ಯಲಬುರ್ಗಾ ಕ್ಷೇತ್ರದ ರಾಜಕೀಯ ಶ್ರೀಗಂಧ ಶಿರೂರು ವೀರಭದ್ರಪ್ಪ

KannadaprabhaNewsNetwork |  
Published : Nov 24, 2025, 03:00 AM IST
23ಕೆಕೆಆರ್2: ಕೊಟ್1. ಹನುಮಂತರೆಡ್ಡಿ ಶಿರೂರು  | Kannada Prabha

ಸಾರಾಂಶ

1962ರಲ್ಲಿ ಶಿರೂರ ವೀರಭದ್ರಪ್ಪ ಗಾಂಧಿ ಅನುಯಾಯಿಗಳು ಸ್ಥಾಪಿಸಿದ್ದ ಲೋಕಸೇವಾ ಸಂಘದಿಂದ ಅಖಾಡಕ್ಕೆ ಇಳಿದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಳವಂಡಿಯ ಶಂಕರಗೌಡ ಅವರ ವಿರುದ್ಧ ಜಯಶಾಲಿಯಾದರು.

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ತಾಲೂಕಿನ ಆಡೂರು ಗ್ರಾಮದ ಹಿರಿಯ ಸ್ವಾತಂತ್ರ್ಯ ಯೋಧರು, ಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ಶಿರೂರು ವೀರಭದ್ರಪ್ಪನವರ ಮೂರ್ತಿ ಅನಾವರಣ ಕಾರ್ಯಕ್ರಮ ನ. 24ರಂದು ಗ್ರಾಮದಲ್ಲಿ ಹರಗುರುಚರಮೂರ್ತಿಗಳ ಸಾನ್ನಿಧ್ಯದಲ್ಲಿ ಹಾಗೂ ಗಣ್ಯರ ಸಮ್ಮುಖದಲ್ಲಿ ಜರುಗಲಿದೆ.

ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಾಸಕರು

ಶಿರೂರು ವೀರಭದ್ರಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕರು ಸಹ ಹೌದು. ಸರಳ ಹಾಗೂ ಪ್ರಾಮಾಣಿಕ ಜೀವನದಿಂದ ಮನೆ ಮಾತಾಗಿದ್ದ ಅವರು. ತಮ್ಮ ಬದುಕನ್ನು ಜನರ ಅಭಿವೃದ್ಧಿಗೆ ಮೀಸಲಿಟ್ಟವರು. ಮಹಾತ್ಮ ಗಾಂಧೀಜಿ 1934ರಲ್ಲಿ ಕರ್ನಾಟಕ ಪ್ರವಾಸ ಕೈಗೊಂಡಿದ್ದಾಗ ತಾಲೂಕಿನ ಭಾನಾಪೂರ ರೈಲ್ವೇ ನಿಲ್ದಾಣದಲ್ಲಿ ಅವರಿಂದ ಭಾಷಣ ಮಾಡಿಸಿದ್ದರು. 90 ನಿಮಿಷಗಳ ಕಾಲ ಜನ ಅವರನ್ನು ಭೇಟಿ ಆಗುವಂತೆ ಮಾಡಿದ್ದರು. ನಂತರ ಅವರ ಪ್ರೇರಣೆಯಿಂದ ಹಳ್ಳಿ ಹಳ್ಳಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದರು. ಎಷ್ಟೋ ಬಾರಿ ಜೈಲು ವಾಸ ಸಹ ಅನುಭವಿಸಿದರು. ಆಡೂರಿನಲ್ಲಿ ರಾಷ್ಟ್ರೀಯ ಶಾಲೆ ಸಹ ಆರಂಭಿಸಿದರು. ಸ್ವಾತಂತ್ರ್ಯ ನಂತರ 1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಧಿಕ್ಕರಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 200 ಮತಗಳ ಅಂತರದಿಂದ ಅಯ್ಯನಗೌಡ ಸಂಗನಾಳ ಅವರಿಂದ ಸೋತರು.

