ಗದಗ ಜಿಲ್ಲೆಯಲ್ಲಿ ಹೆಸರು ಬೆಳೆಗೆ ಹಳದಿ ರೋಗ

KannadaprabhaNewsNetwork |  
Published : Jul 13, 2026, 01:30 AM IST
11ಜಿಡಿಜಿ13 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಿತ್ತನೆಯಾದ ಬಹುತೇಕ ಹೆಸರು ಬೆಳೆಗೆ ಹಳದಿ ರೋಗ ಬಾಧಿಸುತ್ತಿದ್ದು, ರೋಗ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುವಂತಾಗಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತವಾಗುವ ಜತೆಗೆ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಮಹೇಶ ಛಬ್ಬಿ/ ಅಶೋಕ ಸೊರಟೂರ

ಗದಗ/ ಲಕ್ಷ್ಮೇಶ್ವರ: ಮುಂಗಾರಿನಲ್ಲಿ ಸುರಿದ ಅಲ್ಪ ಮಳೆಗೆ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಸದ್ಯ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಜತೆಗೆ ಹಳದಿ ರೋಗ ಬಾಧಿಸುತ್ತಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.

ಜಿಲ್ಲೆಯಲ್ಲಿ ಬಿತ್ತನೆಯಾದ ಬಹುತೇಕ ಹೆಸರು ಬೆಳೆಗೆ ಹಳದಿ ರೋಗ ಬಾಧಿಸುತ್ತಿದ್ದು, ರೋಗ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುವಂತಾಗಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತವಾಗುವ ಜತೆಗೆ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ರೋಹಿಣಿ ಮಳೆಗೆ ಬಿತ್ತನೆ ಮಾಡಿದ ಹೆಸರು ಬೆಳೆ ಸದ್ಯ ಹೂವು ಬಿಡುವ, ಕಾಯಿ ಕಟ್ಟುವ ಸಮಯ. ಇದೇ ವೇಳೆ ರೋಗ ಬಾಧಿಸುತ್ತಿದ್ದು, ಅದು ಸಂಪೂರ್ಣ ಹೊಲವನ್ನು ಆವರಿಸಿ ಬೆಳೆ ನಾಶ ಮಾಡುತ್ತಿದೆ. ಮಳೆ ಇಲ್ಲದೇ ಅಲ್ಪಸ್ವಲ್ಪವಾದರೂ ಬೆಳೆ ಕೈಸೇರುತ್ತದೆ ಎಂದರೆ ರೋಗ ಅದನ್ನೂ ಕಸಿದುಕೊಂಡಿದೆ ಎನ್ನುತ್ತಾರೆ ರೈತರು.

ತೇವಾಂಶ ಕೊರತೆ: ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆ ವರದಿಯ ಮಧ್ಯೆಯೂ ರೈತರು ಧೈರ್ಯ ಮಾಡಿ ಹೆಸರು, ಶೇಂಗಾ, ಹತ್ತಿ, ಗೋವಿನಜೋಳ, ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಆದರೆ, ಹೊಲಗಳ ತಗ್ಗು ಪ್ರದೇಶದಲ್ಲಿ ಬಿತ್ತನೆ ಮಾಡಿದ ಕೆಲ ಬೆಳೆಗಳು ಹುಟ್ಟಿದ್ದರೆ ಇನ್ನೂ ಕೆಲವೆಡೆ ಹುಟ್ಟಿಯೇ ಇಲ್ಲ. ಇದರ ಮಧ್ಯೆ ಭೂಮಿಯಲ್ಲಿ ತೇವಾಂಶವಿಲ್ಲದೇ ಬೆಳೆ ಕಮರುತ್ತಿದೆ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 1.17 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಸದ್ಯ ಹೆಸರು ಬೆಳೆಗೆ ಹಳದಿ ರೋಗ ಬಾಧಿಸುತ್ತಿದ್ದು, ಅದು ಬಿಳಿ ನೊಣಗಳಿಂದ ಗಿಡದಿಂದ, ಗಿಡಕ್ಕೆ ವ್ಯಾಪಕವಾಗಿ ಹರಡುತ್ತದೆ. ರೋಗ ಬಾಧಿತ ಗಿಡಗಳನ್ನು ತಕ್ಷಣ ಕಿತ್ತು ಹಾಕಬೇಕು. ಕೀಟನಾಶಕ ಸಿಂಪರಣೆ ಮಾಡಿ ರೋಗ ನಿಯಂತ್ರಿಸಬಹುದು. ಜತೆಗೆ ಕಳೆ ನಿಯಂತ್ರಿಸಬೇಕು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬರಗಾಲ ಛಾಯೆ: ಮಳೆ ಕೊರತೆಯಿಂದ ಬೆಳೆಗಳು ಹಾನಿಯಾಗುತ್ತಿವೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಪರಿಶೀಲನೆ ನಡೆಸಬೇಕು. ಮಳೆ ಇಲ್ಲದೇ ಮುಂಗಾರಿನ ಯಾವುದೇ ಬೆಳೆಯೂ ರೈತನ ಕೈ ಹಿಡಿಯುವ ಲಕ್ಷಣ ಕಾಣುತ್ತಿಲ್ಲ. ತಕ್ಷಣ ಬೆಳೆವಿಮೆ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಬರಗಾಲ ಛಾಯೆ ಆವರಿಸಿದ್ದು, ಸರ್ಕಾರ ಗದಗ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ರೈತ ಸಂತೋಷ ಮಟ್ಟಿ ತಿಳಿಸಿದರು. ಹೆಸರು ಬೆಳೆಗೆ ಈಗ ಕಾಣಿಸಿಕೊಂಡಿರುವ ಹಳದಿ ರೋಗವನ್ನು ಆರಂಭದಲ್ಲಿಯೇ ನಿಯಂತ್ರಣ ಮಾಡಬೇಕು. ರೋಗ ಕಾಣಿಸಿಕೊಂಡ ಗಿಡಗಳನ್ನು ಕಿತ್ತು ಹೂಳಬೇಕು ಅಥವಾ ಸುಡಬೇಕು. ಇದರಿಂದ ಹಳದಿ ರೋಗದ ನಂಜಾಣು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಥೈಮಿಥಾಕ್ಸಂ ಅಥವಾ ಎಸಿಥೈಪ್ರೈಡ್ ಔಷಧಿಯನ್ನು ಸಿಂಪರಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ನರಸಮ್ಮನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಸ್ಪೂರ್ತಿಯಾಗಬೇಕು: ಹರೀಶ್ ಪೂಂಜ
ಉಡುಪಿ ಜಿಲ್ಲಾಸ್ಪತ್ರೆಗೆ ಸಚಿವ ಖಾದರ್ ದಿಢೀರ್ ಭೇಟಿ