ಕನ್ನಡಪ್ರಭ ವಾರ್ತೆ ಪುತ್ತೂರುವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ವಿವೇಕಾನಂದ ವಸತಿ ನಿಲಯಗಳ ಜಂಟಿ ಆಶ್ರಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ನಡೆದ ೨೧ ದಿನಗಳ ಯೋಗ ಶಿಬಿರದ ಪ್ರಯುಕ್ತ ಭಾರತ್ ಮಾತಾ ಪೂಜನಾ ಕಾರ್ಯಕ್ರಮವು ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಸಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಘಟನಾ ಪ್ರಮುಖರಾದ ಹರಿಪ್ರಸಾದ್ ಮಾತನಾಡಿ, ಯೋಗ ನಮ್ಮೆಲ್ಲರ ಜೀವನದ ಬಹು ಪ್ರಮುಖವಾದ ಅಂಶವಾಗಿದೆ. ಯೋಗದಿಂದ ಉತ್ತಮ ಜೀವನ ರೂಪಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಾಗಲೀ ಅಥವಾ ವೃತ್ತಿ ಜೀವನದಲ್ಲಾಗಲೀ ಓದು, ಸಂಪಾದನೆ, ದೈನಂದಿನ ಚಟುವಟಿಕೆಗಳೊಂದಿಗೆ ಯೋಗವನ್ನು ಅಳವಡಿಸಿಕೊಳ್ಳಬೇಕು. ಗಾಳಿ, ನೀರು, ಬೆಳಕು ಹೇಗೆ ಅವಶ್ಯಕವೋ, ಯೋಗವು ಶಾರೀರಿಕ ಸುವ್ಯವಸ್ಥೆಗೆ ಪೂರಕವಾದ ಅವಶ್ಯಕತೆಯಾಗಿದೆ ಎಂದು ಹೇಳಿದರು.ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ, ಯೋಗವು ಭಾರತ ಜಗತ್ತಿಗೆ ನೀಡಿದ ಒಂದು ವಿಜ್ಞಾನ ಎಂಬುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಭಾರತ ಇಂತಹ ಹಲವಾರು ವಿದ್ಯೆಗಳ ತವರು ನೆಲೆಯಾಗಿದೆ. ಯೋಗವಿದ್ಯೆಯು ಜಗತ್ತಿಗೆ ಸಂಪೂರ್ಣ ಬೆಳಕು ನೀಡುತ್ತದೆ. ಯೋಗವು ನಮ್ಮ ಶರೀರದ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ ಜೊತೆಗೆ ಮಾನಸಿಕ ಸದೃಢತೆಯನ್ನು ಬಲಗೊಳಿಸುವಲ್ಲಿ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದರು.ವಿವೇಕಾನಂದ ವಸತಿ ನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ. ಉಪಸ್ಥಿತರಿದ್ದರು. ಸುಮಾರು ೨೧ ದಿನಗಳ ಕಾಲ ಸತತವಾಗಿ ನಡೆದ ಯೋಗ ಶಿಬಿರದಲ್ಲಿ ವಿವೇಕಾನಂದ ವಸತಿ ನಿಲಯಗಳಾದ ತಕ್ಷಶಿಲಾ, ಶಾರದಾ ಹಾಗೂ ನಿವೇದಿತಾ ವಸತಿ ನಿಲಯಗಳ ಸುಮಾರು ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.