ಯೋಗದಿಂದ ಉತ್ತಮ ಬದುಕು ಕಟ್ಟಲು ಸಾಧ್ಯ: ಶಾಸಕ ಎಚ್.ಡಿ.ತಮ್ಮಯ್ಯ

KannadaprabhaNewsNetwork |  
Published : Jun 22, 2025, 01:19 AM IST
ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ಸಿ.ಟಿ.ರವಿ, ದಿನೇಶ್ ದೇವವೃಂದ, ನಾರಾಯಣರಡ್ಡಿ ಕನಕರಡ್ಡಿ, ಮಲ್ಲೇಶ್ ಇದ್ದರು. | Kannada Prabha

ಸಾರಾಂಶ

ಶಿಕ್ಷಣ, ಆರೋಗ್ಯ, ಬದುಕು ನಮ್ಮ ಅವಿಭಾಜ್ಯ ಅಂಗ. ಶಿಕ್ಷಣ ಕಲಿಯದಿದ್ದರೆ, ಆರೋಗ್ಯ ಕಾಪಾಡಿಕೊಳ್ಳದಿದ್ದರೆ, ಒಳ್ಳೆಯ ಬದುಕು ಕಟ್ಟಿಕೊಳ್ಳದಿದ್ದರೆ ನಮ್ಮ ಜೀವನ ಅಪೂರ್ಣವಾಗುತ್ತದೆ. ಯೋಗದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಯೋಗ ದಿನ । ಸಾಮೂಹಿಕ ಯೋಗ ಪ್ರದರ್ಶನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿಕ್ಷಣ, ಆರೋಗ್ಯ, ಬದುಕು ನಮ್ಮ ಅವಿಭಾಜ್ಯ ಅಂಗ. ಶಿಕ್ಷಣ ಕಲಿಯದಿದ್ದರೆ, ಆರೋಗ್ಯ ಕಾಪಾಡಿಕೊಳ್ಳದಿದ್ದರೆ, ಒಳ್ಳೆಯ ಬದುಕು ಕಟ್ಟಿಕೊಳ್ಳದಿದ್ದರೆ ನಮ್ಮ ಜೀವನ ಅಪೂರ್ಣವಾಗುತ್ತದೆ. ಯೋಗದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕಾರ ಎಂದರೆ ಭಾರತ ದೇಶ. ಪ್ರಪಂಚದ ಯಾವುದೇ ದೇಶಗಳು ಪ್ರವಾಸಕ್ಕೆ ಮಾತ್ರ ಯೋಗ್ಯ. ವಾಸಕ್ಕೆ ಯೋಗ್ಯವಾಗಿರುವುದು ಸಂಸ್ಕಾರವಂತ ಭಾರತ ಎಂದು ಪ್ರತಿಪಾದಿಸಿದರು.

ಇಡೀ ವಿಶ್ವ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಸಾವಿರಾರು ವರ್ಷಗಳಿಂದ ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದಿರುವ ಯೋಗ ಇಂದು ವಿಶ್ವದ 195 ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಯೋಗ ಬದುಕಿನ ಭಾಗವಾದಾಗ ನಾವು ನಿರೋಗಿಗಳಾಗಿ ನಮ್ಮ ಆಯಸ್ಸನ್ನು ಪೂರ್ಣಗೊಳಿಸಬಹುದು. ಆದರೆ ನಮ್ಮ ಪರಿಸ್ಥಿತಿ ಕಸ್ತೂರಿ ಮೃಗದಂತಾಗಿದೆ. ಕಸ್ತೂರಿ ಮೃಗ ಸುವಾಸನೆ ತನ್ನೊಳಗೇ ಇದ್ದರೂ ಅದು ಸುವಾಸನೆ ಹುಡುಕಿಕೊಂಡು ಅಲೆಯುತ್ತದೆ. ಅದೇ ರೀತಿ ನಾವು ಯೋಗದಿಂದ ಆರೋಗ್ಯ ವೃದ್ಧಿಸುತ್ತದೆ ಎಂಬುದು ತಿಳಿದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಬೇರೆ ದಾರಿ ಹುಡುಕುತ್ತಿದ್ದೇವೆ ಎಂದು ಹೇಳಿದರು.

