ಬಸವರಾಜ ಸರೂರ
ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರ ಏರುಗತಿಯಲ್ಲಿ ಸಾಗಿದೆ. ಆದರೆ ಇಳುವರಿ ಕುಸಿತವಾಗಿದ್ದರಿಂದ ಇದನ್ನು ಬೆಳೆದ ರೈತನಿಗೆ ಮಾತ್ರ ಅದರ ಲಾಭ ಇಲ್ಲವಾಗಿದೆ. ಮೆಕ್ಕೆಜೋಳ ಬೆಳೆ ಬೆಳೆಯಲು ಮಾಡಿದ ಹೂಡಿಕೆಯೂ ವಾಪಸ್ ಬಾರದ ಆತಂಕ ರೈತರನ್ನು ಕಾಡುತ್ತಿದೆ.
ತಾಲೂಕಿನಲ್ಲಿ ಮೆಕ್ಕೆಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಒಟ್ಟು ಕೃಷಿ ಭೂಮಿಯಲ್ಲಿ ಶೇ. 48.64ರಷ್ಟು ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಕೃಷಿ ಇಲಾಖೆಯ ಗುರಿಯಂತೆ ಈ ಬಾರಿ 44,143 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿತ್ತು. ಆದರೆ, 41,383 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2760 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಡಿಮೆಯಾಗಿದೆ. ಈ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯನ್ನು ಹೆಚ್ಚಾಗಿ ರೈತರು ಬೆಳೆದಿರುವುದು ಇದಕ್ಕೆ ಕಾರಣವಾಗಿದೆ. ಪ್ರತಿವರ್ಷ ಹಂತ ಹಂತವಾಗಿ ಮೆಕ್ಕೆಜೋಳ ಬೆಳೆ ಕ್ಷೇತ್ರ ಕುಂಠಿತವಾಗುತ್ತಿದೆ. ಇಡೀ ರಾಜ್ಯದಲ್ಲಿ ಶಿವಮೊಗ್ಗ, ಶಿಕಾರಿಪುರ, ಶಿರಸಿ, ಕಾರವಾರ, ಹಾವೇರಿ, ಗದಗ, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ರೈತರು ಮೆಕ್ಕೆಜೋಳವನ್ನು ಬೆಳೆದಿದ್ದಾರೆ. ಉಳಿದ ಕಡೆ ಮೆಕ್ಕೆಜೋಳ ಬೆಳೆಯುತ್ತಿಲ್ಲ, ಬೆಳೆದರೂ ಅಷ್ಟಾಗಿ ಫಸಲು ಬಂದಿಲ್ಲ.ಉತ್ತಮ ಬೆಲೆ: ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿರುವುದು ರೈತರಿಗೆ ಕೊಂಚ ಸಮಾಧಾನ ತಂದಿದೆ. ಕಳೆದ ತಿಂಗಳಿನಿಂದ ಬೆಲೆ ಏರಿಕೆಯಾಗಿದ್ದು, ಪ್ರಸ್ತುತ ಕ್ವಿಂಟಲ್‌ಗೆ ₹3400ರ ವರೆಗೆ ದರ ದೊರೆಯುತ್ತಿದೆ. ಆದರೆ ಇಳುವರಿ ಕಡಿಮೆಯಾಗಿರುವುದರಿಂದ ಉತ್ತಮ ಬೆಲೆಯ ಲಾಭ ರೈತರಿಗೆ ಪೂರ್ಣವಾಗಿ ದೊರೆಯುತ್ತಿಲ್ಲ. ಈ ಬಾರಿ ಮೆಕ್ಕೆಜೋಳ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ.
ಪರಿಹಾರದ ನಿರೀಕ್ಷೆ: ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಹಾಗೂ ಕೃಷಿ ಚಟುವಟಿಕೆಗಾಗಿ ರೈತರು ಸಾವಿರಾರು ರು. ವೆಚ್ಚ ಮಾಡಿದ್ದಾರೆ. ಹಲವರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕಡಿಮೆ ಇಳುವರಿಯಿಂದ ನಿರೀಕ್ಷಿತ ಆದಾಯ ದೊರೆಯುತ್ತಿಲ್ಲ. ಒಂದೆಡೆ ಹವಾಮಾನ ವೈಪರೀತ್ಯ, ಮತ್ತೊಂದೆಡೆ ಕೀಟಬಾಧೆ ಹಾಗೂ ಇಳುವರಿ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಹಾಗೂ ಕೃಷಿ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಬೆಳೆ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ ಸೌಲಭ್ಯ ಕಲ್ಪಿಸಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ.
ತಾಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಕ್ಷೇತ್ರ ಕಡಿಮೆಯಾಗಿರುವ ಜತೆಗೆ ಮಳೆ ಕೊರತೆಯಿಂದ ಮೆಕ್ಕೆಜೋಳ ಇಳುವರಿ ಕಡಿಮೆಯಾಗಿದೆ. ಕಂದಾಯ ಇಲಾಖೆ ಜಂಟಿ ಸಮೀಕ್ಷೆಯಲ್ಲಿ ಸರ್ವೆ ಮಾಡಿ ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಾಂತಮಣಿ ಜಿ. ಹೇಳಿದರು.