ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ಜಿಲ್ಲಾಸ್ಪತ್ರೆಗೆ ಅವಶ್ಯಕತೆ ಇರುವ ತಜ್ಞ ವೈದ್ಯರು, ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಣಕಾಸು ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಶೀಘ್ರದಲ್ಲೇ ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು ತಿಳಿಸಿದರು.ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಯಿಮ್ಸ್) ಡೀನ್ ಅವರ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ತಜ್ಞರ ಕೊರತೆ ಇದೆ. ಚುನಾವಣೆ, ಕೋವಿಡ್ ಪರಿಸ್ಥಿತಿಗಳ ಹಿನ್ನೆಲೆ ನೇಮಕಾತಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದ ಕಾರಣ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದೊಂದಿಗೆ ರಾಜ್ಯ ಹಣಕಾಸು ಇಲಾಖೆ ಮೂಲಕ ಚರ್ಚಿಸಿ ಅನುಮತಿ ಪಡೆದು ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಬಡ ಜನರಿಗೆ ಅವಶ್ಯಕ ವೈದ್ಯಕೀಯ ಸೇವಾ ಸೌಲಭ್ಯ ದೊರಕಬೇಕು ಎಂಬ ಉದ್ದೇಶದೊಂದಿಗೆ ವೈದ್ಯಕೀಯ ಕಾಲೇಜು ಆರಂಭಿಸಿದ್ದು, ಇದು ಜಿಲ್ಲಾ ಆಸ್ಪತ್ರೆ ಪ್ರಗತಿ ಮತ್ತು ಸುಧಾರಣೆಗೂ ಅನುಕೂಲವಾಗಲೆಂಬ ಉದ್ದೇಶದಿಂದ ಆರಂಭಿಸಲಾಗಿದೆ ಎಂದರು.
ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ಇಲ್ಲಿ ದೊರೆಯುವಂತಾಗಬೇಕು. ಬಡವರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯಬೇಕು. ಜಿಲ್ಲಾಸ್ಪತ್ರೆ ಈ ಭಾಗದ ಬಡಜನರಿಗೆ ಸಹಕಾರಿಯಾಗಿದ್ದು, ಬಡ ಮಕ್ಕಳಿಗೆ ಉನ್ನತ ಶಿಕ್ಷಣದ ಸವಲತ್ತು ದೊರಕಿಸಲು ವೈದ್ಯಕೀಯ ಕಾಲೇಜು ಹೆಚ್ಚಿನ ನೆರವಾಗಿದೆ. ಸದ್ಯ ಸಭೆಯಲ್ಲಿ ತಜ್ಞ ವೈದ್ಯರು, ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿದ್ದು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಮನ್ವಯತೆಯಿಂದ ವೈದ್ಯರ ಸೇವೆ ಪಡೆಯಲಾಗುತ್ತಿದೆ ಎಂದು ಹೇಳಿದರು.ವೈದ್ಯಕೀಯ ಕಾಲೇಜ್ ನೇಮಕಾತಿಗೆ ಸಂಬಂಧಪಟ್ಟಂತೆ ಎನ್.ಎಂ.ಸಿ ಮಾನದಂಡಗಳ ಅನ್ವಯ ಪ್ರತಿ ವರ್ಷ ನೇಮಕಾತಿಗಳು ನಡೆಯುತ್ತಿವೆ. ಅರ್ಥೋಪೆಡಿಸಿಯನ್ ಇದ್ದು, ಮುಂದಿನ ದಿನಗಳಲ್ಲಿ ಗುಲಬರ್ಗಾ ಟ್ರಾಮಾ ಸೆಂಟರದಲ್ಲಿ ನೇಮಕಾತಿಗೆ ಬರುವವವರನ್ನು ಯಾದಗಿರಿಗೆ ಕಳುಹಿಸಲು ಪ್ರಯತ್ನಿಸಲಾಗುವುದೆಂದು ಹೇಳಿದರು.
ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೇವಾ ತತ್ಪರತೆ ಹೆಚ್ಚಿಸಲು ಅನುಕೂಲವಾಗುವಂತೆ ಮಧ್ಯಾಹ್ನದ ಸಮಯದಲ್ಲಿ ಯಾರೂ ಪ್ರಾಕ್ಟೀಸ್ ಮಾಡುವಂತಿಲ್ಲ ಎಂಬ ಸುತ್ತೋಲೆ ಒಂದನ್ನು ಹೊರಡಿಸುವಂತೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕರಿಗೆ ತಿಳಿಸಿದ ಅವರು ಕಡ್ಡಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.ಜಿಲ್ಲಾಸ್ಪತ್ರೆಯಲ್ಲಿಯೂ ಕೂಡ ಬಡ ರೋಗಿಗಳಿಗೆ ಸಕಾಲಕ್ಕೆ ಸ್ಪಂದಿಸಲು ಅನುಕೂಲವಾಗುವಂತೆ ಎಲ್ಲ ಸಿಬ್ಬಂದಿ ಸೇವೆ ಅತ್ಯುತ್ತಮವಾಗಿರಬೇಕು. ಕಡ್ಡಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಕ್ರಿಟಿಕಲ್ ಕೇರ್ ಸೆಂಟರ್‌ಗೆ ಅವಶ್ಯಕತೆ ಇರುವ ಎಂ.ಆರ್.ಐ ಕೊರತೆ ನೀಗಿಸಲು ಸಹ ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಯಾದಗಿರಿಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ ವ್ಯಾಪ್ತಿಯಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಜಿಲ್ಲಾ ಆಸ್ಪತ್ರೆ ಕೆಲವು ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕ್ರಿಟಿಕಲ್ ಕೇರ್ ಸೆಂಟರ್ ಶೇ.70ರಷ್ಟು ಪೂರ್ಣಗೊಳಿಸಲಾಗಿದೆ. ಅದರಂತೆ, ವೈದ್ಯಕೀಯ ಕಾಲೇಜಿಗೆ ಸಂಬಂಧಪಟ್ಟಂತೆ ಕೆಲವು ಕಾಮಗಾರಿಗಳನ್ನು ಮುಂಬರುವ ಮೂರು ತಿಂಗಳಗಳಲ್ಲಿ ಪೂರ್ಣಗೊಳಿಸಲು ತಿಳಿಸಿದರು.ರಾಜ್ಯದಲ್ಲಿ ಡೆಂಘೀ ಜ್ವರ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿನಿತ್ಯ ಜ್ವರ ಪ್ರಕರಣಗಳ ನಿರ್ವಹಣೆ ಮಾಡುವಂತೆಯೂ ಮತ್ತು ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಲಾಗಿದ್ದು ಸ್ವಚ್ಛತೆ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.- ಜಿಲ್ಲಾಸ್ಪತ್ರೆಗೆ ಭೇಟಿ ಪರಿಶೀಲನೆ:
ಇದೇ ಸಂದರ್ಭದಲ್ಲಿ ಸಚಿವರು ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೇಂದ್ರ ಪ್ರಯೋಗಾಲಯ ಉದ್ಘಾಟಿಸಿದ ಅವರು ಲ್ಯಾಬ್ ಪರಿಶೀಲನೆ, ರಕ್ತ ಶೇಖರಣೆ ಕೊಠಡಿ, ಸಾಮಾನ್ಯ ವೈದ್ಯಕೀಯ ವಿಭಾಗ, ಸಿಟಿ ಸ್ಕ್ಯಾನ್ ವಿಭಾಗ, ತುರ್ತು ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ, ಕರ್ತವ್ಯದಲ್ಲಿರುವ ವೈದ್ಯರ ಬಗ್ಗೆ ಹಾಗೂ ರೋಗಿಗಳ ಆರೋಗ್ಯ ವಿಚಾರಿಸಿದರು.ಇದೇ ವೇಳೆ ಐಟಿಐ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪೂರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಜಿಲ್ಲಾಧಿಕಾರಿ ಡಾ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡಿ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಸುಜಾತಾ ರಾಠೋಡ್, ಜಿಲ್ಲಾ ಶಸ್ತ್ರಚಿಕಿತ್ಸಕಿ ರಿಜ್ವಾನ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹನುಮಂತ ಪ್ರಸಾದ್ ಸೇರಿದಂತೆ ಇತರರಿದ್ದರು.