ಬೆಂಗಳೂರು: 35 ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ

KannadaprabhaNewsNetwork | Updated : Jun 22 2024, 05:11 AM IST

ಸಾರಾಂಶ

ಪರಿಕಲ್ಪನೆಯಡಿಯಲ್ಲಿ ಗಾಂಧಿನಗರದ ಕಾಳಿದಾಸ ರಸ್ತೆಯ ಫ್ರೀಡಂ ಪಾರ್ಕ್ ಮೈದಾನದಲ್ಲಿ ಬಿಬಿಎಂಪಿಯ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದರು.

 ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಫ್ರೀಡಂ ಪಾರ್ಕ್‌ ಸೇರಿದಂತೆ ಗಾಂಧಿನಗರದ 35 ರಸ್ತೆಗಳ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಸುಗಮ ಸಂಚಾರ ಹಾಗೂ ಸಂಚಾರಿ ದಟ್ಟಣೆ ನಿಯಂತ್ರಣಕ್ಕೆ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಗಾಂಧಿನಗರದ ಕಾಳಿದಾಸ ರಸ್ತೆಯ ಫ್ರೀಡಂ ಪಾರ್ಕ್ ಮೈದಾನದಲ್ಲಿ ಬಿಬಿಎಂಪಿಯ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಗಾಂಧಿನಗರದ 35 ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ ಮಾಡಿದ್ದಾರೆ. ಇಲ್ಲಿನ ರಸ್ತೆ ವಿಶಾಲವಾಗಿರಬೇಕು. ಎಲ್ಲಾ ವ್ಯಾಪಾರಿಗಳಿಗೆ ಲಾಭವಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಚಾಲನೆ ಮೂಲಕ ಬೆಂಗಳೂರು ನಗರ ಹೊಸ ಇತಿಹಾಸ ನಿರ್ಮಿಸಲಾಗಿದೆ. ಪ್ರತಿ ಗಂಟೆಗೆ ವಾಹನ ನಿಲುಗಡೆಗೆ 20-30 ರು. ನಿಗದಿ ಮಾಡಿದ್ದು, ಎರಡು- ಮೂರು ಕಾರು ಹೊಂದಿರುವವರು ಕೂಡ ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಇತರೆ ಭಾಗದಲ್ಲಿ ಪಾರ್ಕಿಂಗ್‌ ಕಟ್ಟಡ:

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಮತ್ತು ವಾಹನ ನಿಲುಗಡೆ ಸಮಸ್ಯೆ ಇರುವ ಪ್ರದೇಶದಲ್ಲಿ ಸ್ಥಳಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲಿಯೂ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಯೋಜನೆ ರೂಪಿಸುವುದಕ್ಕೆ ಸೂಚಿಸಲಾಗಿದೆ ಎಂದರು.

ಈ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಪಶ್ಚಿಮ ವಲಯ ಆಯುಕ್ತ ಡಾ. ಆರ್.ಎಲ್ ದೀಪಕ್, ಪ್ರಧಾನ ಅಭಿಯಂತರ ಡಾ. ಬಿ.ಎಸ್ ಪ್ರಹ್ಲಾದ್ ಮೊದಲಾದವರಿದ್ದರು.

ಇದೊಂದು ಐತಿಹಾಸಿಕ ಮೈಲಿಗಲ್ಲು

ಆರೋಗ್ಯ ಸಚಿವ ಹಾಗೂ ಗಾಂಧಿನಗರದ ಶಾಸಕ ದಿನೇಶ್‌ ಗುಂಡೂರಾವ್‌ ಮಾತನಾಡಿ, 7 ಬಾರಿ ಟೆಂಡರ್‌ ನಡೆಸಿದರೂ ಯಾವುದೇ ಗುತ್ತಿಗೆದಾರರು ಪಾರ್ಕಿಂಗ್‌ ಕಟ್ಟಡ ನಿರ್ವಹಣೆ ಗುತ್ತಿಗೆ ಪಡೆಯುವುದಕ್ಕೆ ಮುಂದೆ ಬಂದಿರಲಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರಿಶ್ರಮದಿಂದ ಯಶಸ್ವಿಯಾಗಿ ಬಹುಮಹಡಿ ಪಾರ್ಕಿಂಗ್‌ ಕಟ್ಟಡ ಕಾರ್ಯಚರಣೆ ಆರಂಭಿಸಿದೆ. ಬೆಂಗಳೂರಿನ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಉಚಿತ ಸಂಚಾರಿ ವ್ಯವಸ್ಥೆ ರಾಜ್ಯ ಹಾಗೂ ನಗರದ ಯಾವುದೇ ಭಾಗದಿಂದ ಜನ ತಮ್ಮ ವಾಹನದಲ್ಲಿ ಬಂದರೂ ಇಲ್ಲಿ ಅವರು ವಾಹನ ನಿಲುಗಡೆ ಮಾಡಿ, ವಿಧಾನಸೌಧ, ಹೈಕೋರ್ಟ್, ರೈಲ್ವೇ ನಿಲ್ದಾಣ ಸೇರಿದಂತೆ ಗಾಂಧಿ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಲು ಗುತ್ತಿಗೆದಾರರು ಉಚಿತ ಸಂಚಾರಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Share this article