ನಮ್ಮ ಋಷಿ ಮುನಿಗಳು ಯೋಗದ ಮಹತ್ವವನ್ನು ಕಂಡುಕೊಂಡಿದ್ದರು. ಬಳಿಕ ಪತಂಜಲಿ ಮಹರ್ಷಿಗಳು ಯೋಗವನ್ನು ಕ್ರೋಢೀಕರಿಸಿದರು. ಯೋಗ ಸೂತ್ರದಿಂದ ಜಗತ್ತಿನ ಎಲ್ಲ ಮಾನವರೂ ನಿರೋಗಿಗಳಾಗಬೇಕು ಎಂಬ ಹಿನ್ನೆಲೆಯಲ್ಲಿ ನಮಗೆ ಋಷಿ ಮುನಿಗಳು ಯೋಗ ಕೊಟ್ಟಿದ್ದಾರೆ. ಆದರೆ ನಾವು ಯೋಗವನ್ನು ಮರೆತು ಆರೋಗ್ಯಕ್ಕಾಗಿ ಇನ್ನೆಲ್ಲೋ ಹುಡುಕಾಟ ನಡೆಸುತ್ತಿರುವುದು ದುರ್ದೈವ ಎಂದರು.

ಹಿಂದೆ ಭಾರತವನ್ನು ಬುಡಬುಡಕೆ, ಹಾವಾಡಿಗರ ದೇಶ ಎನ್ನುವಂತಾಗಿತ್ತು. ಆದರೆ ಇಡೀ ವಿಶ್ವಕ್ಕೆ ಗಣಿತ ಶಾಸ್ತ್ರವನ್ನು ನೀಡಿದ ದೇಶ, ಆರ್ಯಭಟನಂಥ ಗಣಿತಜ್ಞನನ್ನು ನೀಡಿದ ದೇಶ ಭಾರತ. ಚರಕ, ಶುಶ್ರೂಷಕರಂತ ವೈದ್ಯಕೀಯ ಪಂಡಿತರನ್ನು ಜಗತ್ತು ಕತ್ತಲಲ್ಲಿ ಇದ್ದಾಗ ನೀಡಿದ ದೇಶವೂ ಭಾರತ ಎಂದು ಸಂತಸ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಮಲ್ಲೇಶ್, ಡಿಎಚ್‌ಒ ಡಾ.ಅಶ್ವಥ್ ಬಾಬು, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ಡಾ.ಮಂಜುಳಾ ಹುಲ್ಲಹಳ್ಳಿ ಇತರರು ಹಾಜರಿದ್ದರು.

ನೂರಾರು ಜನರಿಂದ ಯೋಗಾಭ್ಯಾಸ

ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಯೋಗ ದಿನಾಚರಣೆಯಲ್ಲಿ ನೂರಾರು ಮಂದಿ ಸಾರ್ವಜನಿಕರು ಪಾಲ್ಗೊಂಡು ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಿದರು.

ನಗರದ ವಿವಿಧ ಯೋಗ ತಂಡಗಳ ಸದಸ್ಯರು ಹಾಗೂ ಸಾರ್ವಜನಿಕರು ಯೋಗದ ವಿವಿಧ ಆಸನಗಳನ್ನು ಪ್ರದರ್ಶನ ಮಾಡುವ ಮೂಲಕ ಯೋಗ ದಿನಕ್ಕೆ ಕಳೆತಂದರು.

PREV

Recommended Stories

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 23ನೇ ಬಾರಿ ಪ್ರಶಸ್ತಿ
ಆಗಸ್ಟ್‌ 12ರಿಂದ ಗೋಣಿಬಸವೇಶ್ವರ ಜಾತ್ರಾ ಮಹೋತ್ಸವ: ಪುರದ