ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂ.22 ರಂದು ಡಿಪ್ಲೋಮಾ ಅಭ್ಯರ್ಥಿಗಳಿಗೆ ಡಿಸಿಇಟಿ-2024ರ ಪ್ರವೇಶ ಪರೀಕ್ಷೆಗಳು ಜರುಗಲಿದ್ದು, ಎಲ್ಲ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಡಿಸಿಇಟಿ-2024ರ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ತಲುಪಿಸಲು ತಹಸೀಲ್ದಾರ್, ಪ್ರಿನ್ಸಿಪಾಲ್ ಹಾಗೂ ಬಿಇಒ ಅವರ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರು ಕಡ್ಡಾಯವಾಗಿ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ಪಡೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ತಲುಪಿಸಬೇಕು. ಪರೀಕ್ಷೆ ಮುಗಿದ ನಂತರ ರಹಸ್ಯ ಬಂಡಲ್‌ಗಳನ್ನು ಸ್ವೀಕರಿಸಿ ನೇರವಾಗಿ ಅಂಚೆ ಕಚೇರಿಯ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ಇವರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ನಿಯೋಜಿಸಿದ ಅಧಿಕಾರಿಗಳು ಹೊರತುಪಡಿಸಿ ಬದಲಿ ಅಧಿಕಾರಿಗಳನ್ನು ನಿಯೋಜಿಸಲು ಅವಕಾಶವಿರುವುದಿಲ್ಲ ಮತ್ತು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಎಲ್ಲ ಅಧಿಕಾರಿಗಳು ಹಾಜರಾಗಬೇಕು. ಪರೀಕ್ಷೆ ಕೊಠಡಿಯಲ್ಲಿ ಗಾಳಿ-ಬೆಳಕು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ವ್ಯವಸ್ಥಿತ ಹಾಗೂ ಸುಗಮವಾಗಿ ಪರೀಕ್ಷೆಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ ಸೇರಿದಂತೆ ಇತರೇ ಅಧಿಕಾರಿಗಳು ಉಪಸ್ಥಿತರಿದ್ದರು.
--ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ
ವಿಜಯಪುರ:ಡಿಪ್ಲೋಮಾ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 2024ನೇ ಸಾಲಿನ ಪ್ರವೇಶಕ್ಕೆ ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಜೂ.22 ರಂದು ನಗರದ ಬಾಲಕರ ಸರ್ಕಾರಿ ಪದವಿಪುರ್ವ ಕಾಲೇಜಿನಲ್ಲಿ ಜರುಗಲಿದ್ದು, ಮುನ್ನೆಚ್ಚರಿಕೆಯಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಮಧ್ಯಾಹ್ನ 12.30ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.