ಪರಶಿವಮೂರ್ತಿ ದೋಟಿಹಾಳ
ಹೆಸರು ಬೆಳೆಗೆ ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ಹಳದಿ ರೋಗ (ನಂಜಾಣು) ಕಾಣಿಸಿಕೊಂಡಿದ್ದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.ಮುಂಗಾರು ಹಂಗಾಮಿಗೆ ತಾಲೂಕಿನ ದೋಟಿಹಾಳ, ಹಿರೇಮನ್ನಾಪೂರು, ಬಿಜಕಲ್, ಜುಮಲಾಪೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೆಸರು ಬಿತ್ತನೆಯಾಗಿದೆ. ಈ ವೇಳೆಗೆ ಹವಾಮಾನ ವೈಪರೀತ್ಯ ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಿರುವಾಗ ಹಳದಿ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕ ಹೆಚ್ಚಿಸಿದೆ.
ಮಳೆ ಕೊರತೆ:ಉತ್ತಮ ಮುಂಗಾರು ಪೂರ್ವ ಮಳೆ ಸುರಿದ್ದರಿಂದ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಇದೀಗ ಮಳೆ ಕೊರತೆಯಿಂದ ಬೆಳೆ ಬಾಡುತ್ತಿದೆ. ಮತ್ತೊಂದೆಡೆ ಇರುವ ಅಲ್ಪಸಲ್ಪ ಬೆಳೆಗೂ ಹಳದಿ ರೋಗ ಕಾಣಿಸಿಕೊಂಡಿದೆ. ಇದು ರೈತರಿಗೆ ಗಾಯ ಮೇಲೆ ಬರೆ ಎಳೆದಂತೆ ಆಗಿದೆ. ಆರಂಭದಲ್ಲಿ ಹೊಲದ ಕೆಲ ಭಾಗದಲ್ಲಷ್ಟೇ ಕಾಣಿಸಿಕೊಳ್ಳುವ ಈ ರೋಗ ಆನಂತರ ಇಡೀ ಹೊಲಕ್ಕೆ ವ್ಯಾಪಿಸುತ್ತಿದೆ. ವೈರಸ್ ಮೂಲದ ರೋಗ ಇದಾಗಿದ್ದು, ವೈರಸ್‌ಗಳು ಗಾಳಿಯಲ್ಲಿ ಹಾರುವುದರಿಂದ ಪಕ್ಕದ ಹೊಲಗಳಿಗೂ ಬಾಧಿಸುತ್ತಿದೆ. ಕೆಲ ಹೊಲಗಳಲ್ಲಿ ಮೊಗ್ಗು ಮತ್ತು ಕುಡಿಗೆ ಕರಿಶೀರುಗಳು ಮೆತ್ತಿರುವುದು ಕಂಡುಬಂದಿದೆ. ಕರಿಶೀರುಗಳು ರಸ ಹೀರುವುದರಿಂದ ಬಳ್ಳಿಯ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತಿದೆ.
ರೋಗಕ್ಕೆ ತುತ್ತಾದ ಬೆಳೆಯನ್ನು ಪ್ರಾರಂಭ ಹಂತದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ರೋಗಪೀಡಿತ ಗಿಡ ಕಿತ್ತು ಸುಟ್ಟು ಹಾಕುವುದರಿಂದ ರೋಗದ ಸೋಂಕು ಕಡಿಮೆಯಾಗುತ್ತದೆ. ಬಿತ್ತಿದ 3ರಿಂದ 4 ವಾರಗಳ ನಂತರ ಡೈಪೆಂಧೂರಾನ್ 50 ಡಬ್ಲ್ಯೂಪಿ 1 ಗ್ರಾಂ./ಲೀ ಅಥವಾ ಬೇವಿನ ಕಷಾಯ 5 ಮಿ.ಲೀ/1ಲೀ ನೀರಿನಲ್ಲಿ ಬೆರೆಸಿ 7 ದಿನಗಳ ಅಂತರದಲ್ಲಿ ಸಿಂಪಡಿಸುವುದು ಸೂಕ್ತ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ರೈತರ ಅಳಲು
ನಾಗರಾಜ ಕಾತರಕಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಕುಷ್ಟಗಿ