ಶಿವಮೊಗ್ಗ: ಸಾವಿರಾರು ವರ್ಷಗಳ ಕಾಲ ಇತಿಹಾಸವಿರುವ ಯೋಗ ಪ್ರಾಣಾಯಾಮ ಧ್ಯಾನ ಇಂದು ಹೆಚ್ಚು ಪ್ರಚಲಿತವಾಗಿದೆ ಎಂದು ಜಡೆಯ ವಿರಕ್ತ ಮಠದ ಮಹಾಂತ ಸ್ವಾಮೀಜಿ ಹೇಳಿದರು.
ಯೋಗದಿಂದ ದೀರ್ಘಾಯುಷ್ಯ, ಸಕಾರಾತ್ಮಕ ಭಾವನೆಗಳ ಜೊತೆಗೆ ದೇಹ ಮನಸ್ಸು ಸದೃಢವಾಗಿರುತ್ತದೆ. ಯೋಗ ಹಾಗೂ ಸಂಗೀತ ಒಂದು ನಾಣ್ಯದ ಎರಡು ಮುಖಗಳು. ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನಮ್ಮ ಮನಸ್ಸು ಸದಾ ಸದ್ಭಾವನೆ ಇಂದ ಕೂಡಿರಲು ಯೋಗ ಸಂಗೀತ ಬಹಳ ಅವಶ್ಯಕವಾಗಿದೆ. ಅದರಲ್ಲೂ ಇಂದಿನ ಒತ್ತಡ ಪ್ರಪಂಚದಲ್ಲಿ ಎಲ್ಲಾ ಔಷಧಿ ಮಾತ್ರೆಗಳಿಗಿಂತ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಸಂಗೀತ ಬಹಳ ಸಹಕಾರಿಯಾಗಿದೆ ಎಂದು ತಿಳಿಸಿದರು.
ಶಿವಗಂಗಾ ಯೋಗ ಕೇಂದ್ರದ ಗುರು, ಯೋಗಚಾರ್ಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಸಿವಿ ರುದ್ರಾರಾಧ್ಯ ಮಾತನಾಡಿ, ಶಿವಮೊಗ್ಗವನ್ನು ಒಂದು ಯೋಗ ನಗರವನ್ನು ಆಗಿಸುವ ಗುರಿ ಹೊಂದಿ ಇವತ್ತು 37ನೇ ಶಾಖೆಗೆ ನಾವು ಚಾಲನೆಯನ್ನು ಕೊಡುತ್ತಿದ್ದೇವೆ. ಮನೆ, ಮನೆಗಳಿಗೆ ಯೋಗವನ್ನು ತಲುಪಿಸುವುದರ ಮುಖಾಂತರ ಎಲ್ಲಾ ಬಡಾವಣೆಗಳಲ್ಲೂ ಯೋಗ ಶಿಕ್ಷಣವನ್ನು ನೀಡುತ್ತಿದ್ದೇವೆ. ಯೋಗ ಕೇಂದ್ರದ ಅಧ್ಯಕ್ಷ ರುದ್ರೇಗೌಡರು ಇದಕ್ಕೆಲ್ಲಾ ಪ್ರೇರಣೆ ಎಂದ ಅವರು, ಜೊತೆಗೆ 37 ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ನಮ್ಮ ಯೋಗ ಶಿಕ್ಷಕರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದರು.ಹಿಂದುಸ್ತಾನಿ ಸಂಗೀತ ಗಾಯಕ ಹುಮಾಯನ್ ಹರ್ಲಾಪುರ್ ಮಾತನಾಡಿ, ಸಂಗೀತ ಮಾನಸಿಕ ಖಿನ್ನತೆಯನ್ನು ದೂರವಾಗಿಸುವುದರ ಜೊತೆಗೆ ಆ ಮನೆಯ ವಾತಾವರಣವನ್ನು ತುಂಬಾ ಉತ್ತಮವಾಗಿ ಇಡುತ್ತದೆ. ಪ್ರಸ್ತುತ ಮೊಬೈಲ್ ಹಾವಳಿಯಿಂದ ಯುವ ಪೀಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಅಭ್ಯಾಸದಿಂದ ಮನೋವಿಕಾಸ ಸಾಧ್ಯವಿದೆ ಎಂದರು.
ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ಶಿವಗಂಗಾ ಯೋಗ ಕೇಂದ್ರ ಪ್ರಧಾನ ಕಚೇರಿಯಲ್ಲಿ ಬರುವ ದಿನಗಳಲ್ಲಿ ನ್ಯಾಚುರೋಪತಿ ಆಯಿಲ್ ಬಾತ್ ಮಡ್ಬಾತ್ ಹಾಗೂ ಹಲವಾರು ಆರೋಗ್ಯ ಥೆರಪಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಿವಗಂಗಾ ಯೋಗಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ್, ನೀಲಕಂಠ, ಕಾಟನ್ ಜಗದೀಶ್, ಮೋಹನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ವಾಗ್ದೇವಿ ಬಸವರಾಜ್, ವೀರಶೈವ ಮಹಾಸಭಾ ಜಿಲ್ಲಾ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಆರ್.ಸೋಮನಾಥ್, ಪಾಲಿಕೆ ಘಟಕದ ಅಧ್ಯಕ್ಷ ರಾಜಶೇಖರ್, ಲವಕುಮಾರ್, ಮೋಹನ್ ಬಾಳೆಕಾಯಿ ಮತ್ತಿತರರಿದ್ದರು.