ರೋಗಿಗಳ ಜೊತೆ ಮಾತನಾಡಿದ್ರೆ ಶೇ.90ರಷ್ಟು ರೋಗ ಪತ್ತೆ ಸಾಧ್ಯ: ಡಾ.ಗಂಗಾಧರ ಸೋಮಯಾಜಿ

KannadaprabhaNewsNetwork |  
Published : Apr 18, 2026, 02:45 AM IST
ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ 36ನೇ ಪದವಿ ಪ್ರದಾನ ಸಮಾರಂಭ | Kannada Prabha

ಸಾರಾಂಶ

ಮಂಗಳೂರು ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗುರುವಾರ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ 36ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು.

ಮಂಗಳೂರು: ಹೋಮಿಯೋಪತಿ ವಿಧಾನದಲ್ಲಿ ರೋಗಿಯ ಹಿನ್ನೆಲೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ರೋಗಿಗಳೊಂದಿಗೆ ಮಾತನಾಡುವುದರಿಂದ ಶೇ. 90ರಷ್ಟು ರೋಗ ಪತ್ತೆ ಮಾಡಲು ಸಾಧ್ಯವಿದೆ ಎಂದು ಯೇನೆಪೋಯ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎಸ್‌. ಗಂಗಾಧರ ಸೋಮಯಾಜಿ ಹೇಳಿದರು.

ಅವರು ಮಂಗಳೂರು ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗುರುವಾರ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ 36ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು.

ಇಂದು ಅಲೋಪತಿ ವಿಧಾನ ಬೆಳೆದಿದ್ದು, ವೈದ್ಯರು ರೋಗಿಗಳನ್ನು ನೋಡುವ ಬದಲು ಮೊದಲು ವಿವಿಧ ಪರೀಕ್ಷೆಗಳನ್ನು ನಡೆಸುತ್ತಾರೆ. ಅದರ ವರದಿಯ ಆಧಾರದ ಬಳಿಕವೇ ಅನೇಕ ಕಡೆಗಳಲ್ಲಿ ವೈದ್ಯರು ರೋಗಿಗಳನ್ನು ನೋಡುವ ಸನ್ನಿವೇಶ ಬಂದಿದೆ. ಇಂದು ರೋಗಿಯೊಳಗಿನ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದೇವೆಯೇ ಹೊರತು ರೋಗಿಗಲ್ಲ ಎಂದರು.ರೋಗಿಗಳಲ್ಲಿ ಮಾತನಾಡಿ:

ರೋಗಿಗಳೊಂದಿಗೆ ಮಾತನಾಡುವುದರಿಂದ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಇದರಿಂದಾಗಿ ಹೆಚ್ಚಿನ ಪರೀಕ್ಷೆಗಳಿಲ್ಲದೆ ರೋಗ ನಿರ್ಣಯ ಸಾಧ್ಯ. ರೋಗಿಗಳ ಆತ್ಮವಿಶ್ವಾಸ ಗೆಲ್ಲಬಹುದು. ವಿವಿಧ ಸವಾಲುಗಳು, ಅಡೆತಡೆಗಳ ನಡುವೆಯೂ ಹೋಮಿಯೋಪತಿ ಇಂದಿಗೂ ಉಳಿದುಕೊಂಡಿದೆ. ನೀಟ್ ಅರ್ಹತೆಯ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುತ್ತಿರುವುದರಿಂದ ಅನೇಕ ಕಡೆಗಳಲ್ಲಿ ನೋಂದಣಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಇದನ್ನು ಸರಳಗೊಳಿಸಬೇಕು. ಅದಾಗ್ಯೂ ಎಲ್ಲ ಅಡೆತಡೆಗಳನ್ನು ಮೀರಿ ಹೋಮಿಯೋಪತಿ ಮುನ್ನಡೆಯುತ್ತಿದೆ ಎಂದರು.

ಗ್ರಾಮಾಂತರದಲ್ಲಿ ವೈದ್ಯರ ಕೊರತೆ: ಹೋಮಿಯೋಪತಿಗೆ ಸಾಕಷ್ಟು ಅವಕಾಶಗಳಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ವ್ಯದ್ಯರ ಕೊರತೆ ಇದ್ದು, ನಗರ ಹೊರ ಭಾಗದಲ್ಲಿ ಸೇವೆ ನೀಡುವ ಅವಕಾಶ ಸಾಕಷ್ಟಿದೆ. ಅದರ ಸದುಪಯೋಗವಾಗಬೇಕು. ಇದರೊಂದಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆಯುವುದು ಹಾಗೂ ಸಂಶೋಧನೆಗೆ ವಿಪುಲ್ಲ ಅವಕಾಶವಿದೆ. ವಿದ್ಯಾರ್ಥಿಗಳು ಸಂಶೋಧನೆಯ ಹಾದಿಯಲ್ಲಿ ಮುನ್ನಡೆದು, ಹೊಸ ಆವಿಷ್ಕಾರಕ್ಕೆ ಮುನ್ನುಡಿ ಬರೆಯಬೇಕು ಎಂದು ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಹೇಳಿದರು.

