ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ ರು.1.25 ಕೋಟಿ ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ.
ಕುಶಾಲನಗರ : ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ ರು.1.25 ಕೋಟಿ ನಿವ್ವಳ ಲಾಭಗಳಿಸಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಸಾಲಿನಲ್ಲಿ ರು.237.78 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಪ್ರಸಕ್ತ ವರ್ಷ ರು.2.90 ಕೋಟಿಗಳಷ್ಡು ಹೆಚ್ಚಿನ ವಹಿವಾಟು ನಡೆಸಲಾಗಿದೆ. ಸಂಘವು ಕಳೆದ ಏಳು ವರ್ಷಗಳಿಂದಲೂ ಸತತ ಒಂದು ಕೋಟಿ ರು.ಗೂ ಮೀರಿದ ಲಾಭ ಗಳಿಸುತ್ತಿದೆ ಎಂದರು.
ಸಂಘದ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘವು 3604 ಸದಸ್ಯರಿಂದ ರು.358.39 ಲಕ್ಷಗಳ ಪಾಲು ಹಣ ಹೊಂದಿದೆ. ಸಂಘದ ದುಡಿಯುವ ಬಂಡವಾಳ ಕಳೆದ ಸಾಲಿನಲ್ಲಿ ರು.6006.74 ಲಕ್ಷ ಇದ್ದು, ಈ ಸಾಲಿನಲ್ಲಿ ದುಡಿಯುವ ಬಂಡವಾಳ ರು.6956.43 ಲಕ್ಷ ಗಳಷ್ಟು ಕ್ರೋಡಿಕರಿಸಿದೆ. ಸಂಘದಲ್ಲಿ ರೂ.813.21 ಲಕ್ಷ ಠೇವಣಿ ಸಂಗ್ರಹಿಸಿದೆ.
ಸಂಘವು ಪ್ರಾರಂಭಿಸಿದ ವನಿತಾ ಬಂಧು ಮತ್ತು ಜನಚೈತನ್ಯ ಎಂಬ ಜಂಟಿ ಬಾಧ್ಯತಾ ಗುಂಪು ಸಾಲ ಯೋಜನೆಯಡಿ ಒಟ್ಟು 887 ಮಹಿಳೆಯರಿಗೆ ಪ್ರಸಕ್ತ ಸಾಲಿನಲ್ಲಿ ರು.4.63 ಕೋಟಿ ಸಾಲ ವಿತರಿಸಿದ್ದು, ವಾರ್ಷಿಕ ಅಂತ್ಯಕ್ಕೆ ರು.4.36 ಕೋಟಿ ಬರಲು ಬಾಕಿಯಿದೆ ಎಂದರು.
ಪ್ರತಿ ಮಹಾಸಭೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ಶತಮಾನೋತ್ಸವ ಭವನ, ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರು ಬಳಿ 120 ಸೆಂಟ್ಸ್ ನಿವೇಶನವನ್ನು 2021ರಲ್ಲಿ ಖರೀಸಿದ್ದು, ಭವನ ಹಾಗೂ ವಾಹನ ನಿಲುಗಡೆಗೆ ಒಟ್ಟು 179.25 ಸೆಂಟ್ಸ್ ನಿವೇಶನವನ್ನು ಸಂಘಕ್ಕೆ ಖರೀದಿಸಲಾಗಿದೆ ಎಂದು ತಿಳಿಸಿದರು.
ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಪೂರ್ವಾಹ್ನ 11 ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್, ನಿರ್ದೇಶಕರಾದ ಪಿ.ಬಿ.ಯತೀಶ್, ಗಣೇಶ್, ನೇತ್ರಾವತಿ, ಕವಿತಾ ಮೋಹನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಇದ್ದರು.