ಕನ್ನಡಪ್ರಭ ವಾರ್ತೆ ಬೇಲೂರು
ತಮ್ಮ ಸ್ವಗೃಹದಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ
ರಾಜಕೀಯದಲ್ಲಿ ಅನೇಕ ಏಳುಬೀಳುಗಳನ್ನು ಎದುರಿಸಿ ಬೆಳೆದ ಯಡಿಯೂರಪ್ಪ ಅವರು ದಕ್ಷಿಣ ಭಾರತದ ಭದ್ರಕೋಟೆಯಂತೆ ಹೆಸರು ಮಾಡಿರುವ ನಾಯಕರು. ಜನಸಾಮಾನ್ಯರ ಹಿತದೃಷ್ಟಿಯಿಂದ ಕೆಲಸ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಅವರ ಅಭಿಮಾನೋತ್ಸವ ಕಾರ್ಯಕ್ರಮ ಇದೇ ತಿಂಗಳ 9ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು, ಸಚಿವ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಮಹತ್ವದ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಧ ರಾಜ್ಯಗಳ ನಾಯಕರು ಹಾಗೂ ಮಠಾಧೀಶರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಯಡಿಯೂರಪ್ಪ ಅವರು ಜಾತಿ, ಧರ್ಮ ಭೇದವಿಲ್ಲದೆ ಸಮಾನತೆ ತತ್ವದಡಿ ಆಡಳಿತ ನಡೆಸಿದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಪ್ರತ್ಯೇಕ ರೈತ ಬಜೆಟ್ ಮಂಡಿಸಿದ ಏಕೈಕ ನಾಯಕರು. ಅವರ ಆಡಳಿತದಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ರೈತರ ಬದುಕು ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಪ್ರತಿಯೊಬ್ಬ ರೈತನ ಮನೆಗೆ ಆರ್ಥಿಕ ನೆರವು ತಲುಪಿಸುವ ಕೆಲಸ ನಡೆದಿದೆ ಎಂದು ಹೇಳಿದರು.ವಿಶೇಷವಾಗಿ ಬೇಲೂರು ಭಾಗದಲ್ಲಿ ಜನರ ಹೋರಾಟದ ಫಲವಾಗಿ ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಜಾಕ್ವಲ್ ಯೋಜನೆಯಡಿ 57 ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ನಿವಾರಣೆಯಾಗಿದ್ದು, ಜೀವನಮಟ್ಟ ಸುಧಾರಿಸಿದೆ. ಜೊತೆಗೆ ರಣಘಟ್ಟ ಯೋಜನೆಗೆ 127 ಕೋಟಿ ರು. ಮಂಜೂರಾಗಿದೆ. ಈ ಅಭಿಮಾನೋತ್ಸವ ಇತಿಹಾಸದಲ್ಲಿ ಸ್ಮರಣೀಯವಾಗಲಿದ್ದು ಈ ಕಾರ್ಯಕ್ರಮ ಯಶಸ್ವಿಯಾಗಲು ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶಾಸಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸಂಜು ಕೌರಿ, ಮಾಜಿ ಅದ್ಯಕ್ಷ ಜಿ ಕೆ ಕುಮಾರ್, ಕಾರ್ಯದರ್ಶಿ ನವೀನ್, ಯುವ ಮೊರ್ಚ ಅಧ್ಯಕ್ಷ ಸುಮನ್, ಜಗದೀಶ್ ಹಾಜರಿದ್ದರು.