ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಘ-ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ರಾಜಕೀಯ ಪಕ್ಷಗಳು ಸೇರಿದಂತೆ ನಗರದ ಹಲವೆಡೆ ಲಕ್ಷಾಂತರ ಜನರು ಶುಕ್ರವಾರ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.ವಿಧಾನ ಸೌಧದ ಮುಂಭಾಗ ಆಯುಷ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಯೋಗ ದಿನದಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡು ಯೋಗ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನಟಿ ಅನುಪ್ರಭಾಕರ್, ನಟ ಶರಣ್ ಸಹ ಭಾಗವಹಿಸಿದ್ದು ತಾರಾಮೆರಗು ನೀಡಿತ್ತು.
ಬಿಜೆಪಿ ಕಚೇರಿ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಲಹಂಕದ ಸಿಆರ್‌ಪಿಎಫ್ ಗ್ರೂಪ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಮಾಂಡೆಂಟ್ ವಿಶ್ವನಾಥ್ ಅವರು ಯೋಧರೊಂದಿಗೆ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.ನೂರಾರು ವಿದ್ಯಾರ್ಥಿಗಳು ಭಾಗಿ:
ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ವಿವೇಕಾನಮದ ಆಟದ ಮೈದಾನದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಶಾಸಕ ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇದ್ರ ಬಾಬು ಮತ್ತಿತರರು ಪಾಲ್ಗೊಂಡಿದ್ದರು. ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ಸುಂಕದಕಟ್ಟೆಯಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ನೂರಾರು ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿ ಗಮನ ಸೆಳೆದರು.ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯದ್ ಸಿರಾಜುದ್ದೀನ್ ಮದನಿ, ಯೋಗಪಟು ಡಾ.ಲೋಕೇಶ್ ಹೆಗಡೆ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿನ ಸಿಬ್ಬಂದಿ ಸಹ ಯೋಗ ದಿನ ಆಚರಿಸಿದರು.
ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಟ ಅರ್ಧ ಅಥವಾ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಂಡುಕೊಳ್ಳಬಹುದುಶರಣ್, ಚಿತ್ರನಟ
ನಾನು 25 ವರ್ಷದಿಮದ ಯೋಗಾಭ್ಯಾಸ ಮಾಡುತ್ತಿದ್ದು ಯೋಗಾಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಯೋಗಾಭ್ಯಾಸದಿಂದ ದೇಹ ಸದೃಢವಾಗಲಿದ್ದು ಮನಸ್ಸು ಸಕಾರಾತ್ಮಕವಾಗಿರುತ್ತದೆ-ಅನು ಪ್ರಭಾಕರ್, ಚಿತ್ರನಟಿ