ಗದಗ: ಹಲವಾರು ವರ್ಷಗಳಿಂದಲೂ ನಮ್ಮ ದೇಶದಲ್ಲಿ ಆಚರಣೆಯಲ್ಲಿರುವ ಯೋಗ ವಿದ್ಯೆಯು ಋಷಿ-ಮುನಿಗಳಿಂದ ಸನ್ಮಾರ್ಗ ಹಾಗೂ ಉತ್ತಮ ಜೀವನ ಶೈಲಿಯಾಗಿ ಬೆಳೆದು ಬಂದಿದೆ ಎಂದು ಡಾ. ಅಶೋಕ ಮತ್ತಿಗಟ್ಟಿ ಹೇಳಿದರು.
ಡಾ. ಸಾಯಿಪ್ರಕಾಶ ಮಡಿವಾಳರ, ಡಾ. ಸಂಜೀವ ನಾರಪ್ಪನವರ ಮಾತನಾಡಿ, ಆಯುಷ್ ಪದ್ಧತಿಗಳಾದ ಯೋಗ, ಆಯುರ್ವೇದ ಪ್ರಕೃತಿ ಚಿಕಿತ್ಸೆಗಳು ಮನುಷ್ಯನ ವಿವಿಧ ನೋವುಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲ ಉತ್ತಮ ಸಾಧನಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಲಯದ ಮೇಲ್ವಿಚಾರಕಿ ಸುಜಾತಾ ಪಾಟೀಲ ಮಾತನಾಡಿ, ಮನುಷ್ಯನ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಸೂಕ್ತವಾದ ಉತ್ತರ ಆಯುರ್ವೇದ ಶಾಸ್ತ್ರದಲ್ಲಿದೆ. ಯೋಗದಂತಹ ಪ್ರಕ್ರಿಯೆಗಳು ನಮ್ಮನ್ನು ಸದೃಢರನ್ನಾಗಿ ಮಾಡುತ್ತವೆ ಎಂದು ಹೇಳಿದರು.ಈ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿ ಗದಗ ಶಾಖೆಯ ಯೋಗಗುರು ಮುರಳೀಧರ ಶ್ಯಾವಿ ಅವರು, ಯೋಗಾಸನ ಹಾಗೂ ಅವುಗಳ ವಿಧಾನಗಳು, ಉಪಯೋಗಗಳನ್ನು ತಿಳಿಸಿ ಯೋಗ ಮಾಡುವ ವಿಧಾನಗಳನ್ನು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು.
ಪವಿತ್ರಾ ಕನಕಗಿರಿ ಹಾಗೂ ಟಿ. ವನಜಾಕ್ಷಿ ಪ್ರಾರ್ಥಿಸಿದರು. ಶಿಲ್ಪಾ ಲಮಾಣಿ ಸ್ವಾಗತಿಸಿದರು. ಪಾರ್ವತಿ ದೊಡ್ಡಮನಿ ಪರಿಚಯಿಸಿದರು. ಮುಕ್ತಾ ಹಡಪದ ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯ ಹೊಸಮನಿ ವಂದಿಸಿದರು.