ನಂತರ 1957ರಲ್ಲಿ ಸಹ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆ ಮತ್ತು ನಂತರ ನಡೆದ ಕಾನೂನು ಹೋರಾಟ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಳವಂಡಿ ಶಂಕರಗೌಡ ಪಕ್ಷೇತರ ಅಭ್ಯರ್ಥಿ ಶಿರೂರ ವೀರಭದ್ರಪ್ಪ ವಿರುದ್ಧ ಜಯ ಸಾಧಿಸಿದರು. ವೀರಭದ್ರಪ್ಪ ಇದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡಿದರು. ಸಹಕಾರಿ ಸಂಘವೊಂದರಲ್ಲಿ ವೇತನ ಪಡೆಯುತ್ತಿದ್ದರೂ ತಪ್ಪು ಮಾಹಿತಿ ನೀಡಿ, ಸ್ಪರ್ಧೆ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದರು. ಅದರಲ್ಲಿ ಗೆಲವು ಸಾಧಿಸಿದರು. ಗೆದ್ದಿದ್ದ ಅಳವಂಡಿ ಶಂಕರಗೌಡ ಸೋತು, ಶಿರೂರು ವೀರಭದ್ರಪ್ಪ ಜಯಶಾಲಿ ಎಂದು ತೀರ್ಮಾನವಾಯಿತು.

ಅದರಂತೆ ಸುಮಾರು 51 ದಿನಗಳ ಕಾಲ ಶಾಸಕರಾದರು. ಅಳವಂಡಿ ಶಂಕರಗೌಡ ಸುಪ್ರೀಂ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದು, ಶಾಸಕರಾಗಿ ಮುಂದುವರೆದರು. ಸುಪ್ರೀಂ ಕೋರ್ಟಿನಲ್ಲಿ ಸುದೀರ್ಘ ನಾಲ್ಕು ವರ್ಷಗಳ ವಿಚಾರಣೆ ನಡೆದು ಅಳವಂಡಿ ಶಂಕರಗೌಡರ ಆಯ್ಕೆ ಅನೂರ್ಜಿತಗೊಂಡು, ಶಿರೂರು ವೀರಭದ್ರಪ್ಪ ಜಯಶಾಲಿಯಾದರು.

1962ರಲ್ಲಿ ಶಿರೂರ ವೀರಭದ್ರಪ್ಪ ಗಾಂಧಿ ಅನುಯಾಯಿಗಳು ಸ್ಥಾಪಿಸಿದ್ದ ಲೋಕಸೇವಾ ಸಂಘದಿಂದ ಅಖಾಡಕ್ಕೆ ಇಳಿದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಳವಂಡಿಯ ಶಂಕರಗೌಡ ಅವರ ವಿರುದ್ಧ ಜಯಶಾಲಿಯಾದರು.

ಶೋಷಿತರ ಅಭಿವೃದ್ಧಿಗೆ ಜೀವನ ಮುಡಿಪು

ಶಿರೂರು ವೀರಭದ್ರಪ್ಪ 1908ರಲ್ಲಿ ಆಡೂರು ಗ್ರಾಮದಲ್ಲಿ ಜನಿಸಿದರು. ಸ್ವಾತಂತ್ರ್ಯ ಪ್ರೇಮ, ಶೈಕ್ಷಣಿಕ ಅಭಿವೃದ್ಧಿ ಹಾಗೂ ಹಳ್ಳಿ ಜನರ ಬುದುಕು ಸುಧಾರಣೆ ಕನಸು ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ಪಡೆದು ತರುಣರ ಪಡೆ ಕಟ್ಟಿದರು. 1932ರಲ್ಲಿ ಆಡೂರಿನಲ್ಲಿ ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ದೀನ ದಲಿತರ ಮಕ್ಕಳಿಗೆ ಶಿಕ್ಷಣ ನೀಡುವ ಅವಕಾಶ ಕಲ್ಪಿಸಿದರು. 1940ರಲ್ಲಿ ವೀರಶೈವ ಬೋರ್ಡಿಂಗ್ ಆರಂಭಿಸಿದರು. ಇಲ್ಲಿ ನೂರಾರು ಬಡ ಮಕ್ಕಳಿಗೆ ಶಿಕ್ಷಣ ನೀಡಿದರು. ಈ ರ್ಬೋರ್ಡಿಂಗ್ ನಲ್ಲಿ ಶಿಕ್ಷಣ ಸುಧಾರಣೆಗೆ ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ ಸಹ ನೀಡಿದರು. 1947ರ ಸ್ವಾತಂತ್ರ್ಯ ನಂತರ ಹೈದರಾಬಾದ ಭಾಗದಲ್ಲಿ ನವಾಬನ ಕಟ್ಟಪ್ಪಣೆ ಮೀರಿ ಕೊಪ್ಪಳದಲ್ಲಿ ರಾಷ್ಟ್ರಧ್ವಜ ಹಾರಿಸಿದ ಕೀರ್ತಿ ವೀರಭದ್ರಪ್ಪನವರಿಗೆ ಸಲ್ಲುತ್ತದೆ. ಈ ಕಾರಣದಿಂದ ಅವರು ಜೈಲಿಗೆ ಸಹ ಹೋಗಿದ್ದುಂಟು. ನಂತರ ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾದರು. ತುಂಗಭದ್ರಾ ಆಣೆಕಟ್ಟು ಕಟ್ಟಬೇಕೆಂದು ಒತ್ತಾಯಿಸಿದ ಮೊದಲ ವ್ಯಕ್ತಿ ಸಹ ವೀರಭದ್ರಪ್ಪನವರೇ.

