ಕನ್ನಡಪ್ರಭ ವಾರ್ತೆ, ತುಮಕೂರುಎತ್ತಿನ ಹೊಳೆ ಯೋಜನೆಯ ಸುಮಾರು 252 ಕಿ.ಮಿ. ನಾಲಾ ಕಾಮಗಾರಿಯಲ್ಲಿ 235 ಕಿಮಿ ಕಾಮಗಾರಿ ಪೂರ್ಣಗೊಂಡಿದ್ದು, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಆರು ಕಿ.ಮಿ.ಅರಣ್ಯಜಾಗದಲ್ಲಿ ನಾಲಾ ಕಾಮಗಾರಿ ಪೂರ್ಣಗೊಂಡರೆ ಮುಂದಿನ 2026 ರ ಜೂನ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯ ಮುಖ್ಯ ಎಂಜಿನಿಯರ್ ಆನಂದ ಸ್ಪಷ್ಟನೆ ನೀಡಿದ್ದಾರೆ. ನಗರದ ಅಮರ ಜೋತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿ ಎದುರು ಎತ್ತಿನಹೊಳೆ ಯೋಜನೆ ನಮ್ಮದಾಗಲಿ ಎಂಬ ಘೋಷವಾಕ್ಯದೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಎತ್ತಿನಹೊಳೆ ಅಭಿಯಾನದಲ್ಲಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವ ಮಳೆಯ ನೀರನ್ನು ಸಂಗ್ರಹಿಸಿ, ಪೂರ್ವದಲ್ಲಿರುವ ಬಯಲು ಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸುವ ಯೋಜನೆ ಇದಾಗಿದೆ ಎಂದರು. ಎತ್ತಿನಹೊಳೆಗೆ ಈ ಯೋಜನೆಯಿಂದ ಒಟ್ಟು 24.78 ಟಿ.ಎಂ.ಸಿ ನೀರು ಹಾಸನ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನಿಗದಿ ಪಡಿಸಿದಂತೆ ಹರಿಸಲು ಎಲ್ಲಾ ರೀತಿಯ ಯೋಜನೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ 6-9-2024 ರಲ್ಲಿ ಒಂದು ಹಂತದಲ್ಲಿ ನೀರನ್ನು ಲಿಫ್ಟ್ ಮಾಡಿ, ವಾಣಿವಿಲಾಸ ಡ್ಯಾಂ ತುಂಬಿಸಲಾಗಿದೆ. ಪಶ್ಚಿಮಘಟ್ಟದಿಂದ ನೀರು ತೆಗೆಯಲಾಗಿದೆ. ಕೇಂದ್ರ ಅರಣ್ಯ ಇಲಾಖೆ ಅಕ್ಷೇಪ ವ್ಯಕ್ತಪಡಿಸಿರುವ ಆರು ಕಿ.ಮಿ. ಅರಣ್ಯ ಭೂಮಿಯಲ್ಲಿ ನಾಲೆ ಮಾಡಲು ಅನುಮೋದನೆ ದೊರೆತರೆ ನಿಗದಿಯಂತ ನೀರು ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಮುಖಂಡರಾದ ಎಸ್.ಷಪಿ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಭಾರತಿ ಶ್ರೀನಿವಾಸ್, ಗಂಗಹನುಮಯ್ಯ, ಸಿದ್ದಲಿಂಗೇಗೌಡ,ಇಕ್ಬಾಲ್ ಅಹಮದ್,ಪುಟ್ಟಕಾಮಣ್ಣ , ಕಾಂತರಾಜು, ಪ್ರಕಾಶ್, ದೇವರಾಜು, ನಾಗರಾಜು, ಚಂದ್ರಶೇಖರ್, ಚಿಕ್ಕಣ್ಣ, ಗುಬ್ಬಿ ವೆಂಕಟೇಶ್, ಪ್ರಕಾಶ್, ವಿಜಯಲಕ್ಷ್ಮಿ ,ಭಾಗ್ಯ, ಸೌಭಾಗ್ಯಮ್ಮ, ಸುಜಾತ, ಪಿ.ಶಿವಾಜಿ, ಕೆಂಚಮಾರಯ್ಯ, ವಾಲೆಚಂದ್ರಯ್ಯ, ಪಿ.ಎನ್.ರಾಮಯ್ಯ, ಜೈನ್, ಷೇಕ್ ಮಹಮದ್, ವೆಂಕಟೇಶ್, ಜಯರಾಂ, ಮಹೇಶ್ ಸೇರಿದಂತೆ ನೂರಾರು ಜನರು, ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.