ಹೊಸತನ ಮೂಡಿಸಿ:

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಫಾದರ್‌ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ರೆ.ಫಾ. ಡಾ. ಪೀಟರ್‌ ವಾವ್ಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋಮಿಯೋಪತಿ ಮಾತಿನೊಂದಿಗೆ ಆರಂಭಗೊಂಡು, ರೋಗಿಗಳಿಗೆ ಗೌರವ ನೀಡುವುದು ಹಾಗೂ ಅವರ ಹಿನ್ನೆಲೆಯನ್ನು ಸಂಗ್ರಹಿಸಿ ಚಿಕಿತ್ಸೆ ನೀಡುವ ವಿಧಾನವಾಗಿದೆ. ತರಗತಿಗಳಲ್ಲಿ ಸಿಗುವ ಜ್ಞಾನವೇ ಸಂಪೂರ್ಣವಲ್ಲ. ಅದರೊಂದಿಗೆ ಸರಿಯಾದ ಪುರಾವೆಗಳು, ಸಂಶೋಧನೆಗಳು ಅಗತ್ಯ. ಸಾಕಷ್ಟು ಸಂದರ್ಭಗಳಲ್ಲಿ ಹೋಮಿಯೋಪತಿ ವಿಧಾನ ಎರಡನೇ ಆಯ್ಕೆಯಾಗುತ್ತದೆ. ಆದರೆ ಹೋಮಿಯೋಪತಿಯ ಆಳ, ಅಗಲವನ್ನು ವಿವರಿಸುವ ಕೆಲಸವಾಗಬೇಕು. ನಿರಂತರ ಕಲಿಕೆ, ಅಭ್ಯಾಸ, ಸಂಶೋಧನೆಯಿಂದ ಹೋಮಿಯೋಪತಿ ವಿಧಾನದಲ್ಲಿ ಹೊಸತನ ಮೂಡಿಸಲು ಸಾಧ್ಯ ಎಂದರು.

ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಾಸಿಟಿಕಲ್ ಡಿವಿಷನ್ ನ ಆಡಳಿತಾಧಿಕಾರಿ ರೆ.ಫಾ. ನೆಲ್ಸನ್ ಧೀರಜ್ ಪಾಯಿಸ್, ಸಹಾಯಕ ಆಡಳಿತಾಧಿಕಾರಿ ರೆ.ಫಾ. ಅಶ್ವಿನ್ ಲಾರೆನ್ಸ್ ಕ್ರಾಸ್ತಾ, ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭುಕಿರಣ್, ಉಪಪ್ರಾಂಶುಪಾಲ ಡಾ.ವಿಲ್ಮಾ ಮೀರಾ ಡಿಸೋಜಾ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ಉಪ ವೈದ್ಯಕೀಯ ಅಧೀಕ್ಷಕಿ ಡಾ. ದೀಪಾ ಪಾಯಿಸ್ ಮತ್ತಿತರರು ಇದ್ದರು.

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫಾವುಸ್ತಿನ್ ಲೂಕಸ್ ಲೋಬೊ ಪ್ರಾಸ್ತಾವಿಸಿ ಸ್ವಾಗತಿಸಿದರು. ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ.ಡಾ. ಡೊನಾಲ್ಡ್ ನೀಲೇಶ್ ಕ್ರಾಸ್ತಾ ವಂದಿಸಿದರು.

ಆರ್ ಜಿಎಚ್ ಎಸ್ ಚಿನ್ನದ ಪದಕ ವಿಜೇತರಾದ ಡಾ. ಮರ್ಲಿನ್ ಲಿಜಾ ಜೇಮ್ಸ್, ಯುಜಿ ವಿಭಾಗದಲ್ಲಿ ಪ್ರೆಸಿಡೆನ್ಸ್ ಗೋಲ್ಡ್ ಮೆಡಲ್ ವಿಜೇತರಾದ ಡಾ. ಅತಿಲ್ ಮೊಂತೇರೊ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

-------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ
ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ಡಾ.ಸುನಿತಾ ಚವ್ಹಾಣ ನೇಮಕ