1945ರಲ್ಲಿ ಅಸ್ಪೃಶ್ಯತೆ ತೊಡೆದು ಹಾಕಲು ಆಡೂರು ಗ್ರಾಮದ ದಲಿತರ ಸ್ಥಳಕ್ಕೆ ಹೋಗಿ ಅವರ ಮನೆಯಲ್ಲಿ ಸಹಪಂಕ್ತಿ ಭೋಜನ ಮಾಡಿದ್ದಲ್ಲದೇ ಅವರಿಗೆ ಅಕ್ಷರ ಜ್ಞಾನ ಕಲಿಸಲು ಅವಿರತವಾಗಿ ಶ್ರಮಿಸಿದರು.

ಸದಾ ಗಾಂಧಿ ಟೋಪಿ, ಗಾಂಧೀಯ ಆದರ್ಶದ ಜತೆ ಖಾದಿ ತೊಟ್ಟು ಬಡತನ ಮಧ್ಯದಲ್ಲಿಯೂ ಶಿಸ್ತು ಸಂಯಮದ ಬದುಕು ನಡೆಸಿದ ಅವರು 1976, ಏ.18ರಂದು ಅಗಲುತ್ತಾರೆ.

ನಮ್ಮ ಆಡೂರು ಗ್ರಾಮದ ಶಿರೂರು ವೀರಭದ್ರಪ್ಪ ಎಂಎಲ್ಎ ಆಗಿ ಸಾಮಾನ್ಯರಂತೆ ಬದುಕಿದವರು. ನ್ಯಾಯಯುತ ನಡೆಯಿಂದ ಜನಮೆಚ್ಚುಗೆ ಗಳಿಸಿದರು. ತಮ್ಮ ಜೀವನದುದ್ದಕ್ಕೂ ಜನರಿಗೆ ಶ್ರೀಗಂಧದ ಬದುಕು ನೀಡಿದರು. ಬರಗಾಲ ಎದುರಿಸಲು ಸರ್ಕಾರಕ್ಕೆ ತಾವೇ ಸ್ವತಃ ಮಾರ್ಗೋಪಾಯ ನೀಡಿ ಜನರ ಹಸಿವನ್ನು ನೀಗಿಸಿದ್ದಾರೆ. ಅವರ ಮೂರ್ತಿ ಮುಂದಿನ ಪೀಳಿಗೆಗೆ ಆದರ್ಶ ಜೀವನ ನೆನಪು ಮಾಡಿಕೊಡುತ್ತದೆ. ಅವರ ಸರಳತೆ ಜೀವನ ನಿಜಕ್ಕೂ ಮಾದರಿ ಎಂದು ಅಖಿಲ ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಹಾಗೂ ಮುಖಂಡ ಹನುಮಂತರೆಡ್ಡಿ ಶಿರೂರು ತಿಳಿಸಿದ್ದಾರೆ.

PREV

Recommended Stories

ವಿಪತ್ತು ನಿರ್ವಹಣಾ ಪಡೆ ಸೇವೆ ಅನನ್ಯ: ಎಡಿಸಿ ಮಹಮ್ಮದ್ ಝುಬೇರ್
ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಕಡೆಗಣನೆ: ಶಾಸಕ ಗಣೇಶ್