ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಆಯುಷ್ ಇಲಾಖೆ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶವು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರಿ ಯೋಗವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲು ಘೋಷಣೆ ಮಾಡಿ ಇಂದಿಗೆ 10 ವರ್ಷವಾಗಿದೆ ಎಂದರು.
ಯೋಗವನ್ನು ನಿಯಮ ಬದ್ಧವಾಗಿ ಪಾಲನೆ ಮಾಡುವುದರಿಂದ ಶಿಸ್ತು ಬದ್ಧ ಜೀವನ ನಡೆಸಿ, ಆರೋಗ್ಯದ ವೃದ್ಧಿ ಮಾಡಿಕೊಂಡು ಸಮಾಜ ಹಾಗೂ ಕುಟುಂಬವನ್ನು ಲವಲವಿಕೆಯಿಂದ ನೋಡಿಕೊಂಡು ಹೋಗಬಹುದು. ಕಳೆದು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ರೇಸ್ ಕೋರ್ಸ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಿ ಗಿನ್ನಿಸ್ ದಾಖಲೆಯನ್ನು ಮೈಸೂರು ಮಾಡಿತ್ತು ಎಂದು ಅವರು ಹೇಳಿದರು.ನಿರ್ದಿಷ್ಟವಾದ ದೇಹದ ಸಮಸ್ಯೆಗಳಿಗೆ ನಿರ್ದಿಷ್ಟವಾದ ಯೋಗ ಕ್ರಿಯೆಗಳನ್ನು ಮಾಡಿದ್ದಲ್ಲಿ ಆರೋಗ್ಯಯುತವಾಗಿರಲು ಸಾಧ್ಯ ಎಂಬುದನ್ನು ವೈದ್ಯಕೀಯ ಶಾಸ್ತ್ರ ಹಾಗೂ ತಜ್ಞರು ಹೇಳಿದ್ದಾರೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಪ್ರತಿ ವರ್ಷವೂ ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಭಾರತದಲ್ಲಿ ಆಧುನಿಕ ಕಾಲದ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ. ಅಂದಿನ ಕಾಲದ ಶ್ರೀತತ್ವ ನಿಧಿಯಲ್ಲಿ 108 ಆಸನಗಳನ್ನು ದಾಖಲೆ ಮಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯೋಗ ಅಭ್ಯಾಸ ಮೈಸೂರಿನಲ್ಲಿ ಶುರುವಾಗಿತ್ತು ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಯೋಗ ಎಂದರೆ ಮೈಸೂರು, ಮೈಸೂರು ಎಂದರೆ ಯೋಗ. ಅನೇಕ ಪ್ರಥಮಗಳಿಗೆ ಮೈಸೂರು, ಮಹಾರಾಜರು, ಮೈಸೂರು ಅರಮನೆ ಕಾರಣವಾಗಿದೆ. ಇದನ್ನು ಇಂದು ನೆನೆದುಕೊಳ್ಳಬೇಕು ಎಂದರು.
ಬೇರೆಯ ಕಾರ್ಯಕ್ರಮದಲ್ಲಿ ಜನಸಾಮಾನ್ಯರನ್ನು ಸೇರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತೇವೆ. ಆದರೆ, ಯೋಗಕ್ಕೆ ಆಹ್ವಾನ ನೀಡಿದರೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿ ಜನರು ಬರುತ್ತಾರೆ. ದಸರಾ ಸಂದರ್ಭದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಮತ್ತೊಮ್ಮೆ ಮೈಸೂರಿನಲ್ಲಿ ಯೋಗಾದ ಗಿನ್ನಿಸ್ ದಾಖಲೆ ನಿರ್ಮಿಸಲು ಜಿಲ್ಲಾಡಳಿತ ಕಾರ್ಯ ನಿರ್ವಹಿಸುತ್ತದೆ. ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ಮಾಡಿ, ಯೋಗ ದಸರಾವನ್ನು ಆಚರಣೆ ಮಾಡಿ ಯೋಗದ ಮಹತ್ವವನ್ನು ಎಲ್ಲೆಡೆ ಸಾರೋಣ ಎಂದರು.
- ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು