ಯೋಗದ ಮಹತ್ವ ಜನರಿಗೆ ತಲುಪಿಸುವುದರೊಂದಿಗೆ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಪ್ರೇರಣೆ
ಕೊಪ್ಪಳ: ಯೋಗದಿಂದ ದೇಹ ಹಾಗೂ ಮನಸ್ಸಿನ ನಡುವೆ ಸಮತೋಲನ ಸಾಧ್ಯ ಎಂದು ಫಾನಘಂಟಿ ಫೌಂಡೇಶನ್ ಮುಖ್ಯಸ್ಥೆ ಶಾರದಾ ಫಾನಘಂಟಿ ಅಭಿಮತ ವ್ಯಕ್ತಪಡಿಸಿದರು.
ಸಮೀಪದ ಭಾಗ್ಯನಗರದ ಅಡವಿ ಆಂಜನೇಯ ದೇವಸ್ಥಾನದ ಹತ್ತಿರ ಫಾನಘಂಟಿ ಫೌಂಡೇಶನ್ ಮತ್ತು ಮಹಿಳಾ ಧ್ವನಿ ಸಂಸ್ಥೆಯಿಂದ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಯೋಗ ಕಾರ್ಯಕ್ರಮಗಳು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಯೋಗದ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮನಸ್ಸಿನ ಏಕಾಗ್ರತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಬಹುದು. ಇಂತಹ ಕಾರ್ಯಕ್ರಮ ಯುವಜನರಲ್ಲಿ ಶಿಸ್ತು, ಸಹನೆ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸುತ್ತವೆ. ಯೋಗದ ಮಹತ್ವ ಜನರಿಗೆ ತಲುಪಿಸುವುದರೊಂದಿಗೆ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಪ್ರೇರಣೆ ನೀಡುವುದು ಈ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದರು.
ಯೋಗಗುರು ಡಾ. ಶಂಕ್ರಯ್ಯ ಜುಕ್ತಿಹಿರೇಮಠ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ವೃದ್ಧಿಸುವ ಸಾಧನವಾಗಿದೆ. ಯೋಗ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತದೆ. ನಿಯಮಿತ ಯೋಗಾಭ್ಯಾಸದಿಂದ ದೇಹವು ಸದೃಢವಾಗುವುದರ ಜತೆಗೆ ಮನಸ್ಸು ಶಾಂತವಾಗಿರುತ್ತದೆ. ಒತ್ತಡ, ಆತಂಕ ಮತ್ತು ಅನೇಕ ಆರೋಗ್ಯ ಸಮಸ್ಯೆ ಕಡಿಮೆ ಮಾಡಲು ಯೋಗ ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮ ಆರೋಗ್ಯಕರ ಜೀವನಶೈಲಿ ಬೆಳೆಸಲು ಪ್ರೇರಣೆ ನೀಡುವುದರೊಂದಿಗೆ ಸಮಾಜದಲ್ಲಿ ಆರೋಗ್ಯ ಮತ್ತು ಸೌಹಾರ್ದತೆ ಉತ್ತೇಜಿಸುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಮುಂಡರಗಿಮಠ, ನಾಗರತ್ನ, ಬಿ.ಎನ್. ಹೊರಪೇಟಿ, ಬಸವರಾಜ್ ಬೆಲ್ಲದ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.