಂದರು. ಸಭೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಹ ರಾಮಕೃಷ್ಣ ಮಾತನ್ನು ಆಕ್ಷೇಪಿಸಿ ಅವರನ್ನು ಹೊರ ಕಳುಹಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅವರು ಸುಮ್ಮನೆ ಕುಳಿತುಕೊಂಡಾಗ ಸಭೆ ಮುಂದುವರೆಯಿತು.(ಬಾಕ್ಸ್)

ಅರಣ್ಯ ವಾಸಿಗಳಿಗೆ ಹಕ್ಕುಪತ್ರಕ್ಕೆ ಒಂದು ತಲೆಮಾರಿನ ಸಾಕ್ಷ್ಯಕ್ಕೆ ಅವಕಾಶ ನೀಡಿಅರಣ್ಯದಲ್ಲಿ ವಾಸವಿರುವ ಎಲ್ಲಾ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡಲು ಕೇವಲ ಒಂದು ತಲೆ ಮಾರಿನ ಸಾಕ್ಷ್ಯ ನೀಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಕೋರಲಾಗಿದೆ ಎಂದು ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದರು. ವಿಧಾನಸಭೆ, ಪರಿಷತ್ ಎರಡರಲ್ಲೂ ಕೂಡ ಚರ್ಚೆ ಮಾಡಿ ಅವಿರೋಧ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ ಎಂದರು.

(ಬಾಕ್ಸ್)

ಸಾಫ್ಟ್ ರಿಲೀಸ್ ಕೇಂದ್ರಕ್ಕೆ 2 ಸಾವಿರ ಹೆಕ್ಟೇರ್ ಭೂಮಿ ಗುರುತು ಮಾನವ-ಕಾಡಾನೆ ಸಂಘರ್ಷ ತಡೆಯಲು ಸಾಫ್ಟ್ ರಿಲೀಸ್ ಕೇಂದ್ರ ಆರಂಭಿಸಲು ರಾಜ್ಯದಲ್ಲಿ ಈಗಾಗಲೇ 2 ಸಾವಿರ ಹೆಕ್ಟೇರ್ ಭೂಮಿಯನ್ನು ಗುರುತಿಸಿದ್ದು, ಕೇಂದ್ರ ಸರ್ಕಾರ ಬೇರೆ ಭೂಮಿಯನ್ನು ಗುರುತಿಸಲು ಸೂಚಿಸಿದೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವರ ಬಳಿಯೂ ಮಾತನಾಡಲಾಗಿದೆ. ಸಾಫ್ಟ್ ರಿಲೀಸ್ ಸೆಂಟರ್ ಗೆ ರೂ.53 ಕೋಟಿ ಅನುದಾನ ಮೀಸಲಿರಿಸಿದ್ದು, ಇದು ಆರಂಭಗೊಂಡಲ್ಲಿ ಹಂತ ಹಂತವಾಗಿ ಕಾಡಾನೆ ಸಮಸ್ಯೆಗಳು ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು.(ಬಾಕ್ಸ್)

ಜನಸ್ನೇಹಿ ಅರಣ್ಯ ಇಲಾಖೆಗೆ ಸೂಚನೆ ಅರಣ್ಯ ಇಲಾಖೆಯನ್ನು ಜನಸ್ನೇಹಿ ಮಾಡಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅರಣ್ಯದ ಅಂಚಿಗೆ ಅಧಿಕಾರಿಗಳು ತೆರಳಿ ಕಾರ್ಯನಿರ್ವಹಿಸುವಂತೆ ತಿಳಿಸಲಾಗಿದೆ. ಕಾಡಂಚಿನ ಜನರ ಸಹಕಾರವನ್ನು ಪಡೆದಾಗ ಮಾತ್ರ ನಾವು ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟಲು ಸಾಧ್ಯವಿದೆ. ಅರಣ್ಯ ಇಲಾಖೆ ಎಂದಿಗೂ ಕೂಡ ಜನರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುವುದಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.೨೮ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ನಡೆದ ಮಾನವ-ಪ್ರಾಣಿ ಸಂಘರ್ಷದ ಸಂವಾದ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಮನವಿ ಸ್ವೀಕರಿಸಿದರು.೨೮ಬಿಹೆಚ್‌ಆರ್ ೫: ನಡೆದ ಮಾನವ-ಪ್ರಾಣಿ ಸಂಘರ್ಷದ ಸಂವಾದ ಸಭೆಯಲ್ಲಿ ಸಚಿವ ಈಶ್ವರ್ ಬಿ.ಖಂಡ್ರೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.೨೮ಬಿಹೆಚ್‌ಆರ್ ೬: ಸಂವಾದದಲ್ಲಿ ಡೀಮ್ಡ್ ಫಾರೆಸ್ಟ್ ವಿಚಾರವಾಗಿ ಆಕ್ಷೇಪವೆತ್ತಿದ ಬಿಜೆಪಿ ಮುಖಂಡರನ್ನು ಹೊರ ಕಳುಹಿಸಲು ಪೊಲೀಸರು ಯತ್ನಿಸುತ್ತಿರುವುದು.೨೮ಬಿಹೆಚ್‌ಆರ್ ೭: ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ: ಮಾದಿಗ ಸಮಾಜದಿಂದ ದಿಢೀರ್ ರಸ್ತೆ ತಡೆ
ಬಿಜೆಪಿಗೆ ಬಿಎಸ್‍ವೈ ಕೊಡುಗೆ ಅಪಾರ: ಮಾಜಿ ಶಾಸಕ ಎಂ.ವಿ.ನಾಗರಾಜು